ADVERTISEMENT

ಸರ್ಕಾರಿ ನೌಕರರನ್ನು ಅಟ್ಟಾಡಿಸಿ ಹೊಡಿತಾರೆ: ಶಿವಣ್ಣ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 8:20 IST
Last Updated 3 ಏಪ್ರಿಲ್ 2012, 8:20 IST

ತುಮಕೂರು: `ಜನರನ್ನು ಹೀಗೆ ಗೋಳಾಡಿಸುತ್ತಿದ್ದರೆ ಸರ್ಕಾರಿ ನೌಕರರನ್ನು ಜನರು ಅಟ್ಟಾಡಿಸಿಕೊಂಡು ಹೊಡೆಯುವ ದಿನ ದೂರವಿಲ್ಲ. ಜನರು ಸರ್ಕಾರಿ ನೌಕರರನ್ನು ಹಿಡಿದು ಬೋಟಿ ತೆಗೆಯುತ್ತಾರೆ. ಜನತಾ ಯುದ್ಧ ಆಗುವುದಕ್ಕೂ ಮೊದಲೇ ಎಚ್ಚೆತ್ತುಕೊಳ್ಳಲು ಇದು ಸಕಾಲವಾಗಿದೆ~ ಎಂದು ಶಾಸಕ ಎಸ್.ಶಿವಣ್ಣ ಸರ್ಕಾರಿ ನೌಕರರ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.

`ಜಿಲ್ಲಾಧಿಕಾರಿ ಕಚೇರಿಯಿಂದ ಹಿಡಿದು ಗ್ರಾಮ ಪಂಚಾಯಿತಿವರೆಗೂ ದಲ್ಲಾಳಿಗಳೇ ಕಾಣುತ್ತಾರೆ. ಜಿಲ್ಲಾಧಿಕಾರಿ ಇದನ್ನು ಗಮನಿಸಿ ಯಾರಿಗೆ ಎಲ್ಲಿ ಬರೆ ಹಾಕಬೇಕೋ ಅಲ್ಲಲ್ಲಿ ಬರೆ ಹಾಕಬೇಕು~ ಎಂದರು.

ಜಿಲ್ಲಾಧಿಕಾರಿ ಕಚೇರಿ ಆವಣರದಲ್ಲಿ ಸೋಮವಾರ ನಡೆದ `ಸಕಾಲ~ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, `ಸ್ವಾತಂತ್ರ್ಯ ಬಂದು 64 ವರ್ಷಗಳ ನಂತರವೂ `ಸಕಾಲ~ ಜಾರಿಗೊಳಿಸಬೇಕಾದ ವ್ಯಥೆ ಬಂತಲ್ಲ ಎಂಬ ನೋವು ಆಗುತ್ತಿದೆ~ ಎಂದು ವಿಷಾದಿಸಿದರು.

`ರಾಜಕಾರಣಿಗಳು ಇಷ್ಟು ದಿನ ಪಕ್ಷದ ಸಭೆ, ಸಮಾರಂಭ ನಡೆಸಲು ಉದ್ಯಮಿಗಳ ಬಳಿ ಹಣ ಕೇಳುತ್ತಿದ್ದರು. ಆದರೆ ಈಗ ಅಧಿಕಾರಿಗಳನ್ನೇ ಹಿಡಿದಿದ್ದಾರೆ. ಆ ಕೆಟ್ಟದ್ದು ನನಗೆ ಕೊಡಬೇಡಿ, ಜನರಿಗೆ ಒಳ್ಳೆಯದು ಮಾಡಿ ಎಂದರೂ ಸರ್ಕಾರಿ ನೌಕರರು ಮಾಡುತ್ತಿಲ್ಲ~ ಎಂದು ಆರೋಪಿಸಿದರು.

ತಮ್ಮ ಮಾತಿನುದ್ದಕ್ಕೂ ಸಭೆಯಲ್ಲಿದ್ದ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಹೆಸರು ಹಿಡಿದು ಉದಾಹರಣೆ ಹೇಳುತ್ತಿದ್ದರು. `ಕಳ್ಳನನ್ನು ಹಿಡಿದ ಪೊಲೀಸ್ ಠಾಣೆಯೊಂದರಲ್ಲಿ ಮಹಿಳೆಗೆ ಅರ್ಧ ರೋಲ್ಡ್‌ಗೋಲ್ಡ್ ಮಾಡಿದ ಸರ ಕೊಟ್ಟು ಇದೇ ಕಳವಾಗಿದ್ದ ಚಿನ್ನದ ಸರ ಎಂದು ಹೇಳಿದ್ದಾರೆ. ಇದು ಪೊಲೀಸರು ಎಚ್ಚೆತ್ತುಕೊಳ್ಳಲು ಸಕಾಲ~ ಎಂದು ಹೇಳಿದರು.

`ಕೆಲಸ ಮಾಡದೆ ಸರ್ಕಾರಿ ನೌಕರರು ಸೌಲಭ್ಯ ಕೇಳ್ತಾರೆ. ಮೊದಲು ಕೆಲಸ ಮಾಡಿ ತೋರಿಸಿ ಆಮೇಲೆ ಸೌಲಭ್ಯ ಕೇಳಬೇಕು ಅಲ್ಲವೇ~ ಎಂದು ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರನ್ನೆ ಕೇಳಿದರು.
`ಸರ್ಕಾರಿ ನೌಕರರು ಶೇ.99ರಷ್ಟು ಕೆಟ್ಟುಹೋಗಿದ್ದರೆ, ರಾಜಕಾರಣಿಗಳು ಶೇ.98ರಷ್ಟು ಕೆಟ್ಟಿದ್ದಾರೆ.

ಮಾತು ಮಾತಿಗೆ ರೈತರು, ಬಡವರ ಹೆಸರು ಹೇಳುವ ರಾಜಕಾರಣಿ, ಅಧಿಕಾರಿಗಳು ಊರುಗಳಿಗೆ ಹೋದರೆ ಜನ ಅಟ್ಟಾಡಿಸಿಕೊಂಡು ಹೊಡೆಯುವ ದಿನ ದೂರವಿಲ್ಲ. ಅಧಿಕಾರಿಗಳು, ರಾಜಕಾರಣಿಗಳು ಮನುಷ್ಯ ಜಾತಿಯಲ್ಲಿ ಇಲ್ಲ, ವಿಕೃತ ಜಾತಿಯಲ್ಲಿದ್ದಾರೆ~ ಎಂದು ಕಿಡಿಕಾರಿದರು.

`20 ವರ್ಷಗಳ ಹಿಂದೆ ನನ್ನ ಬಳಿ ಎರಡು ಚೆಡ್ಡಿ, ಅಂಗಿ ಇದ್ದವು. ಆಗ ಲಿಂಗಾಯತರು ನನ್ನನ್ನು ಲಿಂಗಾಯತ ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಈಗ ನನ್ನ ಬಳಿ ನೂರು ಚೆಡ್ಡಿ, ಅಂಗಿಗಳು ಬಂದ ತಕ್ಷಣ ಲಿಂಗಾಯತ ಎಂದು ಅಪ್ಪಿಕೊಳ್ಳತೊಡಗಿದ್ದಾರೆ~ ಎಂದು ಗೇಲಿ ಮಾಡಿಕೊಂಡರು.

ನೌಕರರ ಸಂಘ ಖಂಡನೆ
ಸರ್ಕಾರಿ ನೌಕರರ ವಿರುದ್ಧ ಶಾಸಕ ಎಸ್.ಶಿವಣ್ಣ ಆರೋಪವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಖಂಡಿಸಿದ್ದಾರೆ.

ಪ್ರಚಾರಕ್ಕಾಗಿ ಶಾಸಕರು ಹೀಗೆ ನೌಕರರನ್ನು ತೇಜೋವಧೆ ಮಾಡುತ್ತಿದ್ದಾರೆ. ಸರ್ಕಾರಿ ನೌಕರರು ಕೆಲಸ ಮಾಡದೇ ದೇಶ ಅಭಿವೃದ್ಧಿ ಆಗಿದೆಯೇ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸರ್ಕಾರಿ ನೌಕರರ ಕುರಿತು ಶಾಸಕರು ತಮ್ಮ ಧೋರಣೆ ಬದಲಿಸಿಕೊಳ್ಳದಿದ್ದರೆ ಅವರ ಕಾರ್ಯಕ್ರಮಗಳನ್ನು ಸರ್ಕಾರಿ ನೌಕರರು ಬಹಿಷ್ಕರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.