ADVERTISEMENT

ಸುವರ್ಣ ಗ್ರಾಮ: ದಸೂಡಿಯಲ್ಲಿ ಕಳಪೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 9:11 IST
Last Updated 24 ಏಪ್ರಿಲ್ 2013, 9:11 IST

ಹುಳಿಯಾರು: ದಸೂಡಿ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

2011-12ನೇ ಸಾಲಿನಲ್ಲಿ ದಸೂಡಿ ಗ್ರಾಮ ಸುವರ್ಣ ಗ್ರಾಮ ಯೋಜನೆಗೆ ಆಯ್ಕೆಯಾಗಿದೆ. ಯೋಜನೆಯ ಅಂಗವಾಗಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ, ಬಾಕ್ಸ್ ಚರಂಡಿ ಮತ್ತಿತರ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಬೀದಿಗಳಲ್ಲಿರುವ ಮಣ್ಣು ಕೆರೆದು ಹಾಗೆಯೇ ಕಾಂಕ್ರಿಟ್ ಹಾಕಿರುವುದರಿಂದ ಸಿಮೆಂಟ್ ರಸ್ತೆ ಬೇಗ ಹಾಳಾಗುತ್ತದೆ. ಮಾಡುತ್ತಿರುವ ಕೆಲಸದಲ್ಲಿ ಸ್ವಲ್ಪವೂ ಗುಣಮಟ್ಟ ಕಾಪಾಡುತ್ತಿಲ್ಲ ಎಂದು ದೂರಿದರು.

ರಸ್ತೆ ಕಾಮಗಾರಿ ಸಂದರ್ಭದಲ್ಲಿ ವೈಜ್ಞಾನಿಕ ವಿಧಾನ ಪಾಲನೆಯಾಗಿಲ್ಲ. ಹೀಗಾಗಿ ಬೀದಿಯಲ್ಲಿರುವ ಕೆಲವು ಮನೆಗಳಿಗೆ ಮಳೆ ನೀರು ಹರಿಯುತ್ತಿವೆ. ರಂಗಜ್ಜಿ ಎಂಬ ವೃದ್ಧೆಯ ಗುಡಿಸಲಿಗೆ ನೀರು ಹರಿದು ಅಜ್ಜಿಯ ಬದುಕು ಮಾರಾಬಟ್ಟೆಯಾಗಿದೆ ಎಂದು ಗ್ರಾಮದ ಸೀತಾರಾಮಯ್ಯ ದೂರಿದ್ದಾರೆ.

ಬಸಿಗಾಲುವೆಗೆ ನೀರು ಸರಾಗವಾಗಿ ಹರಿಯಲು ಬಿಡುತ್ತಿಲ್ಲ. ಹೀಗಾಗಿ ಈಚೆಗೆ ಮಳೆ ಬಂದ ಸಮಯದಲ್ಲಿ ಮನೆಗೆ ನೀರು ನುಗ್ಗಿದೆ ಎಂದು ಗ್ರಾಮದ ಗಿರೀಶ್ ಆರೋಪಿಸಿದ್ದಾರೆ.

ಬಾಕ್ಸ್ ಚರಂಡಿ ನಿರ್ಮಾಣ ಹಂತದಲ್ಲಿಯೇ ಕುಸಿದು ಬೀಳುತ್ತಿದೆ. ಕಳಪೆ ಕಾಮಗಾರಿಗಳ ಕುರಿತು ಅಧಿಕಾರಿಗಳು ಶೀಘ್ರ ಗಮನ ಹರಿಸಬೇಕು. ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.