ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ವಿದ್ಯಾರ್ಥಿಗಳು ತಾಲ್ಲೂಕಿನ ರಂಗಾಪುರದಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ಪಾಲ್ಗೊಂಡು ಗ್ರಾಮ ಪಂಚಾಯಿತಿ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದರು.
ಪ್ರಭಾರಿ ಅಧ್ಯಕ್ಷ ಆರ್.ಎಸ್.ದೇವರಾಜು ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಹಾಗೂ ಎಸ್‌ಜಿಎಸ್‌ವೈ ಯೋಜನೆ ಸಂಘಗಳ ಆಯ್ಕೆ ವಿಷಯ ಚರ್ಚೆಯಾಯಿತು.
ಉದ್ಯೋಗಖಾತ್ರಿ ಯೋಜನೆ ಬಳಸಿ ಕ್ರಿಯಾಯೋಜನೆ ರೂಪಿಸುವುದು ಸೇರಿದಂತೆ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಬಿಎ (ಎಚ್‌ಇಪಿ) ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿ ಕಾರ್ಯವಿಧಾನ ತಿಳಿದುಕೊಂಡರು. ವಿದ್ಯಾರ್ಥಿನಿ ಎಂ.ಎಸ್.ಮಹಾಲಕ್ಷ್ಮಿ ಪ್ರಭಾರಿ ಅಧ್ಯಕ್ಷರನ್ನು ಸಂದರ್ಶಿಸಿ ಗ್ರಾಮ ಪಂಚಾಯಿತಿ ಯೋಜನೆ, ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಪಡೆದರು. ಉಳಿದ ವಿದ್ಯಾರ್ಥಿಗಳು ಪ್ರಶ್ನೋತ್ತರದ ಮೂಲಕ ಸಂದೇಶ ಬಗೆಹರಿಸಿಕೊಂಡರು.
ಗ್ರಾ.ಪಂ.ಸದಸ್ಯರು, ನೋಡಲ್ ಅಧಿಕಾರಿ ನಂದೀಶ್, ಸಿಬ್ಬಂದಿಗಳಾದ ಜಗದೀಶ್, ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು. ಕಾಲೇಜು ತಂಡದಲ್ಲಿ ಉಪನ್ಯಾಸಕರಾದ ಡಾ. ಹೊನ್ನಾಂಜನಯ್ಯ, ಚಿನ್ನಸ್ವಾಮಿ, ಷಣ್ಮುಖಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.