ತುರುವೇಕೆರೆ: ತಾಲ್ಲೂಕಿನಲ್ಲಿ ಶುಕ್ರವಾರ ಅಗ್ನಿದೇವನದೇ ಆರ್ಭಟ! ಮೂರು ಕಡೆ ಸಂಭವಿಸಿದ ಪ್ರತ್ಯೇಕ ಬೆಂಕಿ ಆಕಸ್ಮಿಕದಲ್ಲಿ ಬೆಂಕಿಯ ಕೆನ್ನಾಲಿಗೆಗಳು ಲಕ್ಷಾಂತರ ರೂ ಬೆಲೆಯ ಮರಗಿಡಗಳನ್ನು ಆಪೋಶನ ತೆಗೆದುಕೊಂಡಿವೆ.
ಶುಕ್ರವಾರ ಬೆಳಿಗ್ಗೆ ಮಾಯಸಂದ್ರ ಹೋಬಳಿ ಮಲ್ಲೂರಿನ ಶಾಂತಕುಮಾರ್ ಎಂಬುವರ ತೋಟಕ್ಕೆ ಬೆಂಕಿ ತಗುಲಿ ಸುಮಾರು 15 ತೆಂಗಿನಮರಗಳು ಸಂಪೂರ್ಣ ಸುಟ್ಟು ಹೋಗಿವೆ. ಬಿದಿರುಮೆಳೆಯ ಘರ್ಷಣೆಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸುಮಾರು 1.5ಲಕ್ಷ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಮಧ್ಯಾಹ್ನ ತಾಲ್ಲೂಕಿನ ಸೀಗೇಹಳ್ಳಿ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದ್ದು, ಸುಮಾರು 85 ಎಕರೆ ಪ್ರದೇಶದ ಕಾಡಿನಲ್ಲಿ 15-20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮರಗಳು ಬೆಂಕಿಗಾಹುತಿಯಾಗಿವೆ ಎಂದು ಹೇಳಲಾಗಿದೆ. ಆ ಭಾಗದ ಗ್ರಾಮಸ್ಥರೊಬ್ಬರು ದೂರವಾಣಿ ಕರೆ ಮಾಡಿ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆಯ ಮರ ಸುಟ್ಟು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಶುಕ್ರವಾರ ಸಂಜೆ ಚಿಮನಹಳ್ಳಿ ಮತ್ತು ಬಿ.ಸಿ.ಕಾವಲ್‌ಗೆ ಹೊಂದಿಕೊಂಡಿರುವ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತೀವ್ರವಾಗಿ ವ್ಯಾಪಿಸಿದ ಬೆಂಕಿಗೆ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮರಗಿಡಗಳು ಬಲಿಯಾಗಿವೆ. ಸುಮಾರು 2.5 ಲಕ್ಷಕ್ಕೂ ಹೆಚ್ಚು ಬೆಲೆಯ ಮರಗಿಡ ಸುಟ್ಟು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಗ್ರಾಮಸ್ಥರಾದ ಪುಟ್ಟರಾಜ್, ನಾಗರಾಜು ಮುಂತಾದವರ ಸಹಾಯದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಮಧ್ಯ ರಾತ್ರಿ ವೇಳೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಭಾಗದ ಅರಣ್ಯ ಪ್ರದೇಶದಲ್ಲಿ ಕಳೆದೆರಡು ತಿಂಗಳಲ್ಲಿ ಮೂರನೇ ಬಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ಬಗ್ಗೆ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.