ADVERTISEMENT

ಶಿಕ್ಷಕರಿಗೆ ಬಾಡಿಗೆ ವಾಹನದ್ದೇ ಚಿಂತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 9:15 IST
Last Updated 1 ಜೂನ್ 2011, 9:15 IST

ಗುಬ್ಬಿ: ಶೈಕ್ಷಣಿಕ ವರ್ಷಾರಂಭದಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯಲ್ಲಿ ಇಲಾಖೆ ಮಗ್ನ ಆಗಿದ್ದರೆ ಶಾಲಾ ಮುಖ್ಯ ಶಿಕ್ಷಕರು ಈ ಸಾಮಗ್ರಿ ಸಾಗಿಸುವ ಚಿಂತೆಯಲ್ಲಿ ಮುಳುಗಿದ್ದಾರೆ.

ಪಟ್ಟಣದ ಗುರುಭವನದಲ್ಲಿ ದಾಸ್ತಾನಾಗಿರುವ ತಾಲ್ಲೂಕಿನ 436 ಸರ್ಕಾರಿ ಶಾಲೆಗಳಿಗೆ ವಿತರಿಸಬೇಕಾದ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸಾಗಿಸಲು ಸಾರಿಗೆ ವೆಚ್ಚ ಭರಿಸುವ ಇಲಾಖೆ ಒರ್ವ ವಿದ್ಯಾರ್ಥಿಗೆ 1 ರೂಪಾಯಿ ನೀಡುತ್ತದೆ.

ಪಟ್ಟಣದ ಶಾಲೆ ಹೊರತು ಪಡಿಸಿದರೆ ಇನ್ನುಳಿದ ಎಲ್ಲ ಶಾಲೆಗಳಿಗೆ ಆಟೊ ಹಾಗೂ ಟೆಂಪೋನಲ್ಲಿ ಸಾಗಿಸುವ ಅನಿವಾರ್ಯತೆ ಎದುರಾಗಿದೆ. ಗುಬ್ಬಿಯಿಂದ 25ರಿಂದ 35 ಕಿ.ಮೀ ದೂರದ ಗ್ರಾಮದ ಶಾಲೆಗಳಿಗೆ ಈ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸಾಗಿಸಲು ಸುಮಾರು 2 ಸಾವಿರದವರೆಗೆ ವೆಚ್ಚ ತಗುಲಿರುವ ನಿದರ್ಶನಗಳಿವೆ. ಮೇ 24ರಿಂದಲೇ ವಿತರಿಸಲಾಗುತ್ತಿರುವ ಈ ಸಾಮಗ್ರಿಯನ್ನು ತನ್ನ ಶಾಲೆಗೆ ಸಾಗಿಸುವಲ್ಲಿ ಮುಖ್ಯ ಶಿಕ್ಷಕ ಸೋತು ಹೈರಾಣಗಿರುವುದು ಇಲ್ಲಿ ಕಾಣಬಹುದು.

ಸರ್ಕಾರ ನೀಡುವ ಸುಮಾರು 26 ಸಾವಿರ ಹಣದಲ್ಲಿ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ಸಾಗಿಸುವುದು ಸುಲಭವಲ್ಲ ಎನ್ನುವ ಗುಬ್ಬಿ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಯ್ಯ ಈ ಸಾರಿಗೆ ವೆಚ್ಚ ಬಿಡುಗಡೆಯಾಗಲು ಕನಿಷ್ಠ 3 ತಿಂಗಳಾದರೂ ಬೇಕಾಗುತ್ತದೆ. ಈ ಸಂದರ್ಭದಲ್ಲಿ ವಿಧಿ ಇಲ್ಲದೆ ಶಿಕ್ಷಕರ ಸಂಘದಿಂದ ಸಾಲವಾಗಿ 25 ಸಾವಿರ ಹಣ ಪಡೆಯಲಾಗಿದೆ. ಒಂದು ಕ್ಲಸ್ಟರ್‌ನ ಮೂರ‌್ನಾಲ್ಕು ಶಾಲೆಗೆ ಒಮ್ಮೆಲೇ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದೆ ಎನ್ನುತ್ತಾರೆ.

ಇಲಾಖೆ ಸಾರಿಗೆ ವೆಚ್ಚ ಕಾಯದ ಹಲವು ಶಾಲೆಯ ಮುಖ್ಯ ಶಿಕ್ಷಕರು ಗುಬ್ಬಿಯಿಂದ ಲಗೇಜ್ ಆಟೊ ಮೂಲಕ ಸಾಮಗ್ರಿ ಸಾಗಿಸಲು ರೂ.600ರಿಂದ 900ರವರೆಗೆ ಬಾಡಿಗೆ ನೀಡುತ್ತಿದ್ದಾರೆ. ಈ ಹಣವನ್ನು ಮತ್ತೆ ಶಿಕ್ಷಕರು ಪಡೆಯುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ. ಕೆಲವು ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಇದೆಲ್ಲ ಲೆಕ್ಕಕ್ಕೆ ಬಾರದು ಎನ್ನುತ್ತಾರೆ. ಆದರೆ ಕೆಲವಡೆ ವಿದ್ಯಾರ್ಥಿಗಳಿಂದ ಸಾರಿಗೆ ವೆಚ್ಚ ವಸೂಲಿ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ.

ಶೈಕ್ಷಣಿಕ ಪ್ರಗತಿ ಮೂಲಕ ರಾಜ್ಯದ ಸಾಕ್ಷರ ಅಭಿವೃದ್ಧಿ ಕಾಣುವ ಸರ್ಕಾರದ ಕನಸಿನಂತೆ ಉಚಿತವಾಗಿ ನೀಡಲಾದ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಮತ್ತೆ ಪೋಷಕರಿಗೆ ಹೊರೆಯಾಗದಂತೆ ಶಿಕ್ಷಣ ನೀತಿ ರೂಪಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಕೆಲವು ಪ್ರಜ್ಞಾವಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.