ADVERTISEMENT

ಶಾಸಕರ ನಿರ್ಧಾರಕ್ಕೆ ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:10 IST
Last Updated 3 ಫೆಬ್ರುವರಿ 2011, 6:10 IST

ತಿಪಟೂರು: ತಾಲ್ಲೂಕು ಪಂಚಾಯಿತಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಲು ತೀವ್ರ ಪೈಪೋಟಿ ಕಾಣದಿದ್ದರೂ; ಆಕಾಂಕ್ಷಿಗಳು ತಮ್ಮ ಅಭಿಲಾಷೆಯನ್ನು ಮುಖಂಡರಿಗೆ ಮೆದುವಾಗಿ ರವಾನಿಸಿದ್ದಾರೆ.ಒಟ್ಟು 17 ಸ್ಥಾನಗಳಿರುವ ತಾಲ್ಲೂಕು ಪಂಚಾಯಿತಿಯಲ್ಲಿ 9 ಸ್ಥಾನ ಗಳಿಸಿರುವ ಬಿಜೆಪಿ ಇದೇ ಮೊದಲ ಬಾರಿಗೆ ಆಡಳಿತ ಹಿಡಿಯುವ ತವಕದಲ್ಲಿದೆ. ಆದರೆ ಆ ಸ್ಥಾನಗಳಿಗೆ ಕೂರುವರು ಯಾರು ಎಂಬ ಕಾತರ ಬಿಜೆಪಿ ಪಕ್ಷದೊಳಗೂ ಅಷ್ಟಾಗಿ ಕಾಣಿಸುತ್ತಿಲ್ಲ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ “ಎ’ಗೆ ಮೀಸಲಾಗಿದ್ದು, ಇದಕ್ಕೆ ಅರ್ಹರಾದ ತಲಾ ಇಬ್ಬರು ಬಿಜೆಪಿಯಲ್ಲಿದ್ದಾರೆ. ಸಾಮಾನ್ಯ ಮಹಿಳೆ ಸ್ಥಾನದಿಂದ ಆಯ್ಕೆಯಾಗಿರುವ ಸಾರ್ಥವಳ್ಳಿಯ ವಸಂತ ಮತ್ತು ಬಿಳಿಗೆರೆಯ ಬಿ.ಎಸ್.ಪುಷ್ಪಾವತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿತರಲ್ಲಿ ಒಬಿಸಿ ‘ಎ’ಯಿಂದ ಆಯ್ಕೆಯಾದ ಏಕೈಕ ಸದಸ್ಯ ಹಾಲ್ಕುರಿಕೆ ಕ್ಷೇತ್ರದ ಎನ್.ಭಾನುಪ್ರಶಾಂತ್ ಜತೆಯಲ್ಲಿ ಮತ್ತೊಬ್ಬರ ಹೆಸರು ಕೇಳಿ ಬರುತ್ತಿದೆ. ಹಿಂದುಳಿದ ವರ್ಗ “ಎ’ ಮಹಿಳಾ ಸ್ಥಾನದಿಂದ ಬಿಜೆಪಿ ಸದಸ್ಯರಾಗಿರುವ ಮತ್ತಿಹಳ್ಳಿ ಕ್ಷೇತ್ರದ ಶಿವಗಂಗಮ್ಮ ಕೂಡ ನಿಗದಿತ ಉಪಾಧ್ಯಕ್ಷ ಸ್ಥಾನದ ಮೀಸಲಿಗೆ ಅರ್ಹರಾಗಿದ್ದಾರೆ.

ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡರಲ್ಲೂ ತಲಾ ಇಬ್ಬರು ಮಾತ್ರ ಆಕಾಂಕ್ಷಿಗಳಿದ್ದು, ಪೈಪೋಟಿ ಹೆಚ್ಚಾಗಿ ಕಂಡುಬಂದಿಲ್ಲ. ಶಾಸಕ ಬಿ.ಸಿ.ನಾಗೇಶ್ ಕೈಗೊಳ್ಳುವ ತೀರ್ಮಾನವೇ ಅಂತಿಮವಾದ್ದರಿಂದ ಅವರ ಮನವೊಲಿಕೆಯಲ್ಲಿ ಸದಸ್ಯರು ತೊಡಗಿದ್ದಾರೆ. ಯಾವುದೇ ಗೊಂದಲ, ಅಪಸ್ವರ, ಆಕ್ಷೇಪಕ್ಕೆ ಆಸ್ಪದವಾಗದಂತೆ ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ಶಾಸಕರಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆ ಮಾಡಿ ಆಕಾಂಕ್ಷಿಗಳಿಬ್ಬರಿಗೂ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಸಾರ್ಥವಳ್ಳಿಯಿಂದ ಆಯ್ಕೆಯಾಗಿರುವ ಹರಿಸಮುದ್ರದ ವಸಂತ ಅವರ ಪತಿ ತಾ.ಪಂ. ಮಾಜಿ ಸದಸ್ಯರಾಗಿದ್ದು, ಸಕ್ರಿಯ ರಾಜಕಾರಣಿಯೂ ಹೌದು. ಈ ಮಾನದಂಡ ಪರಿಗಣನೆಗೆ ಬಂದರೆ ವಸಂತ ಅವರು ಮೊದಲ ಕಂತಿನಲ್ಲಿ ಅಧ್ಯಕ್ಷರಾಗುವುದು ನಿಶ್ಚಿತ.

ಆದರೆ ಈಗಾಗಲೇ ಹೊನ್ನವಳ್ಳಿ ವ್ಯಾಪ್ತಿಯಲ್ಲಿ ಬಿಜೆಪಿ ಬಲವಾಗಿರುವುದರಿಂದ ಹೇಳಿಕೊಳ್ಳುವಷ್ಟು ಪಕ್ಷ ಪ್ರಾಬಲ್ಯವಿಲ್ಲದ ಬಿಳಿಗೆರೆ ವ್ಯಾಪ್ತಿಯ ಸದಸ್ಯರಿಗೆ ಮೊದಲ ಅವಕಾಶ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡುವ ಲೆಕ್ಕಾಚಾರವೂ ನಡೆದಿದೆ.ಇನ್ನೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ವಿಷಯ ಬಿಜೆಪಿಯೊಳಗೇ ಗೊಂದಲ ಸೃಷ್ಟಿಸಿದೆ ಎಂದು ಮೂಲಗಳು ತಿಳಿಸಿವೆ. ಸಾರ್ಥವಳ್ಳಿ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಿ ಹಾಲ್ಕುರಿಕೆ ಸದಸ್ಯರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಕೂರಿಸಿದರೆ ಎರಡೂ ಅಕ್ಕಪಕ್ಕದ ಕ್ಷೇತ್ರಗಳಾಗುವುದರಿಂದ ಅದು ಅಷ್ಟೇನು ಒಳಿತಲ್ಲ ಎಂಬ ಅಭಿಪ್ರಾಯ ಪಕ್ಷದಲ್ಲಿದೆ.

ಹಾಗಾಗಿ ಒಬಿಸಿ “ಎ’ ಮಹಿಳೆ ಸ್ಥಾನದಿಂದ ಆಯ್ಕೆಯಾಗಿರುವ ಮತ್ತಿಹಳ್ಳಿ ಸದಸ್ಯೆಗೆ ಅವಕಾಶ ನೀಡುವ ಚರ್ಚೆಯೂ ನಡೆಯುತ್ತಿದೆ. ಆದರೆ ಈ ಸಾಧ್ಯತೆಯಲ್ಲೂ ತರ್ಕ, ತೊಡಕು ಎದುರಾಗುತ್ತದೆ. ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಮಹಿಳೆಯರನ್ನೇ ಕೂರಿಸಿದಂತಾಗುತ್ತದೆ. ಹಾಗೊಮ್ಮೆ ಬಿಳಿಗೆರೆ ಸದಸ್ಯೆಯನ್ನು ಮೊದಲು ಅಧ್ಯಕ್ಷರನ್ನಾಗಿ ಮಾಡಿದರೆ ಹಾಲ್ಕುರಿಕೆ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೇರುವುದು ಸಲೀಸಾಗಬಹುದು. ಒಟ್ಟಾರೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಷಯವನ್ನು ಬಿಜೆಪಿ ಸಲೀಸಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.