ತುಮಕೂರು: ನಗರದ ಎಸ್‌ಐಟಿಯಲ್ಲಿ ಸೋಮವಾರ ಆರಂಭವಾದ 30ನೇ ರಾಜ್ಯಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿಯಲ್ಲಿ ಎಸ್‌ಐಟಿ ಪುರುಷರ ತಂಡ ಬೆಂಗಳೂರಿನ ನಾಡಿಗರ್ ತಾಂತ್ರಿಕ ವಿದ್ಯಾಲಯವನ್ನು 2:0 ಸೆಟ್‌ಗಳಿಂದ (25:10, 25:12) ಮಣಿಸಿ ಲೀಗ್‌ಗೆ ಪ್ರವೇಶ ಪಡೆಯಿತು.
ಮಹಿಳೆಯರ ವಿಭಾಗದಲ್ಲಿ ಅತಿಥೇಯ ಸಿದ್ದಗಂಗಾ ತಾಂತ್ರಿಕ ವಿದ್ಯಾಲಯವು ಎಚ್‌ಎಂಎಸ್‌ಐಟಿ ತಂಡದ ವಿರುದ್ಧ 2:0 ಸೆಟ್‌ಗಳಿಂದ (25:21, 25:17) ಜಯ ದಾಖಲಿಸಿತು.
ವಾಲಿಬಾಲ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಒಟ್ಟು 12 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ ಒಟ್ಟು 6 ತಂಡಗಳು ಪಾಲ್ಗೊಂಡಿವೆ.
ಫಲಿತಾಂಶ: ಪುರುಷರ ವಿಭಾಗ: ಬೆಂಗಳೂರಿನ ಸಂಭ್ರಮ ಕಾಲೇಜು- ಹುಬ್ಬಳ್ಳಿಯ ಬಿವಿಬಿ ಕಾಲೇಜು, 2:0 ಸೆಟ್ (25:18, 26:24).
ತುಮಕೂರು ಎಚ್‌ಎಂಎಸ್‌ಐಟಿ- ಧಾರವಾಡದ ಎಸ್‌ಡಿಎಂ, 2:1 ಸೆಟ್ (25:17, 22:25, 25:22).
ಮಂಗಳೂರಿನ ಆಳ್ವಾಸ್ ತಾಂತ್ರಿಕ ಕಾಲೇಜು- ಬೆಂಗಳೂರಿನ ಸಂಭ್ರಮ ಕಾಲೇಜು, 2:0 ಸೆಟ್ (25:22, 25:21).
ಬೆಂಗಳೂರಿನ ಶ್ರೀಕೃಷ್ಣದೇವರಾಯ ತಾಂತ್ರಿಕ ವಿದ್ಯಾಲಯ- ಬೆಂಗಳೂರಿನ ಆಚಾರ್ಯ ತಾಂತ್ರಿಕ ವಿದ್ಯಾಲಯ, 2:0 ಸೆಟ್ (25:23, 25:10).
ಮಹಿಳೆಯರ ವಿಭಾಗ: ಧಾರವಾಡದ ಎಸ್‌ಡಿಎಂ ತಾಂತ್ರಿಕ ವಿದ್ಯಾಲಯ- ತಿಪಟೂರಿನ ಕಲ್ಪತರು ತಾಂತ್ರಿಕ ವಿದ್ಯಾಲಯ, 2:1 ಸೆಟ್ (24:26, 25:12, 28:26).
ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ವಿದ್ಯಾಲಯ- ಹುಬ್ಬಳ್ಳಿಯ ಬಿವಿಬಿ ತಾಂತ್ರಿಕ ಕಾಲೇಜು, 2:0 ಸೆಟ್ (26:7, 25:3).
ಲೀಗ್ ಪ್ರವೇಶ: ಪುರುಷರ ವಿಭಾಗದಲ್ಲಿ ಲೀಗ್ ಹಂತಕ್ಕೆ ಅತಿಥೇಯ ಎಸ್‌ಐಟಿ, ಮಂಗಳೂರಿನ ಆಳ್ವಾಸ್, ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜು ಹಾಗೂ ಬೆಂಗಳೂರಿನ ಸರ್.ಎಂ.ವಿ.ತಾಂತ್ರಿಕ ಕಾಲೇಜು ಪ್ರವೇಶ ಪಡೆದಿದೆ.
ಮಹಿಳೆಯರ ವಿಭಾಗದಲ್ಲಿ ಲೀಗ್ ಹಂತಕ್ಕೆ ಅತಿಥೇಯ ಎಸ್‌ಐಟಿ, ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರಿನ ಎಂ.ಎಸ್‌ರಾಮಯ್ಯ ಹಾಗೂ ಧಾರವಾಡದ ಎಸ್‌ಡಿಎಂ ಕಾಲೇಜು ಪ್ರವೇಶ ಪಡೆದಿವೆ.
ಫೈನಲ್ಸ್: ಮಂಗಳವಾರ ಮಧ್ಯಾಹ್ನ 3.30ಕ್ಕೆ ಮಹಿಳೆಯರ ವಿಭಾಗದ ಫೈನಲ್ಸ್ ಮತ್ತು 4.30ಕ್ಕೆ ಪುರುಷರ ವಿಭಾಗದ ಫೈನಲ್ಸ್ ನಡೆಯಲಿದೆ.
ಸೋಲೊಪ್ಪಿಕೊಳ್ಳದಿರಿ:`ಆಟದಲ್ಲಿರಬಹುದು ಅಥವಾ ಜೀವನದಲ್ಲಿರಬಹುದು ಸೋಲು, ಗೆಲುವು ಅನಿವಾರ್ಯ. ಆದರೆ ಸೋಲನ್ನು ಮಾತ್ರ ಎಂದಿಗೂ ಸುಲಭವಾಗಿ ಸ್ವೀಕರಿಸಬೇಡಿ~ ಎಂದು ಅಂತರರಾಷ್ಟ್ರೀಯ ವಾಲಿಬಾಲ್ ಪಟು ಎಂ.ಎಸ್.ಬಾಲಾಜಿ ತಿಳಿಸಿದರು.
ಇಲ್ಲಿನ ಸಿದ್ದಗಂಗಾ ತಾಂತ್ರಿಕ ಕಾಲೇಜು ಆಶ್ರಯದಲ್ಲಿ ಸೋಮವಾರ ನಡೆದ 30ನೇ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ಶಿವಕುಮಾರಯ್ಯ ಪಂದ್ಯಾವಳಿ ಉದ್ಘಾಟಿಸಿದರು. ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್ .ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ತಾಂತ್ರಿಕ ಕಾಲೇಜುಗಳಿಂದ 20 ಕ್ಕೂ ಹೆಚ್ಚು ಪುರುಷರ ತಂಡಗಳು ಹಾಗೂ 10 ಮಹಿಳಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.