ADVERTISEMENT

ವಿಮಾ ಯೋಜನೆ ದುಡ್ಡೇ ಮಂಗಮಾಯ!

ಪ್ರಜಾವಾಣಿ ವಿಶೇಷ
Published 5 ಜುಲೈ 2013, 6:30 IST
Last Updated 5 ಜುಲೈ 2013, 6:30 IST
ತುರುವೇಕೆರೆಯಲ್ಲಿ ಮೈಕ್ರೋ ವಿಮಾ ಯೋಜನೆಯ ಪಾಲಿಸಿದಾರರು, ಮಾರಾಟ ಪ್ರತಿನಿಧಿಗಳು ಗುರುವಾರ ಮಧ್ಯವರ್ತಿ ಸಂಸ್ಥೆಗೆ ತಾವು ವಿಮಾ ಕಂತು ಸಂದಾಯ ಮಾಡಿರುವ ಪಾಸ್ ಪುಸ್ತಕ ಪ್ರದರ್ಶಿಸಿದರು.
ತುರುವೇಕೆರೆಯಲ್ಲಿ ಮೈಕ್ರೋ ವಿಮಾ ಯೋಜನೆಯ ಪಾಲಿಸಿದಾರರು, ಮಾರಾಟ ಪ್ರತಿನಿಧಿಗಳು ಗುರುವಾರ ಮಧ್ಯವರ್ತಿ ಸಂಸ್ಥೆಗೆ ತಾವು ವಿಮಾ ಕಂತು ಸಂದಾಯ ಮಾಡಿರುವ ಪಾಸ್ ಪುಸ್ತಕ ಪ್ರದರ್ಶಿಸಿದರು.   

ತುರುವೇಕೆರೆ: ಭಾರತೀಯ ಜೀವ ವಿಮಾ ನಿಗಮದ ಜೀವನ್ ಮಧುರ್ ಮೈಕ್ರೋ ವಿಮಾ ಯೋಜನೆಯಡಿ ಹಣ ತೊಡಗಿಸಿದ್ದ ತಾಲ್ಲೂಕಿನ ಸುಮಾರು 8 ಸಾವಿರ ಗ್ರಾಮೀಣ ಹೂಡಿಕೆದಾರ ಕೋಟ್ಯಂತರ ರೂಪಾಯಿ ಹಣವನ್ನು ಮಧ್ಯವರ್ತಿ ಸಂಸ್ಥೆ ಗುಳುಂ ಎನಿಸಿದ್ದು, ಪಾಲಿಸಿದಾರರು ಸತ್ತರಷ್ಟೇ ದುಡ್ಡು ಎಂಬ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ.

2006ರಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಬಡ ಜನರಿಗೆ ಸಣ್ಣ ಉಳಿತಾಯದ ಮೂಲಕ ವಿಮೆ ಸೌಲಭ್ಯ ಕಲ್ಪಿಸುವ ಮೈಕ್ರೋ ವಿಮಾ ಯೋಜನೆ ಜಾರಿಗೆ ತಂದಿತ್ತು. ಭಾರತೀಯ ಜೀವ ವಿಮಾ ನಿಗಮ ಸರ್ಕಾರೇತರ ಸಂಸ್ಥೆಗಳ  ಮೂಲಕ ಸದರಿ ಪಾಲಿಸಿಯನ್ನು ಬಡ ಜನರಿಗೆ ಮಾರುವ ಯೋಜನೆ ರೂಪಿಸಿತ್ತು.

ಆಕಸ್ಮಿಕ ಮರಣ, ಅಪಘಾತ, ಅಂಗವೈಕಲ್ಯದ ಸಂದರ್ಭ ಬಡವರ ನೆರವಿಗೆ ಬರಲೆಂದೇ ಈ ಯೋಜನೆಯನ್ನು ವಿಶೇಷವಾಗಿ ರೂಪಿಸಲಾಗಿತ್ತು. ತಾಲ್ಲೂಕಿನಲ್ಲಿ `ಸಮನ್ವಯ' ಎಂಬ ಸರ್ಕಾರೇತರ ಸಂಸ್ಥೆ ನೂರಾರು ಪ್ರತಿನಿಧಿಗಳ ಮೂಲಕ ಈ ವಿಮೆಯ ಮಾರಾಟ ಮಾಡಿತ್ತು. ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಶೇ 3 ಲಾಭಾಂಶದ ಆಧಾರದ ಮೇಲೆ ಈ ವಿಮಾ ಪಾಲಿಸಿ ಮಾರಾಟಕ್ಕೆ ಮುಂದಾಗಿದ್ದರು.

ಯೋಜನೆಯಂತೆ ಪಾಲಿಸಿದಾರರು ಪ್ರತಿ ತಿಂಗಳು ನಿರ್ದಿಷ್ಟ ಕಂತನ್ನು ತಮ್ಮ ಪ್ರತಿನಿಧಿಗೆ ತಲುಪಿಸಬೇಕು. ಪ್ರತಿನಿಧಿಗಳು ಇದನ್ನು ಸಮನ್ವಯ ಕೇಂದ್ರಕ್ಕೆ ಕಟ್ಟಬೇಕು. ಸಮನ್ವಯ ಕೇಂದ್ರ ಒಟ್ಟಾರೆ ಸಂಗ್ರಹವನ್ನು ಬೆಂಗಳೂರಿನ ಮೈಕ್ರೋ ವಿಮಾ ವಿಭಾಗದ ಕಚೇರಿಗೆ ಪಾವತಿಸಬೇಕು.

ಬಹುತೇಕ ಪಾಲಿಸಿದಾರರು 2009ರಲ್ಲಿ ಪಾಲಿಸಿ ಪಡೆದಿದ್ದಾರೆ. ಆದರೆ ಮಧ್ಯವರ್ತಿಯಾದ ಸಮನ್ವಯ ಸಂಸ್ಥೆ 2010ರ ಮಾರ್ಚ್‌ನಿಂದಲೇ ಪಾಲಿಸಿದಾರರ ಪಾಸ್ ಪುಸ್ತಕದಲ್ಲಿ ಪಾವತಿ ನಮೂದಿಸಿ ಜೀವ ವಿಮಾ ನಿಗಮಕ್ಕೆ ದುಡ್ಡು ಕಟ್ಟದೆ ವಂಚನೆ ಮಾಡಿದೆ. ಇದರ ಅರಿವಿಲ್ಲದ ಪಾಲಿಸಿದಾರರು ಕಳೆದ ಎರಡು ವರ್ಷಗಳಿಂದ  ಪ್ರತಿನಿಧಿಗಳ ಮೂಲಕ ಪ್ರತಿ ತಿಂಗಳು 100, 500, 1000 ಹಣ ಪಾವತಿಸುತ್ತಲೇ ಬಂದಿದ್ದಾರೆ.

ಕಳೆದ ವಾರ ಪಾಲಿಸಿದಾರರೊಬ್ಬರು ತಮ್ಮ ಪಾಲಿಸಿ ಹಣದ ದುಡ್ಡು ವಾಪಸ್ ಪಡೆಯಲು ಹೋದಾಗ ಮಧ್ಯವರ್ತಿ ಸಂಸ್ಥೆ ಜೀವ ವಿಮಾ ನಿಗಮಕ್ಕೆ ಹಣವನ್ನೇ ಪಾವತಿಸದಿರುವ ಅಂಶ ಬೆಳಕಿಗೆ ಬಂದಿದೆ. ಅಷ್ಟರಲ್ಲೇ ಮಧ್ಯವರ್ತಿ ಸಂಸ್ಥೆಯ ಮಾಲೀಕ ಮೋಹನ್ ಮತ್ತು ವ್ಯವಸ್ಥಾಪಕರಾದ ರಾಜು, ಹರೀಶ್, ಪರಮೇಶ್ ಕಚೇರಿಗೆ ಬೀಗ ಹಾಕಿ ಜಾಗ ಖಾಲಿ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಪಾಲಿಸಿದಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಪ್ರತಿ ಪಾಲಿಸಿದಾರ ಪಾವತಿಸಿರುವ ಹಣ ಸರಾಸರಿ ತಿಂಗಳಿಗೆ ರೂ. 200 ಎಂದರೂ 8000 ಪಾಲಿಸಿದಾರರು ವರ್ಷಕ್ಕೆ ರೂ.1.92 ಕೋಟಿ ಪಾವತಿಸಿರುತ್ತಾರೆ. ಜೀವ ವಿಮಾ ನಿಗಮಕ್ಕೆ ಎರಡು ವರ್ಷಗಳ ಕಂತು ಸಂದಾಯವಾಗಿಲ್ಲವೆಂದರೂ ಪಾಲಿಸಿದಾರರಿಗೆ ರೂ.3.84 ಕೋಟಿ ವಂಚನೆ ಆಗಿದೆ.

ಇಷ್ಟೆಲ್ಲ ಹಣವನ್ನು ಮಧ್ಯವರ್ತಿ ಸಂಸ್ಥೆ ಪಾವತಿಸದಿದ್ದರೂ; ಎಲ್‌ಐಸಿ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಬುಧವಾರವಷ್ಟೇ ಮಧ್ಯವರ್ತಿ ಸಂಸ್ಥೆಗಳಿಗೆ ಹಣ ಪಾವತಿ ಮಾಡಬಾರದು ಎಂದು ಜಾಹೀರಾತು ಮೂಲಕ ಪತ್ರಿಕೆಗಳಲ್ಲಿ ಎಚ್ಚರಿಕೆ ನೀಡಿರುವ ಎಲ್‌ಐಸಿ ಈ ಕೆಲಸವನ್ನು ಮುಂಚೆಯೇ ಏಕೆ ಮಾಡಿಲ್ಲ? ಎಂಬುದು ಅನುಮಾನ ಮೂಡಿಸುತ್ತದೆ.

ಈ ವಿಮಾ ಯೋಜನೆಯ ಷರತ್ತಿನ ಪ್ರಕಾರ ಕನಿಷ್ಠ ಎರಡು ವರ್ಷ ಪೂರಾ ವಿಮೆ ಹಣ ಪಾವತಿ ಮಾಡಿರಬೇಕು. ಹಾಗಾದಾಗ ಮಾತ್ರ ಕಟ್ಟಿರುವ ದುಡ್ಡು ವಾಪಸ್ ಬರುತ್ತದೆ. ಆದರೆ ಬಹುತೇಕ ಪಾಲಿಸಿಗಳ ಹಣವನ್ನು ಮಧ್ಯವರ್ತಿ ಸಂಸ್ಥೆ ಎರಡು ವರ್ಷ ಕಟ್ಟಿಲ್ಲ. ಹಾಗಾಗಿ ಅವರಿಗೆ ದುಡ್ಡು ಬರುವುದು ಅನುಮಾನ.

ಪಾಸ್‌ಬುಕ್‌ನಲ್ಲಿ ಎಂಟ್ರಿ ಇದ್ದರೆ ಸತ್ತರೆ ದುಡ್ಡು ಸಿಗುತ್ತೆ ಅಂತ ಎಲ್‌ಐಸಿಯೋರು ಹೇಳ್ತಾರೆ. ದುಡ್ಡಿಗೋಸ್ಕರ  ನಾವು ವಿಷ ಕುಡಿದು ಸಾಯಬೇಕಾ? ಎಂದು ದುಡ್ಡು ಕಳೆದುಕೊಂಡಿರುವ ರಿಜ್ವಾನ್ ತಾಜ್ ಕಣ್ಣೀರು ಹಾಕುತ್ತಾರೆ.

ಮೂರು ರೂಪಾಯಿ ಆಸೆಗೆ ದುಡ್ಡು ಸಂಗ್ರಹಿಸಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ದುಡ್ಡು ಕೊಡು ಇಲ್ಲ ಅಂದ್ರೆ ಮಾಂಗಲ್ಯ ಬಿಚ್ಚಿಡು ಎಂದು ಪಾಲಿಸಿದಾರರು ಬೀದಿಯಲ್ಲಿ ನಿಂತು ಗಲಾಟೆ ಮಾಡುತ್ತಾರೆ ಎಂದು ಗೋಳು ತೋಡಿಕೊಂಡವರು ಅಂಗನವಾಡಿ ಕಾರ್ಯಕರ್ತೆ ಕಮಲಮ್ಮ.

ಒಬ್ಬೊಬ್ಬ ಪ್ರತಿನಿಧಿಯೂ  100, 200, 500 ಪಾಲಿಸಿಗಳನ್ನು ಮಾರಿ ಈಗ ತಲೆ ಮರೆಸಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಈ ಕೂಡಲೇ ಎಲ್‌ಐಸಿ ನಮ್ಮ ಹಣ ವಾಪಸ್ ಕೊಡದಿದ್ದರೆ ಜುಲೈ 15ರಂದು ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿನಿಧಿಗಳು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.