ADVERTISEMENT

ಶೀಘ್ರ ಯೋಜನೆ ಪೂರ್ಣಗೊಳಿಸಲು ಆದ್ಯತೆ

ಪಾವಗಡ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಕೆಗೆ ₹ 2,350 ಕೋಟಿ ವೆಚ್ಚದ ಯೋಜನೆ ಟೆಂಡರ್‌ ಪ್ರಕ್ರಿಯೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 6:06 IST
Last Updated 12 ಜೂನ್ 2018, 6:06 IST

ತುಮಕೂರು: ಪಾವಗಡ ಕ್ಷೇತ್ರಕ್ಕೆ ₹ 2,350 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಈಗಾಗಲೆ ಟೆಂಡರ್‌ ಆಗಿದ್ದು, ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ನೂತನ ಕಾರ್ಮಿಕ ಸಚಿವ ವೆಂಟಕರಮಣಪ್ಪ ತಿಳಿಸಿದರು.

ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನ ನೀಡುತ್ತಾರೆ ಎಂಬ ನಂಬಿಕೆ ಇತ್ತು. ಅದರಂತೆ ಹೈಕಮಾಂಡ್‌ ತೀರ್ಮಾನ ಮಾಡಿ ಕಾರ್ಮಿಕ ಖಾತೆಯನ್ನು ನೀಡಿದ್ದು, ಬಡವರಿಗೆ ಹೆಚ್ಚೆಚ್ಚು ಸಹಾಯ ಮಾಡಬಹುದು. ಹಾಗಾಗಿ ತೃಪ್ತಿಕರವಾಗಿದೆ ಎಂದರು ಹರ್ಷ ವ್ಯಕ್ತಪಡಿಸಿದರು.

ಹಿಂದೆ ಸಣ್ಣ ಕೈಗಾರಿಕೆ ಸಚಿವರಾಗಿದ್ದ ಸಂದರ್ಭದಲ್ಲಿ ಪಾವಗಡದಲ್ಲಿ 40 ಎಕರೆ ಪ್ರದೇಶದಲ್ಲಿ ಗಾರ್ಮೆಂಟ್ಸ್ ಕೈಗಾರಿಕೆಯನ್ನು ಆರಂಭಿಸಲಾಗಿತ್ತು. ಈ ದಿಸೆಯಲ್ಲಿ ಈ ಬಾರಿಯೂ ಕೈಗಾರಿಕೆ ಸ್ಥಾಪನೆ ಮಾಡುವ ಮೂಲಕ ಉದ್ಯೋಗ ನೀಡಲು ಶ್ರಮಿಸುತ್ತೇನೆ ಎಂದರು.

ADVERTISEMENT

‘ನಿಮ್ಮ ಹೈಕಮಾಂಡ್‌ ದೇವೇಗೌಡರೋ, ರಾಹುಲ್‌ಗಾಂಧಿಯೋ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ರಾಹುಲ್‌ ನಮ್ಮ ಹೈಕಮಾಂಡ್‌ ಆಗಿದ್ದು, ಉತ್ತಮ ಸೇವೆ ಮಾಡಿ ಎಂದು ದೇವೇಗೌಡ ಸಲಹೆ ನೀಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಉತ್ತಮ ಸೇವೆ ಮಾಡುವಂತೆ ಸಾರ್ವಜನಿಕರು ಸಹ ಸಲಹೆ ನೀಡಬಹುದು ಎಂದರು.

ಜೆಡಿಎಸ್‌, ಕಾಂಗ್ರೆಸ್‌ನ ಶತ್ರು ಎಂದೇ ಹೇಳಲಾಗಿತ್ತು. ಅಂತಹ ಜೆಡಿಎಸ್‌ ಜೊತೆ ಹೊಂದಾಣಿಕೆ ಹೇಗಾಯಿತು ಎಂಬ ಪ್ರಶ್ನೆಗೆ, ಶತ್ರುತ್ವ ಚುನಾವಣೆಯಲ್ಲಿಯೇ ಮುಗಿದಿರುವ ಅಧ್ಯಾಯ. ಜನ ಸೇವೆಗಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ದಂಧೆ, ಹೆಣ್ಣು ಮಕ್ಕಳ ಕಳ್ಳತನ, ಮಟ್ಕಾ ಹೆಚ್ಚಿದೆ ಎಂಬುದು ಅಸತ್ಯ. ಯಾವುದೇ ಹೆಣ್ಣು ಮಕ್ಕಳ ಕಳ್ಳತನ ಆಗುತ್ತಿಲ್ಲ. ಆಗಲು ಬಿಡುವುದಿಲ್ಲ. ಅವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಕಾರ್ಮಿಕ ಖಾತೆಯಡಿ ಬರುವ ಎಲ್ಲ ಸೌಲಭ್ಯವನ್ನು ಜನರಿಗೆ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಸೇರಿದಂತೆ ಜಿಲ್ಲೆಗೆ ಸಂಬಂಧಪಟ್ಟಂತೆ ಎಲ್ಲ ಅಭಿವೃದ್ಧಿ ಕಾರ್ಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಧುಗಿರಿ: ಪಾವಗಡದಲ್ಲಿ ನೂತನವಾಗಿ ಗಾರ್ಮೆಂಟ್‌ಗಳನ್ನು ಪ್ರಾರಂಭಿಸಿ, ಬಡ ವರ್ಗದ ಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮುಖಂಡರು ಹಾಗೂ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ಕೈಗಾರಿಕೆ ಸಚಿವನಾಗಿದ್ದಾಗ ಪಾವಗಡದ ಹೊರವಲಯದ ಪೆನಗೊಂಡ ರಸ್ತೆಯಲ್ಲಿ 40 ಎಕರೆ ಜಮೀನನ್ನು ಸಣ್ಣ ಕೈಗಾರಿಕೆಗಳಿಗಾಗಿ ಮೀಸಲಿರಿಸಿದ್ದು, ಆ ಜಾಗದಲ್ಲಿ ಗಾರ್ಮೆಂಟ್‌ಗಳನ್ನು ಪ್ರಾರಂಭಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಿಂದ ಉದ್ಯೋಗಕ್ಕಾಗಿ ಬೆಂಗಳೂರು ಹಾಗೂ ನಗರ ಪ್ರದೇಶಗಳಿಗೆ ವಲಸೆ ಹೋಗಿರುವವರನ್ನು ವಾಪಸ್ಸು ಕರೆ ತಂದು ಉದ್ಯೋಗ ನೀಡುವ ಗುರಿ ಹೊಂದಲಾಗಿದ್ದು, ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಮುಖಂಡರಾದ ಎಂ.ಜಿ.ಶ್ರೀನಿವಾಸಮೂರ್ತಿ, ಟಿ.ರಾಮಣ್ಣ, ಎಂ.ವಿ.ಗೋವಿಂದರಾಜು, ಎಂ.ಎಸ್.ಚಂದ್ರಶೇಖರ್, ಪಿ.ಸಿ.ಕೃಷ್ಣಾರೆಡ್ಡಿ, ರಾಧೇಶ್ಯಾಮ್, ವೆಂಕಟಕೃಷ್ಣಾರೆಡ್ಡಿ, ಧನಪಾಲ್, ತಿಮ್ಮರಾಜು, ಬಂದ್ರೇಹಳ್ಳಿ ಮಂಜು, ಅನಿಲ್, ಶಿವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.