ADVERTISEMENT

ವಿವೇಕಾನಂದರಿಂದ ನೈತಿಕ ಜಾಗೃತಿ: ಸಚಿವ ಆಚಾರ್ಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 8:15 IST
Last Updated 24 ಜನವರಿ 2012, 8:15 IST

ತುಮಕೂರು : ಆಧ್ಯಾತ್ಮ ಜ್ಞಾನ ವಿಕಾಸ, ನೈತಿಕ ಶಕ್ತಿ ಜಾಗೃತಿಗೆ ಸ್ವಾಮಿ ವಿವೇಕಾನಂದರು ಹೆಚ್ಚು ಒತ್ತು ನೀಡಿದ್ದರು ಎಂದು ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಇಲ್ಲಿ ಸೋಮವಾರ ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವ ವರ್ಷಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಬದಲಾವಣೆಯ ಕಾಲಘಟ್ಟದಲ್ಲಿ ನಿಂತು ಆಲೋಚಿಸಿದಾಗ ವಿವೇಕ ಪ್ರಭೆಯ ಪ್ರಾಮುಖ್ಯತೆ ಅರಿವಾಗುತ್ತದೆ ಎಂದು ತಿಳಿಸಿದರು.

ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಆಯಾಮಗಳ ಸೂಕ್ತ ಸಂಯೋಜನೆಯಿಂದ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯ. ವಿಚಾರಗಳನ್ನು ಮಾತನಾಡುವುದಕ್ಕಿಂತ ಬದುಕಿನಲ್ಲಿ ಅಳವಡಿಸಿ ಕೊಂಡು ಆಚರಿಸುವುದು ಮುಖ್ಯ ಎಂದು ಕಿವಿ ಮಾತು ಹೇಳಿದರು.

ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ತೀವ್ರ ಅತೃಪ್ತಿಯಿಂದ ಉನ್ನತವಾದುದ್ದನ್ನು ಸಾಧಿಸುವ ಛಲ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಪದ್ಧತಿ, ಪಠ್ಯಕ್ರಮದಲ್ಲಿ ಆಮೂಲಾಗ್ರ ಬದಲಾಗಬೇಕಿದೆ. ವಿದ್ಯಾರ್ಥಿಯೊಬ್ಬ ಓದಿದ ಶೇ. 90ರಷ್ಟು ವಿಷಯಗಳು ಅವನ ಜೀವನದಲ್ಲಿ ಒಮ್ಮೆಯೂ ಬಳಕೆಗೆ ಬರುವುದಿಲ್ಲ. ಇಂಥ ಪಠ್ಯಕ್ರಮ ಯಾರಿಗೆ ಬೇಕಾಗಿದೆ? ಎಂದು ಪ್ರಶ್ನಿಸಿದರು.

ಬೆಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಹರ್ಷಾನಂದ ಸ್ವಾಮೀಜಿ ವಿದ್ಯಾರ್ಥಿ ಬದುಕಿನ ಕುರಿತು ವಿಶೇಷ ಉಪನ್ಯಾಸ ನೀಡಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಕುಲಪತಿ ಡಾ.ಎಸ್.ಸಿ.ಶರ್ಮಾ, ಸಿದ್ದಗಂಗ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ, ಭಾರತೀಯ ಎರಕ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಡಾ.ಸುಂದರ ಮೂರ್ತಿ, ಸಣ್ಣ ನೀರಾವರಿ ಯೋಜನಾ ಇಲಾಖೆ ಕಾರ್ಯದರ್ಶಿ ಶ್ರೀನಿವಾಸಾಚಾರಿ ಉಪಸ್ಥಿ ತರಿದ್ದರು.

ಬಹುಮಾನ: ವಿವೇಕಾನಂದರ ಬದುಕು ಮತ್ತು ಚಿಂತನೆ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಯ 56 ಶಾಲೆಗಳು ಪಾಲ್ಗೊಂಡಿದ್ದವು.

ತುಮಕೂರು ಚೇತನಾ ವಿದ್ಯಾಮಂದಿರದ ವಿ.ಜೆ.ಹರ್ಷ (ಪ್ರಥಮ), ಮಧುಗಿರಿ ತಾಲ್ಲೂಕು ತಂದೂಟಿ ಸರ್ಕಾರಿ ಪ್ರೌಢಶಾಲೆ ಸಿದ್ದೇಶ್ (ದ್ವಿತೀಯ), ತುಮಕೂರು ಅಂಕುರ್ ಶಾಲೆ ಲಕ್ಷ್ಮಿಪಂಡಿತ್ (ತೃತೀಯ).

ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ತುಮಕೂರು ಸಿದ್ದಲಿಂಗೇಶ್ವರ ವೇದ ಸಂಸ್ಕೃತ ಪಾಠಶಾಲೆ ಉಮಾ ಮಹೇಶ್ವರ (ಪ್ರಥಮ), ಎಸ್‌ಐಟಿ ಮಾನಸ (ದ್ವಿತೀಯ), ಬಾಲಚಂದ್ರ (ತೃತೀಯ) ಬಹುಮಾನ ಪಡೆದರು. ಸಾರ್ವಜನಿಕ ಭಾಷಣ ಸ್ಪರ್ಧೆಯಲ್ಲಿ 90 ಮಂದಿ ಪಾಲ್ಗೊಂಡಿದ್ದರು. ಎಂ.ವಿ.ನಂಜಪ್ಪ (ಪ್ರಥಮ), ಆರತಿ ಆನಂದ್ (ದ್ವಿತೀಯ), ಆರ್.ವೇದಾವತಿ (ತೃತೀಯ) ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.