ADVERTISEMENT

ಶಿರಾ ಅಧಿಕಾರಿಗಳ ವಿರುದ್ಧ ಜೆಡಿಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 9:00 IST
Last Updated 14 ಏಪ್ರಿಲ್ 2013, 9:00 IST

ತುಮಕೂರು: ಶಿರಾ ತಾಲ್ಲೂಕಿನ ಕೆಲ ಅಧಿಕಾರಿಗಳು ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ಅವಧಿಯಲ್ಲಿ ತಾಲ್ಲೂಕಿಗೆ ಬಂದಿರುವ ಅಧಿಕಾರಿಗಳು ಶಾಸಕರ ಹಿಂಬಾಲಕರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ನಿಷ್ಪಕ್ಷಪಾತ ಚುನಾವಣೆ ನಡೆಯುವ ಬಗ್ಗೆ ಶಂಕೆ ಇದೆ ಎಂದು ಆರೋಪಿಸಿ ಕೆಲಕಾಲ ಧರಣಿ ನಡೆಸಿದರು.

ಶಿರಾ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ರವಿಕುಮಾರ್, ಬಿಇಒ ರಾಜಕುಮಾರ್, ಬೆಸ್ಕಾಂ ಎಂಜಿನಿಯರ್ ಕರಿಯಪ್ಪ, ಕಂದಾಯ ಅಧಿಕಾರಿ ರಾಜೇಶ್, ಪಶುಸಂಗೋಪನಾ ಇಲಾಖೆ ವೈದ್ಯಾಧಿಕಾರಿ ಡಿ.ನಾಗರಾಜು ಕಾಂಗ್ರೆಸ್ ಕಾರ್ಯಕರ್ತರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಸತ್ಯನಾರಾಯಣ ಮತ್ತು ಬೆಂಬಲಿಗರು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರಿಗೆ ದೂರು ಸಲ್ಲಿಸಿದರು.

ಈ ಅಧಿಕಾರಿಗಳು ತಾಲ್ಲೂಕಿಗೆ ಬಂದು 4- 5 ವರ್ಷವಾಗಿದೆ. ಶಾಸಕ ಜಯಚಂದ್ರ ಅಧಿಕಾರಿಗಳನ್ನು ಚುನಾವಣೆಯಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಭಿವೃದ್ಧಿ ಮಂತ್ರ-ಜಯಚಂದ್ರ
ಶಿರಾ:
ತಾಲ್ಲೂಕಿನಲ್ಲಿ ಅಧಿಕಾರಿಗಳೆಲ್ಲ ಚುನಾವಣೆಯಲ್ಲಿ ಜಯಚಂದ್ರ ಪರ ಇದ್ದಾರೆ ಎಂದು ಆರೋಪಿಸಿರುವುದು ಸುಳ್ಳು. ಅಲ್ಲದೆ ಅಧಿಕಾರಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ತಾಲ್ಲೂಕಿನಲ್ಲಿ ಮರಳು ಲೂಟಿ ಆಗುತ್ತಿರುವ ಬಗ್ಗೆ ಮೊದಲಿನಿಂದಲೂ ವಿರೋಧವಾಗಿದ್ದೇನೆ. ಮರಳು ದಂಧೆ ಬಗ್ಗೆ ದೂರುವಾಗ ಸರ್ಕಾರ ಹಾಗೂ ಅಧಿಕಾರಿಗಳನ್ನು ದೂರಬೇಕೇ ಹೊರತು ಶಾಸಕರನ್ನಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನಿನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯೇ ಆಗಿಲ್ಲ. ಆಗಲೇ ಚಿನ್ನದ ಓಲೆ ಹಂಚುತ್ತಾರೆ ಸೇರಿದಂತೆ ಅಪಪ್ರಚಾರವಾಗುತ್ತಿದೆ. ಇದೆಲ್ಲದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡಲಿದ್ದೇನೆ. ನನ್ನದು ಇದು 8ನೇ ಚುನಾವಣೆ. ಮುಕ್ತ ಚುನಾವಣೆ ನಡೆಯಬೇಕು ಎಂಬ ಆಶಯ ನನ್ನದು ಎಂದರು.

ಜನರ ಮಧ್ಯೆ ವಿರಸ ಉಂಟು ಮಾಡುವ, ಜಾತಿ ವೈಷಮ್ಯ ಬಿತ್ತುವ ಹೇಳಿಕೆಗಳನ್ನು ಯಾರೂ ನೀಡಬಾರದು. ನಾನು ಅಭಿವೃದ್ದಿ ಹೆಸರಿನಲ್ಲಿ ಮತಯಾಚಿಸುತ್ತೇನೆ. ನಾನು 850 ಕೋಟಿ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬುದನ್ನು ಯಾರೂ ಬೇಕಾದರೂ ಎತ್ತಿ ತೋರಿಸಲಿ ಎಂದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಅನುದಾನಗಳನ್ನು ಸೇರಿಸಿ 850 ಕೋಟಿ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಸ್ಥಳೀಯ ಸಂಸ್ಥೆಗಳು ಅನುದಾನದಲ್ಲಿ ಅಭಿವೃದ್ದಿ ಕಾರ್ಯ ಮಾಡುತ್ತಾರೆ ಹೊರತು ಶಾಸಕರೇ ಅನುದಾನ ತರುವ ಸಾಮರ್ಥ್ಯ ಉಳ್ಳವರು ಎಂದು ಸ್ಪಷ್ಟಪಡಿಸಿದರು.

ತಾಲ್ಲೂಕಿನ ಮಾಜಿ ಶಾಸಕರು ಸೇರಿದಂತೆ ಕೆಲವರು ನನ್ನ ವಿರುದ್ಧ ಮಾತನಾಡಿದ್ದಾರೆ. ಮಾತು ಅವರ ಸಂಸ್ಕೃತಿ ಹೇಳುತ್ತದೆ. ನಾನು ಅವರಂತೆ ತಳ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ ಎಂದರು.

ಗೋಷ್ಠಿಯಲ್ಲಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಅರೇಹಳ್ಳಿ ರಮೇಶ್, ಎಪಿಎಂಸಿ ಅಧ್ಯಕ್ಷ ಶಶಿಧರ್ ಗೌಡ, ನಗರ ಘಟಕದ ಅಧ್ಯಕ್ಷ ಅಲ್ಲಾ ಬಕಷ್ ಕೆ.ಪ್ಯಾರು, ಯುವ ಘಟಕದ ಅಧ್ಯಕ್ಷ ಉದಯ್‌ಶಂಕರ್, ಡಿ.ಸಿ.ಅಶೋಕ್, ರಂಗರಾಜು, ವಾಜರಹಳ್ಳಿ ರಮೇಶ, ಮಧುಸೂಧನ್ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.