ADVERTISEMENT

ಶೈಕ್ಷಣಿಕ ವರ್ಷಾರಂಭ:ಶಾಲೆಯಲ್ಲಿ ಮಕ್ಕಳ ಕಲರವ

​ಪ್ರಜಾವಾಣಿ ವಾರ್ತೆ
Published 29 ಮೇ 2018, 9:44 IST
Last Updated 29 ಮೇ 2018, 9:44 IST
ಚಿಕ್ಕನಾಯಕನಹಳ್ಳಿ ಪಟ್ಟಣದ ಕುರುಬರ ಶ್ರೇಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ
ಚಿಕ್ಕನಾಯಕನಹಳ್ಳಿ ಪಟ್ಟಣದ ಕುರುಬರ ಶ್ರೇಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ   

ಚಿಕ್ಕನಾಯಕನಹಳ್ಳಿ: 2018-19ರ ಶೈಕ್ಷಣಿಕ ವರ್ಷ ಸೋಮವಾರ ವಿದ್ಯುಕ್ತವಾಗಿ ಪ್ರಾರಂಭವಾಯಿತು.ಪಟ್ಟಣ ಹಾಗೂ ಹೋಬಳಿ ಕೇಂದ್ರಗಳ ಶಾಲೆಗಳಲ್ಲಿ ಮಕ್ಕಳ ಕಲರ್ ಕಂಡುಬಂತು.

ತಾಲ್ಲೂಕಿನಾಧ್ಯಂತ ಸರ್ಕಾರಿ ಶಾಲೆಗಳಲ್ಲಿ ವಿಶೇಷ ದಾಖಲಾತಿ ಆಂದೋಲನ ನಡೆಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸುವ ಪ್ರಯತ್ನ ನಡೆಯಿತು..ಶಾಲೆಗೆ ಆಗಮಿಸಿದ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಲಾಯಿತು.ಮಕ್ಕಳಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು.ಬಹುತೇಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ಸಿಹಿ ಅಡುಗೆ ಮಾಡಲಾಗಿತ್ತು. ಮುಂಚಿತವಾಗಿಯೇ ಮುಖ್ಯೋಪಾಧ್ಯರುಗಳಿಗೆ ಶಾಲೆಯ ಆರಂಬದ ಬಗ್ಗೆ ಮಾಹಿತಿ ನೀಡಿದ್ದರಿಂದ ಒಂದು ದಿನ ಮುಂಚಿತವಾಗಿಯೇ ಶಾಲೆಗಳನ್ನು ಸ್ವಚ್ಛಗೊಳಿಸಿ ಮಕ್ಕಳ ಆಗಮನಕ್ಕೆ ಸಿದ್ಧಗೊಳಿಸಲಾಗಿತ್ತು.ಅಲ್ಲಲ್ಲಿ ಶಾಲೆಗಳನ್ನು ತಳಿರು ತೋರಣದಿಂದ ಸಿಂಗರಿಸಿ ಮಕ್ಕಳನ್ನು ವಿಶೇಷವಾಗಿ
ಸ್ವಾಗತಿಸಲಾಯಿತು ತಾಲ್ಲೂಕಿನ ಹಲವು ಕಡೆ ವಿಶೇಷ ದಾಖಲಾತಿ ಾಂದೋಲನ ಮಾಡಲಾಯಿತು.

ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಶಿಕ್ಷಣಾಧಿಕಾರಿ ಮಂಜುನಾಥ್ ಪಟ್ಟಣದ ನವೋದಯ ಪದವಿ ಕಾಲೇಜ್ ನಲ್ಲಿ ಮುಖ್ಯಶಿಕ್ಷಕರ ಸಭೆ ನಡೆಸಿ ಅಗತ್ಯ ಸಿದ್ಧತೆಗಳಬಗ್ಗೆ ಸಲಹೆ ನೀಡಿದ್ದರು.ಅದರಂತೆ ಪ್ರತಿ ಶಾಲೆ ಒಂದು ವರ್ಷದಲ್ಲಿ ಏನೆಲ್ಲಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಶಾಲೆಯ ಮುಖ್ಯಸ್ಥರು, ಎಸ್.ಡಿ.ಎಂ.ಸಿ. ಸಮ್ಮುಖದಲ್ಲಿ ವರ್ಷದ ಆಗು- ಹೋಗುಗಳ ಬಗ್ಗೆ ಚರ್ಚಿಸಿದರು.ಶಿಕ್ಷಕರ ಸಹಕಾರದಿಂದ ವಾರ್ಷಿಕ ಯೋಜನೆಯನ್ನು ರೂಪಿಸಲಾಯಿತು.ಈಗಾಗಲೆ ಅಧಿಕಾರಿಗಳು ಸಭೆ ನಡೆಸಿ, ಯಾರೋ ರೂಪಿಸಿರುವ ಯೋಜನೆಯನ್ನೇ ಜೆರಾಕ್ಸ್ ಅಂಗಡಿಯಿಂದ ತಂದು, ಗೋಡೆಗೆ ನೇತು ಹಾಕಿ ನೋಡಿಕೊಳ್ಳಿ ಎನ್ನಬಾರದು ಎಂದು ಮುಖ್ಯಶಿಕ್ಷಕರುಗಳಿಗೆ ಸಲಹೆ ನೀಡಿದ್ದರಿಂದ ಶಿಕ್ಷಕರೇ ಕುಳಿತು ವಾರ್ಷಿಕ ಯೋಜನೆ ರೂಪಿಸಿದೆವು ಎಂದು ಕುರುಬರ ಶ್ರೇಣಿ ಶಾಲೆಯ ಮುಖ್ಯ ಶಿಕ್ಷಕ ತಿಮ್ಮಾಭೋವಿ ಹೇಳಿದರು.

ADVERTISEMENT

ವಾರ್ಷಿಕ ಕ್ರಿಯಾಯೋಜನೆ, ಶಾಲಾ ಪಂಚಾಗ, ವಾರ್ಷಿಕ ಪಾಠ ಹಂಚಿಕೆ ಸೇರಿದಂತೆ ಒಂದು ವರ್ಷದಲ್ಲಿ
ಕೈಗೊಳ್ಳಬಹುದಾದ ಎಲ್ಲಾ ಶೈಕ್ಷಣಿಕ ಯೋಜನೆಗಳನ್ನು ಸ್ವತಹ ಶಾಲಾ ಶಿಕ್ಷಕರುಗಳೇ ರೂಪಿಸಿಕೊಳ್ಳಬೇಕು. ಶಾಲೆಗಳ ಅಭಿವೃದ್ದಿಗೆಂದು ಬಂದಿರುವ ಅನುದಾನವನ್ನು ಆಯಾ ವರ್ಷವೇ ಸದುಪಯೋಗ ಪಡಿಸಿಕೊಳ್ಳಬೇಕು. ಮುಂದಿನ ಸಾಲಿಗೆ ಉಳಿಸಲು ಹೋದರೆ ಅದನ್ನು ಖರ್ಚು ಮಾಡಲು ಇಲಾಖೆಯ ಮುಖ್ಯಸ್ಥರ ಅನುಮತಿ ಪಡೆಯಬೇಕಾಗುತ್ತದೆ ಎಂಬ ಆದೇಶ ಇದ್ದುದ್ದರಿಂದ ಸೋಮವಾರವೇ ಶಾಲೆಯ ಅಗತ್ಯ ದುರಸ್ತಿ ಬಗ್ಗೆ ಯೋಜನೆ ರೂಪಿಸಲಾಯಿತು ಎಂದರು.


ಮುಖ್ಯಶಿಕ್ಷಕರಿಗೆ ಸೂಚನೆ:

*ಮಕ್ಕಳಿಗೆ ವಿತರಿಸುವ ಶೂ, ಸಾಕ್ಸ್, ಸಮವಸ್ತ್ರಗಳ ವಿತರಣೆಯಲ್ಲಿ ಯಾವುದೇ ಲೋಪವಾಗಬಾರದು.
*ಎಸ್.ಡಿ.ಎಂ.ಸಿ ನಡಾವಳಿಯೇ ಅಂತಿಮ. ನಡಾವಳಿ ಮಾಡುವಾಗ ಇಲಾಖಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.
*ಶಾಲೆಯಲ್ಲಿನ ಯಾವುದೇ ವ್ಯವಹಾರವನ್ನು ಬ್ಯಾಂಕ್ನ ಚೆಕ್ ಮೂಲಕ ನಡೆಸಿ ಎಂದು ಡಿಡಿಪಿಇ ಮಂಜುನಾಥ್ ಸಲಹೆ ನೀಡಿದ್ದಾರೆ.

ವರ್ಷದ ಯೋಜನೆ ಮೊದಲ ದಿನದಿಂದಲೇ ಆಗಲಿ: ಮಕ್ಕಳ ದಾಖಲಾತಿ ಮಾಡಿಕೊಳ್ಳುವುದು. ವಾರ್ಷಿಕ ಕಾರ್ಯಸೂಚಿ ನಡೆಸುವುದು. ನಲಿಕಲಿ ತರಗತಿ ತಯಾರಿ, ಶಾಲಾ ಕೈತೋಟ, ಮಕ್ಕಳ ದಾಖಲಾತಿ ವಯೋಮಿತಿ, ಮಕ್ಕಳ ವರ್ಗಾವಣೆ ಪತ್ರವನ್ನು ವಿತರಣೆಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ವಿಶ್ಲೇಷಣಾ ತಂತ್ರಾಂಶಕ್ಕೆ ನಮೂದಿಸುವುದು ಮತ್ತು ಮುಂದಿನ ತರಗತಿಗೆ ಉತ್ತೀರ್ಣರಾಗಿರುವ ಬಗ್ಗೆ ದಾಖಲಾತಿ ನಮೂದಿಸುವುದು,

ಎಸ್.ಡಿ.ಎಂ.ಸಿಗಳ ಸಭಾ ನಡಾವಳಿ, ಅನುದಾನಗಳ ಕ್ರಿಯಾಯೋಜನೆ, ಅಕ್ಷರ ದಾಸೋಹ, ಕ್ಷೀರಾಭಗ್ಯ ನಿರ್ವಹಣೆ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾಗಿ ಶಿಕ್ಷಕರಿಗೆ ಸಲಹೆ ನೀಡಲಾಯಿತು. ಹಾಗೂ ಜೂನ್ ತಿಂಗಳಿನಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ.ವರ್ಷದ ಸಮಗ್ರ ಯೋಜನೆಯನ್ನು ಮೊದಲದಿನವೇ ಮಾಡಿಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ ತಾಲ್ಲೂಕಿನ ಶಿಕ್ಷಕ ವರ್ಗಕ್ಕೆ ಸೂಚಿಸಿದ್ದಾರೆ.

**
'ಮೊದಲ ದಿನದ ಶಾಲೆಯಲ್ಲಿ ಸ್ನೇಹಿತರೊಡನೆ ಆಡಿ ಕುಣಿದೆವು.ರಜೆಯಲ್ಲಿ ಅಜ್ಜಿ ಮನೆಗೆ ಹಾಗೂ ಪ್ರವಾಸ ಹೋಗಿದ್ದ ಅನುಭವವನ್ನು ಸ್ನೇಹಿತರೊಟ್ಟಿಗೆ ಹಂಚಿಕೊಂಡೆ ಹಳೆ ಸ್ನೇಹಿತರು ಒಟ್ಟಿಗೆ ಸೇರಿ ಆಡಿದ್ದು ಖುಷಿಯಾಯಿತು.'
ಅ‌ಶೋಕ್,7ನೇ ತರಗತಿ ವಿದ್ಯಾರ್ಥಿ.

'ಪ್ರಾಥಮಿಕ ಶಾಲೆ ಮುಗಿಸಿ ಪ್ರೌಢಶಾಲೆಗೆ ಹೋಗುತ್ತಿದ್ದೇನೆ.ಖುಷಿ ಆತಂಕ ಎಲ್ಲಾ ಇದೆ.ಹಳೆ ಶಾಲೆಗೆ ಹೋಗಿ ವರ್ಗಾವಣೆ ಪತ್ರ ತೆಗೆದುಕೊಂಡು, ಶಿಕ್ಷಕರಿಗೆ ಸಿಹಿ ಹಂಚಿ ಮಾತನಾಡಿಸಿಕೊಂಡು ಬಂದಿದ್ದು ಸಂತೋಷ ಆಯ್ತು'
– ಎಚ್.ಎಂ. ರೂಪಾ,8ನೇತರಗತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.