ಕುಣಿಗಲ್: ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರ ಕಾವೇರಿದ ಚರ್ಚೆ ನಡುವೆ ತಾಲ್ಲೂಕಿನ `ಬಸವ ವಸತಿ~ ಯೋಜನೆ ಫಲಾನುಭವಿಗಳ ಆಯ್ಕೆಗೆ ಅನುಮೋದನೆ ನೀಡಿಲಾಯಿತು.ವಸತಿ ಯೋಜನೆಯ ತಾಲ್ಲೂಕು ಜಾಗೃತಿ ಸಮಿತಿ ಸಭೆಯನ್ನು ಮಂಗಳವಾರ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಸಭೆಯಲ್ಲಿ 2010-11ನೇ ಸಾಲಿಗೆ ಬಸವ ವಸತಿ ಯೋಜನೆಯಡಿ 2005 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಈ ಹಿಂದೆ ನಡೆದ ಸಭೆಯಲ್ಲಿ ಫನಾನುಭವಿಗಳನ್ನು ಆಯ್ಕೆ ಮಾಡಿದ್ದು, ಆಯ್ಕೆಯಾದ ಪಟ್ಟಿಯನ್ನು ಇದುವರೆವಿಗೂ ಅನುಮೋದನೆ ಪಡೆಯುವಲ್ಲಿ ಶಾಸಕರು ಬೇಜವಾಬ್ದಾರಿ ತೋರಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷ ಡಾ.ಬಿ.ಎನ್.ರವಿ ಮಾತನಾಡಿ, ತಾಲ್ಲೂಕಿನಲ್ಲಿ ಬಡವರು ಮನೆಗಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಶಾಸಕರು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಶಿಫಾರಸು ಪತ್ರನೀಡುತ್ತಾ ವಿಳಂಬ ಮಾಡಿದ್ದಾರೆ. ಕೆಲವೆಡೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಕರ್ತವ್ಯ ಲೋಪದಿಂದ ವಿಳಂಬವಾಗಿದೆ. ನಿಗದಿತ ಅವಧಿಯಲ್ಲಿ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸದೆ ಫಲಾನುಭವಿಗಳಿಗೆ ಅನಗತ್ಯ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸದಸ್ಯ ವೈ.ಎಚ್.ಹುಚ್ಚಯ್ಯ ಮಾತನಾಡಿ, ಶಾಸಕರು ವಸತಿ ಯೋಜನೆ ಬಗ್ಗೆ ನಿರ್ಲಕ್ಷ್ಯ ತಳೆದಿದ್ದಾರೆ. ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ಕಚೇರಿ ಇದ್ದರೂ; ಉಪಯೋಗಿಸದೆ ಸ್ವಂತ ಕಚೇರಿಯಲ್ಲಿ ಕಾರ್ಯಭಾರ ಮಾಡುತ್ತಿದ್ದು, ತಮ್ಮ ಬೆಂಬಲಿಗರ ಸಮಸ್ಯೆ ನಿವಾರಿಸುವಲ್ಲಿ ಮಗ್ನರಾಗಿ ತಾಲ್ಲೂಕಿನ ಜನತೆ ಮರೆತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರ ಆರೋಪಗಳಿಂದ ಆಕ್ರೋಶಗೊಂಡ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಶಾಸಕರ ಸಮರ್ಥತೆ ನಿರ್ಧರಿಸಲು ಜನರಿದ್ದಾರೆ. ಅಸಂಬದ್ಧ ಮಾತುಗಳಿಗೆ ಕಡಿವಾಣ ಹಾಕುವಂತೆ ಎಚ್ಚರಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ವಸತಿ ಯೋಜನೆ ಫಲಾನುಭವಿ ಆಯ್ಕೆ ಮಾಡಲು 36 ನೋಡಲ್ ಅಧಿಕಾರಿಗಳ ತಂಡ ಕೂಲಂಕಷ ಸ್ಥಳ ತನಿಖೆ ನಡೆಸಿ 11 ಸಾವಿರ ಗುಡಿಸಲು ವಾಸಿಗಳ ಪಟ್ಟಿ ನೀಡಿದೆ. 6 ಸಾವಿರ ಫಲಾನುಭವಿಗಳಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಒಂದೂವರೆ ಸಾವಿರ ಫಲಾನುಭವಿಗಳು ಇದುವರೆವಿಗೂ ಮನೆಯನ್ನೇ ಕಟ್ಟಿಲ್ಲ ಎಂದು ವಿವರಿಸಿದರು.
ತಾ.ಪಂ.ಅಧ್ಯಕ್ಷ ಕೆ.ಎಲ್.ರಾಮಣ್ಣ, ಉಪಾಧ್ಯಕ್ಷೆ ಉಮಾ ವೆಂಕಟೇಶ್, ಬಿ.ಎನ್.ಜಗದೀಶ್, ಜಿ.ಪಂ.ಸದಸ್ಯ ದೊಡ್ಡಯ್ಯ, ಇಒ ಬೆಟ್ಟಸ್ವಾಮಿ, ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು, ಪಿಡಿಒ, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.