ADVERTISEMENT

ಹಾಲು ಒಕ್ಕೂಟಕ್ಕೆ 6.75 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 12:00 IST
Last Updated 12 ಅಕ್ಟೋಬರ್ 2012, 12:00 IST

ತುಮಕೂರು: ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆಗಸ್ಟ್ ತಿಂಗಳಿಂದ ನಷ್ಟಕ್ಕೆ ಸಿಲುಕಿದೆ. ಈವರೆಗೂ ರೂ. 6.75 ಕೋಟಿ ನಷ್ಟ ಅನುಭವಿಸಿದೆ ಎಂಬ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ರೈತರಿಂದ ಖರೀದಿಸಿದ ಹಾಲು ಮಾರಾಟವೇ ಆಗುತ್ತಿಲ್ಲ. ನಷ್ಟ ಸರಿದೂಗಿಸಲು ಹಾಲಿನ ದರ ಕಡಿತಗೊಳಿಸಿದೆ.

ರೈತರ ಹಾಲಿನ ಹಣ ಪಾವತಿಗೂ ಹಣ ಇಲ್ಲದೆ ತತ್ತರಿಸಿರುವ ಒಕ್ಕೂಟ ಈಗ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ರೂ. 7 ಕೋಟಿ ಸಾಲ ಪಡೆದು, ಬಡ್ಡಿ ಕಟ್ಟುವ ಪರಿಸ್ಥಿತಿಗೆ ಬಂದಿದೆ. ಹಾಲಿನ ಮಾರುಕಟ್ಟೆ ಮುಂದಿನ ದಿನಗಳಲ್ಲೂ ಸಿಗದಿದ್ದರೆ ಒಕ್ಕೂಟ ಮತ್ತಷ್ಟು ನಷ್ಟಕ್ಕೆ ಸಿಲುಕಲಿದೆ.

ಈವರೆಗೂ ಪ್ರತಿ ಲೀಟರ್ ಹಾಲಿಗೆ ಒಕ್ಕೂಟವು ರೂ. 18.70 ಪೈಸೆ ನೀಡುತ್ತಿತ್ತು. ಆದರೆ ಈಗ ಲೀಟರ್ ಹಾಲಿನ ಬೆಲೆ ರೂ. 18ಕ್ಕೆ ಇಳಿಸಿದೆ. ಒಕ್ಕೂಟ ಪ್ರತಿ ಲೀಟರ್‌ಗೆ ರೂ. 18.30ಅನ್ನು ಸಹಕಾರಿ ಸಂಘಗಳಿಗೆ ನೀಡಲಿದೆ. ಇದರಲ್ಲಿ 30 ಪೈಸೆ ಸಂಘಗಳಿಗೆ ಹೋಗಲಿದ್ದು, ಉಳಿದ ರೂ. 18 ರೈತರಿಗೆ ಸಿಗಲಿದೆ. ಸರ್ಕಾರದ 2 ರೂಪಾಯಿ ಪ್ರೋತ್ಸಾಹ ಧನ ಸೇರಿದರೆ ರೈತರಿಗೆ ಲೀಟರ್ ಹಾಲಿಗೆ ರೂ. 20 ಸಿಗುತ್ತಿದೆ.

ಹಾಲು ಉತ್ಪಾದನೆಯಲ್ಲಿ ಜಿಲ್ಲೆ ಮಂಚೂಣಿಯಲ್ಲಿದೆ. ಎರಡು ಮೂರು ವರ್ಷಗಳಿಂದ ಹಾಲಿಗೆ ಉತ್ತಮ ಮಾರುಕಟ್ಟೆ ದೊರೆತ ಕಾರಣ ಹಳ್ಳಿಹಳ್ಳಿಗಳಲ್ಲಿ ಹಾಲು ಸಹಕಾರ ಸಂಘಗಳು ಜನ್ಮತಾಳಿದವು. ಬರ ಹಾಗೂ ತೆಂಗು, ಅಡಿಕೆ ಬೆಳೆಗೆ ಬಂದ ರೋಗಬಾಧೆ, ಬೆಳೆನಷ್ಟದಿಂದ ಕಂಗಾಲಾಗಿದ್ದ ಜಿಲ್ಲೆಯ ರೈತರು ಹೈನೋದ್ಯಮಕ್ಕೆ ಮುಂದಾದರು. ಆದರೀಗ ರೈತರ ಬದುಕಿಗೆ ಹಾಲು ಕೂಡ `ಹಾಲಾಹಲ~ವಾಗುತ್ತಿದೆ.

ಒಕ್ಕೂಟದ ಬಳಿ ಹಣ ಇಲ್ಲದೆ 40 ದಿನಗಳ ಹಾಲಿನ ಹಣವನ್ನು ರೈತರಿಗೆ ಬಟವಾಡೆ ಮಾಡಿಲ್ಲ. ಹೀಗಾಗಿ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಅ. 1ರಿಂದ ಹಾಲಿನ ದರ ರೂ. 70 ಪೈಸೆ ಇಳಿಸಿದ ಒಕ್ಕೂಟ, ಅ. 5ರಿಂದ ಪಶು ಆಹಾರದ 50 ಕೆ.ಜಿ ಚೀಲಕ್ಕೆ ರೂ. 100 ಬೆಲೆ ಹೆಚ್ಚಿಸಿದೆ. ಒಂದೆಡೆ ಹಾಲಿನ ದರ ಇಳಿದರೆ, ಇನ್ನೊಂದೆಡೆ ಪಶು ಆಹಾರದ ಬೆಲೆ ಏರಿಕೆ ರೈತರನ್ನು ಕಂಗೆಡಿಸಿದೆ.

ಜಿಲ್ಲೆಯಲ್ಲಿ ಪ್ರತಿದಿನ 4.59 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ ಕೇವಲ 2.45 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಉಳಿದ ಹಾಲು ಸಂಸ್ಕರಣೆ ಮಾಡಿ ಪೌಡರ್, ಬೆಣ್ಣೆ ಮಾಡಿ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಜಮಖಂಡಿ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಹಾಲು ಕಳುಹಿಸಿ ಸಂಸ್ಕರಣೆ ಮಾಡಿಸುತ್ತಿರುವುದು ಒಕ್ಕೂಟದ ಉತ್ಪನ್ನ, ಆರ್ಥಿಕ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಒಂದು ಕೆ.ಜಿ ಹಾಲು ಪೌಡರ್ ತಯಾರಿಸಲು ರೂ. 170ರಿಂದ ರೂ. 175 ಖರ್ಚು ಬೀಳುತ್ತಿದೆ.

ಮಾರುಕಟ್ಟೆಯಲ್ಲಿ ಕೆ.ಜಿ ಹಾಲಿನ ಪೌಂಡರ್‌ಅನ್ನು ರೂ. 120ಕ್ಕೂ ಕೇಳುತ್ತಿಲ್ಲ. ಹೀಗಾಗಿ ಸುಮಾರು 2000 ಟನ್ ಹಾಲಿನ ಪುಡಿ, 650 ಟನ್ ಬೆಣ್ಣೆ ಒಕ್ಕೂಟದ ಗೋದಾಮುಗಳಲ್ಲಿ ಕೊಳೆಯುತ್ತಾ ಬಿದ್ದಿದೆ. ಇದರ ಮೌಲ್ಯವೇ ಸುಮಾರು ರೂ. 38 ಕೋಟಿ ಎನ್ನಲಾಗಿದೆ.

ಖರೀದಿಸಿ ನಿಲ್ಲಿಸಿದ ಕೇರಳ: ಒಕ್ಕೂಟದಿಂದ ಕೇರಳ ರಾಜ್ಯವು ಹಾಲು ಖರೀದಿಸುತಿತ್ತು. ಈ ವರ್ಷ ತಮಿಳುನಾಡು ಕಡಿಮೆ ಬೆಲೆಗೆ ಹಾಲು ಪೂರೈಕೆ ಮಾಡುತ್ತಿರುವುದರಿಂದ ಜಿಲ್ಲೆಯ ಹಾಲು ಕೊಳ್ಳುತ್ತಿಲ್ಲ. ಇದು ಪರಿಣಾಮ ಬೀರಿದೆ.

ಹಾಲಿಗೆ ಮಾರುಕಟ್ಟೆ ಇರದಿದ್ದರೂ ಉತ್ಪಾದನೆ ವಿಪರೀತ ಏರುತ್ತಿದೆ. ಈ ವರ್ಷ ಶೇ 65ರಷ್ಟು ಹೆಚ್ಚಿದ್ದು, ಪ್ರತಿ ದಿನ 75 ಸಾವಿರ ಲೀಟರ್ ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿದೆ. ಇದು ಒಕ್ಕೂಟಕ್ಕೆ `ನುಂಗಲಾರದ ಬಿಸಿ ತುಪ್ಪ~ದಂತಾಗಿದೆ.

`ನಷ್ಟ ಸರಿದೂಗಿಸಿಕೊಳ್ಳಲು ಹಾಲಿನ ದರ ಕಡಿಮೆ ಮಾಡಲಾಗಿದೆ. ಹಾಲಿನ ಪುಡಿಗೆ ಮಾರುಕಟ್ಟೆ ದೊರೆಯುತ್ತಿದ್ದಂತೆ ಸಮಸ್ಯೆ ಬಗೆಹರಿಯಲಿದೆ. ಹಾಲಿನ ದರ ಮತ್ತಷ್ಟು ಕಡಿಮೆ ಮಾಡುವ ಪ್ರಸ್ತಾಪ ಒಕ್ಕೂಟದ ಮುಂದೆ ಇಲ್ಲ~ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.