ತಿಪಟೂರು: ನಗರಸಭೆಗೆ ಸಂದಾಯವಾಗಬೇಕಿದ್ದ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಲಕ್ಷಾಂತರ ರೂಪಾಯಿಗಳನ್ನು ಹೊರ ಸೇವೆ ವ್ಯಕ್ತಿಯೊಬ್ಬ (ತೆರಿಗೆ ಸಲಹೆಗಾರ) ವ್ಯವಸ್ಥಿತವಾಗಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಆಸ್ತಿ ಮಾಲೀಕರ ಸ್ವಯಂ ಘೋಷಿತ ಆಸ್ತಿ ತೆರಿಗೆ ನಿರ್ಧರಿಸಿ ಚಲನ್ ತುಂಬಿಕೊಡಲು ಸರ್ಕಾರದ ನಿರ್ದೇಶನದಂತೆ 2003ರಿಂದ ಹೊರ ಸೇವೆ ಆಧಾರದಲ್ಲಿ (ತೆರಿಗೆ ಸಲಹೆಗಾರರು) ಕೆಲಸ ಮಾಡುತ್ತಿದ್ದ ಸಿಖಂದರ್ ಎಂಬಾತ ನಗರಸಭೆಗೆ ಪಂಗನಾಮ ಹಾಕಿ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಣ, ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ.
ಪೌರಾಯುಕ್ತ ಡಾ.ವೆಂಕಟೇಶಯ್ಯ ಪರಿಶೀಲನೆಯಿಂದ ಬಯಲಾಗಿರುವ ಈ ಹಗರಣದಿಂದ ನಗರಸಭೆಯಲ್ಲೆಗ ತಲ್ಲಣ ಸೃಷ್ಟಿಯಾಗಿದೆ. ಸಿಖಂದರ್ ವಿರುದ್ಧ ನಗರಸಭೆ ಆಯುಕ್ತರು ನಗರಠಾಣೆಗೆ ದೂರು ಸಲ್ಲಿಸಿದ್ದಾರೆ.
ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಾದಾಗ ನಾಗರಿಕರ ಆಸ್ತಿ ತೆರಿಗೆ ಅಂದಾಜು ಮಾಡಿ ನಮೂನೆ ಮತ್ತು ಬ್ಯಾಂಕ್ ಚಲನ್ ತುಂಬಿಕೊಡಲು ಸರ್ಕಾರದ ನಿರ್ದೇಶನದಂತೆ ನಿರು ದ್ಯೋಗಿ ಪದವೀಧರರಿಗೆ ಹೊರ ಸೇವೆ ವಹಿಸ ಲಾಗಿತ್ತು. ಹೀಗೆ ಹೊರ ಸೇವೆ ಅವಲಂಬಿಸಿದ ಸಿಖಂ ದರ್ ಪ್ರತಿ ಚಲನ್ ತುಂಬಲು ನಿಯಮದಂತೆ ರೂ. 25 ಪಡೆಯುವುದು ಆತನ ದುಡಿಮೆಯಾಗಿತ್ತು.
ಪ್ರಜ್ಞಾವಂತರು ಸ್ವಪ್ರೇರಣೆಯಿಂದ ಚಲನ್ ತುಂಬಿಸಿಕೊಂಡು ಬ್ಯಾಂಕ್‌ನಲ್ಲಿ ತೆರಿಗೆ ಹಣ ಪಾವತಿಸಿ ಹೋಗುತ್ತಿದ್ದರು. ಆದರೆ ಬ್ಯಾಂಕ್‌ಗೆ ಹೋಗಲು ವ್ಯವಧಾನ ಇಲ್ಲದವರು ಸಿಖಂದರ್ ಕೈಗೆ ತೆರಿಗೆ ಹಣ ಕೊಟ್ಟು ನೀವೆ ಕಟ್ಟಿಕೊಳ್ಳಿರೆಂದು ಹೇಳಿ ಹೋಗಲು ಆರಂಭಿಸಿದ ಮೇಲೆ ಹಣ ದೋಚುವ ಮಾರ್ಗ ಕಂಡುಕೊಂಡ. ಈಗ ಕೋಟ್ಯಧಿಪತಿ.
ಘಟನೆ ವಿವರ: ನಿಯಮಯಂತೆ ಚಲನ್ ಮೂಲಕ ಬ್ಯಾಂಕ್‌ಗೆ ತೆರಿಗೆ ಹಣ ಪಾವತಿಸಬೇಕು. ಆ ಚಲನ್‌ನಲ್ಲಿ ನಾಲ್ಕು ಭಾಗಗಳಿವೆ. ಹಣ ಕಟ್ಟಿ ಬ್ಯಾಂಕ್ ಮೊಹರು ಹಾಕಿಸಿಕೊಂಡ ತೆರಿಗೆದಾರರು ಎರಡು ಭಾಗ ಪಡೆದು ಒಂದನ್ನು ತಮ್ಮ ಅರ್ಜಿ ಸಹಿತ ನಗರಸಭೆಗೆ ಸಲ್ಲಿಸಬೇಕು. ಬ್ಯಾಂಕ್‌ನಲ್ಲಿ ಉಳಿಯುವ ಎರಡು ಭಾಗದಲ್ಲಿ ಒಂದನ್ನು ಅಲ್ಲಿ ಇಟ್ಟುಕೊಂಡು ಮತ್ತೊಂದನ್ನು ಮರು ದಿನ ನಗರಸಭೆಗೆ ತಲುಪಿಸಬೇಕು.
ತೆರಿಗೆದಾರರ ಬದಲು ಬ್ಯಾಂಕ್‌ಗೆ ತಾನೇ ಹೋಗಿ ಹಣ ಕಟ್ಟಲು ಟಿಪ್ಸ್ ಕೂಡ ಪಡೆಯುತ್ತಿದ್ದ ಸಿಖಂದರ್, ಬ್ಯಾಂಕ್ ಮತ್ತು ನಗರಸಭೆ ದೌರ್ಬಲ್ಯ ಅರಿತು ಹಣ ದೋಚುವುದನ್ನು ರೂಢಿಸಿಕೊಂಡ. ತೆರಿಗೆದಾರರು ರೂ. 10020 ಕಟ್ಟಬೇಕಿದ್ದರೆ ಅವರಿಂದ ಅಷ್ಟೂ ಹಣ ಪಡೆದು ಚಲನ್ ನಾಲ್ಲು ಭಾಗದಲ್ಲಿ ಕೇವಲ ರೂ. 20 ಪಾವತಿಸುವಂತೆ ಬರೆದು ಹಣ ಕಟ್ಟಿ ಬ್ಯಾಂಕ್‌ನಿಂದ ಮೊಹರು ಹಾಕಿಸಿಕೊಂಡು ಬರುತ್ತಿದ್ದ. ಆದರೆ ಚಲನ್‌ನ ಮೊದಲೆರಡು ಭಾಗಕ್ಕೆ ತೆರಿಗೆದಾರರ ನಿಜ ಹೆಸರು ಬರೆದು ಮತ್ತೆರಡು ಭಾಗಕ್ಕೆ ಯಾವುದೋ ಹೆಸರು, ಖಾತೆ ನಂ. ಬರೆದು ಬ್ಯಾಂಕ್‌ಗೆ ಚಲನ್ ಸಲ್ಲಿಸುತ್ತಿದ್ದ.
ಒಟ್ಟೊಟ್ಟಿಗೆ 15-20 ಚಲನ್ ತೆಗೆದುಕೊಂಡು ಬ್ಯಾಂಕ್‌ಗೆ ಹೋಗುತ್ತಿದ್ದ ಈತನಿಂದ ಅಲ್ಲಿ ಅಷ್ಟನ್ನೂ ಪಡೆದು ಚಲನ್ ವಿವರ ಪರಿಶೀಲಿಸಲು ಹೋಗದ ಸಿಬ್ಬಂದಿ ಒಟ್ಟು ಹಣ ಸಂದಾಯಕ್ಕೆ ರಸೀದಿ ಹಾಕಿ ಮೊಹರು ಒತ್ತಿ ಕೊಡುತ್ತಿದ್ದರು.
ಮೊಹರು ಹಾಕಿದ ಚಲನ್‌ನ ಮೊದಲೆರಡು ಭಾಗ ತನ್ನ ಕೈಸೇರಿದ ಮೇಲೆ ಆತ ಕೈಚಳಕ ತೋರಿರುವುದು ದಾಖಲೆಗಳಿಂದ ಬಹಿರಂಗ ಗೊಂಡಿದೆ. ಹಣ ಪಾವತಿಸಿದ ತೆರಿಗೆದಾರರಿಗೆ ಕೊಡುತ್ತಿದ್ದ ಭಾಗದಲ್ಲಿ ರೂ. 20 ಇದ್ದ ಸ್ಥಳದ ಹಿಂದೆ 100 ಸೇರಿಸಿ ಒಟ್ಟು ರೂ.10020 ಸಂದಾಯವಾಗಿರುವಂತೆ ತೋರಿಸುತ್ತಿದ್ದ.
ಭರ್ತಿ ಮಾಡಿದ ನಮೂನೆ ಸಹಿತ ನಗರಸಭೆ ಕಚೇರಿಗೆ ತಲುಪಿಸುತ್ತಿದ್ದ ಓಚರ್ ಭಾಗದಲ್ಲೂ ಇದೇ ರೀತಿ ಮಾಡುತ್ತಿದ್ದ. ಅಲ್ಲಿನ ದಾಖಲೆಗಳಲ್ಲಿ ತೆರಿಗೆದಾರರು ಪೂರ್ತಿ ಹಣ ಸಂದಾಯ ಮಾಡಿದ ಪಟ್ಟಿಗೆ ಸೇರುತ್ತಿದ್ದರು. ಮರು ದಿನ ಬ್ಯಾಂಕ್‌ನಿಂದ ಬರುತ್ತಿದ್ದ ಚಲನ್‌ನ ಒಂದು ಭಾಗ ಕಟ್ಟುಗಳಾಗಿ ಮೂಲೆ ಹಿಡಿಯುತ್ತಿತ್ತು.
ಈ ಚಲನ್‌ಗಳಿಗೆ ಅನುಮಾನ (ಆಸ್ತಿ-ತೆರಿಗೆ ವ್ಯತ್ಯಾಸ) ಬರದಿರಲೆಂದು ಬೇರೆ ಹೆಸರು ಬರೆಯುತ್ತಿದ್ದರಿಂದ ತೆರಿಗೆದಾರರು ನೈಜವಾಗಿ ಒಂದು ಪೈಸೆಯನ್ನೂ ನಗರಸಭೆಗೆ ಪಾವತಿಸಿದಂತಾಗಿಲ್ಲ.
ದುರ್ಬಲ
ಬ್ಯಾಂಕ್‌ನಲ್ಲಿ ಚಲನ್ ಪರಿಶೀಲಿಸುವ ಮತ್ತು ನಗರಸಭೆಯಲ್ಲಿ ತಾಳೆ ನೋಡುವ ವ್ಯವಸ್ಥೆ ಇಲ್ಲದಿರುವುದನ್ನು ಅರಿತೇ ಆತ ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡುತ್ತಿದ್ದ.
ಹೀಗೆ ಚಲನ್‌ನಲ್ಲಿ ನೈಜವಾಗಿ ಪಾವತಿಸಬೇಕಾದ ನಗದಿನ ಸಂಖ್ಯೆಯಲ್ಲಿ ಹಿಂದೆ ಅಥವಾ ಮುಂದೆ ಅಥವಾ ಆಚೀಚೆ ಸಂಖ್ಯೆ ಸೇರಿಸಿಕೊಳ್ಳಲು ಅವಕಾಶ ಇರುವಂತೆ ಚಲನ್ ತುಂಬಿ ನಂತರ ಕೈಚಳಕ ತೋರಿರುವುದು ತನಿಖೆ ವೇಳೆ ಪೌರಾಯುಕ್ತರಿಗೆ ಗೊತ್ತಾಗಿದೆ.
ಸುಳ್ಳು ಸಂದಾಯ ತೋರಿಸಿದ ಆ ಚಲನ್ ಪ್ರತಿ ಆಧರಿಸಿದ ಒಟ್ಟಾರೆ ಹಣಕ್ಕೂ ನೈಜವಾಗಿ ನಗರಸಭೆ ಖಾತೆಗೆ ಬಂದ ಹಣಕ್ಕೂ ಆಗಿರುವ ಭಾರಿ ವ್ಯತ್ಯಾಸ ಆಡಿಟ್‌ನಲ್ಲಿ ಗಮನಕ್ಕೆ ಬಾರಲಿಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ. ಎರಡು ವರ್ಷದಿಂದ ನಗರಸಭೆ ಆದಾಯದಲ್ಲಿ ಹೆಚ್ಚಳ ಕಂಡು ಬಂದಿದ್ದರೂ; ಸೋರಿಕೆಯಾಗಿರುವ ಈ ಹಣ ಲೆಕ್ಕಕ್ಕಿಟ್ಟರೆ ಹೌಹಾರುವಂತಿದೆ.
ಈ ಅವ್ಯವಹಾರಕ್ಕೆ ಬಳಸಿದ ಕೆನರಾಬ್ಯಾಂಕ್‌ನಲ್ಲೇ ಸಿಖಂದರ್ ವೈಯಕ್ತಿಕ ಖಾತೆ ಹೊಂದಿ ಮೂರು ವರ್ಷದಲ್ಲಿ ಸುಮಾರು ರೂ. 60 ಲಕ್ಷ ಜಮೆ ಮಾಡಿ ಆಗಾಗ್ಗೆ ತೆಗೆದು ಬಳಸಿದ್ದಾನೆ. ಅಷ್ಟಾಗಿಯೂ ಆದಾಯ ತೆರಿಗೆ ಇಲಾಖೆ ಅಥವಾ ಬ್ಯಾಂಕ್‌ಗೆ ಅನುಮಾನ ಬಾರದಿರುವುದೂ ಸೋಜಿಗ ಹುಟ್ಟಿಸಿದೆ.
ಬೆಳಕಿಗೆ ಬಂದ ಹಗರಣ
ಕೆನರಾ ಬ್ಯಾಂಕ್‌ನಲ್ಲಿ 60 ಲಕ್ಷ
ವ್ಯವಹಾರ
ಒಂದೇ ದಿನ 6.50 ಲಕ್ಷ
ಬಿಡಿಸಿಕೊಂಡ ದಾಖಲೆ
ತಿಂಗಳಲ್ಲಿ ರೂ. 1.5 ಲಕ್ಷ ಜಮಾ
ಮೂರು ವರ್ಷದಲ್ಲಿ 5ಕ್ಕೂ ಹೆಚ್ಚು
ನಿವೇಶನ, ಅರ್ಧ ಎಕರೆ ಭೂಮಿ,
ಸಂಬಂಧಿಕರ ಹೆಸರಲ್ಲಿ ನಿವೇಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.