ADVERTISEMENT

ಶಾಸಕರ ಸಂಬಂಧಿ ಗಾರ್ಮೆಂಟ್ಸ್‌ನಿಂದ ಮಾಲಿನ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 9:15 IST
Last Updated 25 ಅಕ್ಟೋಬರ್ 2017, 9:15 IST

ತುಮಕೂರು: ’ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ಶಾಸಕ ರಫೀಕ್‌ ಅಹಮ್ಮದ್‌ ಅವರ ಸಂಬಂಧಿಯೊಬ್ಬರು ಸ್ಥಾಪಿಸಿರುವ ಗಾರ್ಮೆಂಟ್ಸ್‌ನಿಂದ ಮಾಲಿನ್ಯ ಉಂಟಾಗುತ್ತಿದೆ. ಗಾರ್ಮೆಂಟ್ಸ್‌ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಒತ್ತಾಯಿಸಿದರು.

‘ಮೂರು ವರ್ಷಗಳ ಹಿಂದೆ ಇದನ್ನು ಸ್ಥಾಪಿಸಲಾಯಿತು. ಕಾನೂನಿನ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಮಾಲಿನ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಹಾಗೂ ಕೈಗಾರಿಕಾ ತ್ಯಾಜ್ಯ ನೀರು ಘಟಕ (ಇಟಿಪಿ) ಸಹ ನಿರ್ಮಿಸಿಲ್ಲ. ಗಾರ್ಮೆಂಟ್ಸ್‌ಗೆ ಬಳಕೆ ಮಾಡಿದ ನೀರನ್ನು ರಾಜಕಾಲುವೆಗೆ ಹರಿಸಲಾಗುತ್ತಿದೆ. ಇದೇ ನೀರು ಅಮಾನಿಕೆರೆ ಸೇರುತ್ತಿದೆ’ ಎಂದು ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಅಲ್ಲಿನ ಜನರು ಸಂಕಷ್ಟದಲ್ಲಿ ಬದುಕುತ್ತಿದ್ದು, ರೋಗಗಳಿಗೆ ತುತ್ತಾಗಿದ್ದಾರೆ. ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ‘15 ರಿಂದ 20 ಅಡಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಆವರಣ ಗೋಡೆ ನಿರ್ಮಾಣ ಮಾಡಲಾಗಿದೆ. ಕೆಐಡಿಬಿ ಪಂಪಹೌಸ್‌ ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಮುಖಂಡ ಎಂ.ಬಿ.ನಂದೀಶ್‌ ಮಾತನಾಡಿ, ‘ಈಚೆಗೆ ಗುಬ್ಬಿ ತಾಲ್ಲೂಕಿನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದವರನ್ನು ಬಜರಂಗದಳದ ಕಾರ್ಯಕರ್ತರು ಹಿಡಿದಿದ್ದರು. ಅಲ್ಲದೆ ಗೋವುಗಳನ್ನು ಗೋಶಾಲೆಗೆ ಬಿಟ್ಟಿದ್ದರು. ಆದರೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಏಳು ಕೇಸು ದಾಖಲಿಸಿದ್ದಾರೆ. ಅದರಲ್ಲಿ ಕಳ್ಳತನದ ಆರೋಪ ಸಹ ಹೊರಿಸಿದ್ದಾರೆ’ ಎಂದು ತಿಳಿಸಿದರು.

‘ಸುಳ್ಳು ಮೊಕದ್ದಮೆ ವಾಪಸ್‌ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು. ಮುಂದೆ ನಡೆಯುವ ಕಾನೂನು ಅವ್ಯವಸ್ಥೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇರ ಹೊಣೆಯಾಗುತ್ತಾರೆ’ ಎಂದು ಎಚ್ಚರಿಸಿದರು. ಮುಖಂಡರಾದ ರಫೀಕ್‌ ಪಾಷಾ, ಸಯ್ಯದ ವಜೀದ್‌ ಅಹಮದ್‌, ಕಾಂತರಾಜು, ನಂಜುಂಡಪ್ಪ, ಬನಶಂಕರಿ ಬಾಬು, ಆರ್‌.ನವೀನ್‌ ಕುಮಾರ್, ಪ್ರಕಾಶ್‌, ಅಂಬರೀಶ್, ಮದನ್‌ ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.