ADVERTISEMENT

ಹರ್ಡೇಕರ್ ಮಂಜಪ್ಪ ಸ್ಮರಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 9:00 IST
Last Updated 3 ಮಾರ್ಚ್ 2014, 9:00 IST

ತಿಪಟೂರು: ಮಹಾತ್ಮ ಗಾಂಧೀಜಿ ರೀತಿ ಸರಳವಾಗಿ ಬದುಕಿ ಸ್ವಾತಂತ್ರ್ಯ ಚಳವಳಿ­ಯಲ್ಲಿ ತೊಡಗಿಸಿಕೊಂಡಿದ್ದ ಹರ್ಡೇ­ಕರ್ ಮಂಜಪ್ಪ ಅವರನ್ನು ಮತ್ತೆ ಮತ್ತೆ ನೆನೆಯುವ ಮೂಲಕ ಹೊಸ ಜನಾಂಗ­ದಲ್ಲಿ ನೈತಿಕತೆ ಕಟ್ಟಬೇಕಿದೆ ಎಂದು ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ತಿಳಿಸಿದರು.

ನಗರದ ಗುರುಕುಲಾನಂದಾ­ಶ್ರಮ­ದಲ್ಲಿ ಈಚೆಗೆ ನಡೆದ ಲಿ.ಮಲಿಗಮ್ಮ ಶಿವಪ್ಪಶಾಸ್ತ್ರಿ ಸ್ಮರಣಾರ್ಥ ದತ್ತಿ ಮಾಲಿಕೆಯಲ್ಲಿ ಅವರು ಹರ್ಡೇಕರ್ ಕುರಿತು ಉಪನ್ಯಾಸ ನೀಡಿದರು.

1886ರ ಫೆ.18ರಂದು ಬನವಾಸಿಯ ಬಡ ಕುಟುಂಬದಲ್ಲಿ ಜನಿಸಿದ ಮಂಜಪ್ಪ ಅವರು ಪರಿಶ್ರಮ­ದಿಂದ ಕೂಲಿ ಮಠದಲ್ಲಿ ವಿದ್ಯೆ ಕಲಿತರು. ಶಿಕ್ಷಕ ವೃತ್ತಿಗೆ ಸೇರಿದ ಸಂದರ್ಭದಲ್ಲೇ ಮಹಾತ್ಮಾ ಗಾಂಧಿ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಎಂದು ಮಂಜಪ್ಪ ಜೀವನ ನೆನಪಿಸಿದರು.

50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಸೇವೆಯನ್ನೂ ಸಲ್ಲಿಸಿದರು. ಅವರ ಬದುಕು ಮತ್ತು ಹೋರಾಟ ಅರಿಯುವ ಮೂಲಕ ನಾವು ಹೊಸ ಕಾಲದ ಸವಾಲುಗಳನ್ನು ಎದುರಿಸ­ಬೇಕು ಎಂದು ತಿಳಿಸಿದರು.

ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ನಗರಸಭೆ ಸದಸ್ಯ ಎಚ್.ಸಿ.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದರು.

ಲೆಕ್ಕ ಪರಿಶೋಧಕ ವಿರೂಪಾಕ್ಷಪ್ಪ, ದತ್ತಿ ಸೇವಾಕರ್ತ ಹುಳಿಯಾರಿನ ಉಪನ್ಯಾಸಕ ತ.ಶಿ.ಬಸವಮೂರ್ತಿ, ವರ್ತಕ ರೇಣುಕಾರಾಧ್ಯ, ಕಸಾಪ ಘಟಕದ ಅಧ್ಯಕ್ಷ ಶಿವಕುಮಾರ್, ಉಪನ್ಯಾಸಕ ಜಿ.ಎಸ್.ರಘು ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.