ADVERTISEMENT

ಹೀಗಿದೆ ನೋಡಿ ನಮ್ಮೂರ ರಸ್ತೆ...

ಸಿ.ಕೆ.ಮಹೇಂದ್ರ
Published 23 ಸೆಪ್ಟೆಂಬರ್ 2011, 8:15 IST
Last Updated 23 ಸೆಪ್ಟೆಂಬರ್ 2011, 8:15 IST

ತುಮಕೂರು: ಜಿಲ್ಲೆಯ ರಸ್ತೆಗಳ ಗೋಳು ಹೇಳ ತೀರದಾಗಿದೆ. ಯಾವ ಊರು, ಪಟ್ಟಣಕ್ಕೆ ಕಾಲಿಟ್ಟರೂ ಗುಂಡಿ ಬಿದ್ದ, ಕಿತ್ತು ಹೋಗಿರುವ ರಸ್ತೆಗಳೇ ಆಹ್ವಾನ ನೀಡುತ್ತವೆ.

ರಸ್ತೆ ದುರಸ್ತಿ, ಹೊಸ ರಸ್ತೆಗಳ ನಿರ್ಮಾಣಕ್ಕೆ ಜಿಲ್ಲೆಗೆ ಕೋಟ್ಯಂತರ ರೂಪಾಯಿ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿವೆ. ಆದರೆ ಜಿಲ್ಲೆಗೆ ಬಂದ ಅನುದಾನ ಹೊಳೆಯಲ್ಲಿ ತೊಳೆದ ಹುಣಸೆ ಹಣ್ಣಿನಂತಾಗಿದೆ. ಜಿಲ್ಲೆಯ ರಸ್ತೆಗಳದ್ದು ಅದೇ ವ್ಯಥೆ. ಗುಂಡಿ ಬಿದ್ದ ರಸ್ತೆಗಳು, ಕುಸಿದ ರಸ್ತೆಗಳು, ಕಿತ್ತುಹೋದ ರಸ್ತೆಗಳು, ಚರಂಡಿ ಇಲ್ಲದೆ ನೀರು ಪಾಲಾದ ರಸ್ತೆಗಳು ಹೀಗೆ ರಸ್ತೆಗಳ ಅಧ್ವಾನ ನಾನಾ ವಿಧ.

ಜಿಲ್ಲಾ ಪಂಚಾಯಿತಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ, ಲೋಕೋಪಯೋಗಿ ಇಲಾಖೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ರಸ್ತೆ ನಿರ್ವಹಣೆ ಮತ್ತು ದುರಸ್ತಿ, ಕಾಮಗಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ಜಿಲ್ಲೆಯ ಮಟ್ಟಿಗೆ ಇಷ್ಟೂ ಇಲಾಖೆಗಳು, ಸಂಸ್ಥೆಗಳು ಕರ್ತವ್ಯ ಲೋಪವೆಸಗಿರುವುದು ಯಾವ ರಸ್ತೆಗೆ ಕಾಲಿಟ್ಟರೂ ಕಣ್ಣಿಗೆ ಗೋಚರಿಸುತ್ತದೆ.

`ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ಗುಂಡಿ ಮುಚ್ಚುವಲ್ಲಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಸೇರಿ ಹಣವನ್ನು ಹಂಚಿ ತಿನ್ನತೊಡಗಿದ್ದಾರೆ. ಈ ಕಳಪೆ, ಭ್ರಷ್ಟಾಚಾರ ನೋಡಲು ಆಗುತ್ತಿಲ್ಲ. ಮೊದಲು ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು~ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಸ್.ಬಸವರಾಜ್ ಒತ್ತಾಯಿಸಿದ್ದರು. ಜಿಲ್ಲೆಯ ರಸ್ತೆಗಳ ಸ್ಥಿತಿ-ಗತಿ ಗಮನಿಸಿದರೆ ಮೊದಲು ಈ ಕೆಲಸ ಮಾಡಬೇಕೆಂದು ಅನಿಸುತ್ತದೆ. ಅಂದರೆ `ಬೆಂಕಿಗೆ ಗಂಟೆ ಯಾರಾದರೂ ಕಟ್ಟಬೇಕು~. ಅದು ಯಾರು ಎಂಬುದೇ ಜಿಲ್ಲೆಯ ಮಟ್ಟಿಗಿನ ದೊಡ್ಡ ಪ್ರಶ್ನೆಯಾಗಿದೆ.
ಜಿಲ್ಲೆಯಲ್ಲಿ ಪದೇಪದೆ ಆಗುತ್ತಿರುವ ಅಪಘಾತಗಳಿಗೂ ರಸ್ತೆಗಳೇ ಕಾರಣ ಎಂದು ನಿಮ್ಹಾನ್ಸ್ ನಡೆಸಿರುವ ಸಮೀಕ್ಷೆಯಲ್ಲೂ ಹೇಳಲಾಗಿದೆ. ಜನರ ರಸ್ತೆ ಸಂಕಷ್ಟ ನೋಡಿಯೂ ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂಬ ದೂರು ಜಿಲ್ಲೆಯಲ್ಲಿ ವ್ಯಾಪಕವಾಗಿದೆ.
ಪ್ರಯಾಸದ ಕುಣಿಗಲ್ ರಸ್ತೆ

ಕುಣಿಗಲ್ ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಂಡಿಗಳದ್ದೇ ಕಾರುಬಾರು. ತಾಲ್ಲೂಕಿನ 40 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು `ಗುಂಡಿಗಳ ಹೆದ್ದಾರಿ~ ಎಂದೇ ಬಣ್ಣಿಸಬಹುದು. ಚಿಕ್ಕಮಳಲವಾಡಿ, ಕೊತ್ತಗೆರೆ, ಪಟ್ಟಣದ ಮದ್ದೂರು ರಸ್ತೆ, ಹುಲಿಯೂರುದುರ್ಗ ಮಾರ್ಗವಾಗಿ ಸಂಚರಸಬೇಕಾದರೆ `ಸರ್ಕಸ್~ ಮಾಡಬೇಕು.

ರಸ್ತೆಗಳ ಅವಾಂತರದಿಂದಾಗಿ ತುಮಕೂರು- ಮೈಸೂರು ಕಡೆಗೆ ಸಂಚಾರ ನಿಗದಿತ ಸಮಯಕ್ಕೆ ಸಾಧ್ಯವೇ ಇಲ್ಲವಂತಾಗಿದೆ. ಪ್ರತಿ ದಿನ ಅಪಘಾತ ಇಲ್ಲಿ ಮಾಮೂಲು. ದೊಡ್ಡಮಳಲವಾಡಿ ರಸ್ತೆ ದುರಸ್ತಿ ಮಾಡಿದ ವೇಗದಲ್ಲೇ ಮತ್ತೆ ಗುಂಡಿಮಯವಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎನ್ನುತ್ತಾರೆ ಇಲ್ಲಿನ ಜನರು.

ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಂತೂ ಅವ್ಯವಸ್ಥೆಯ ಆಗರವಾಗಿದೆ. ರಸ್ತೆ ದುರಸ್ತಿಗಾಗಿ ಪ್ರತಿಭಟನೆ ನಡೆದಾಗ ರಸ್ತೆಗೆ ತೇಪೆ ಹಚ್ಚಲಾಗುತ್ತದೆ. ಪಟ್ಟಣದಲ್ಲಿ ಹಾದುಹೋಗಿರುವ ಹೆದ್ದಾರಿ ನಿರ್ವಹಣೆ ಯಾರಿಗೆ (ಯಾವ ಇಲಾಖೆ) ಸೇರಿದೆ ಎಂಬುದೇ ಗೊಂದಲದ ಗೂಡಾಗಿದೆ. ಪಾದಚಾರಿಗಳ ಮಾರ್ಗವೇ ಇಲ್ಲದಂತೆ ಅಂಗಡಿ ಮಾಲೀಕರದಿಂದ ಒತ್ತುವರಿ ನಡೆದಿದೆ ಎನ್ನುತ್ತಾರೆ ಶಿವಲಿಂಗಯ್ಯ, ರಾಮಕೃಷ್ಣಪ್ಪ, ನಾರಾಯಣಪ್ಪ, ಗೋಪಾಲಯ್ಯ.

ಗಮಿಮಠದಿಂದ ಹೇರೋಹಳ್ಳಿ (25 ಕಿ.ಮೀ.), ಇಪ್ಪಾಡಿ- ಸಿಗೇಪಾಳ್ಯ- ಸಿದ್ದರಾಮಯ್ಯನಪಾಳ್ಯ (5 ಕಿ.ಮೀ.), ರಾಜಗೆರೆ, ಚಿಕ್ಕಹೊನ್ನೇಗೌಡನಪಾಳ್ಯ, ಬಾಗೇನಹಳ್ಳಿ ಗ್ರಾಮದ ರಸ್ತೆಗಳನ್ನು ರಸ್ತೆಗಳೆಂದು ಹೇಳುವಂತಿಲ್ಲ. ಅಷ್ಟರ ಮಟ್ಟಿಗೆ ಹದಗೆಟ್ಟಿವೆ ಎನ್ನುತ್ತಾರೆ ಗ್ರಾಮಸ್ಥರಾದ ರಮೇಶ್, ಶಿವಣ್ಣ, ವೆಂಕಟೇಶ್.

ಚಿಕ್ಕನಾಯಕನಹಳ್ಳಿ: ಹಳ್ಳ ಗುಂಡಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಸ್ತೆ ಸ್ಥಿತಿ ವಿವರಿಸುವಂತಿಲ್ಲ. ಗಣಿ ಆರ್ಭಟಕ್ಕೆ ಸಿಲುಕಿ ಇಲ್ಲಿನ ರಸ್ತೆಗಳು ಛಿದ್ರಗೊಂಡಿವೆ. ಇಲ್ಲಿನ ರಸ್ತೆಗಳನ್ನು `ಹಳ್ಳ-ಗುಂಡಿ ರಸ್ತೆಗಳೆಂದೇ~ ಜೋಕ್ ಮಾಡಲಾಗುತ್ತದೆ.

ನಗರ ಹಾದುಹೋಗುವ ಬಿ.ಎಚ್.ಮುಖ್ಯರಸ್ತೆಯು ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದಲೇ ತನ್ನ ಹಾಳಾದ ಕಥೆಯನ್ನು ಹೇಳುತ್ತಾ ಸಾಗುತ್ತದೆ. ಅಲ್ಲಲ್ಲಿ ಕಿತ್ತ ಜಲ್ಲಿಯ ದೃಶ್ಯ, ಗುಂಡಿಗಳೆ ತುಂಬಿವೆ. ಈ ರಸ್ತೆಯ ಗುಂಡಿ ಮುಚ್ಚಿದ ಒಂದೆರಡು ದಿನಗಳಲ್ಲೇ ಮತ್ತೇ ಯತಾಸ್ಥಿತಿಗೆ ರಸ್ತೆ ಬರುವುದು ಇಲ್ಲಿನ ವೈಶಿಷ್ಟ್ಯ. ಅಷ್ಟರ ಮಟ್ಟಿಗೆ ಕಳಪೆ ಕೆಲಸ ಎಗ್ಗಿಲ್ಲದೇ ನಡೆದಿದೆ ಎನ್ನುತ್ತಾರೆ ಪಟ್ಟಣದ ಜನತೆ.

ಚಿಕ್ಕನಾಯಕನಹಳ್ಳಿ- ಮತಿಘಟ್ಟ ನಡುವಿನ ನವಿಲೆ ಗ್ರಾಮದ ಎಲ್ಲೆಯಿಂದ ಬೇವಿನಹಳ್ಳಿಯವರೆಗೆ 5 ಕಿ.ಮೀ. ರಸ್ತೆ ಬೈಲಪ್ಪನಮಠ- ಬರಗೂರು- ಮತಿಘಟ್ಟ ಮಾರ್ಗದ 10 ಕಿ.ಮೀ. ರಸ್ತೆ, ಮತಿಘಟ್ಟ- ಕಾಮಲಾಪುರ, ಕಂದಿಕೆರೆ- ತಿಮ್ಮನಹಳ್ಳಿರಸ್ತೆ, ಬರಸಿಡ್ಲಹಳ್ಳಿ- ರಾಮನಹಳ್ಳಿಯಿಂದ ತಿಮ್ಮನಹಳ್ಳಿ ರಸ್ತೆ,  ಕಂದಿಕೆರೆ- ಚಿಕ್ಕಬಿದರೆ ಮೂಲಕ ನೊಣವಿನಕೆರೆ ರಸ್ತೆ, ಅಣೆಪಾಳ್ಯ- ಕುಶಾಲಪುರ, ಬರಕನಾಳ್- ಅಣೆಪಾಳ್ಯ- ಕಂದಿಕೆರೆ ರಸ್ತೆಯಲ್ಲಿ ಒಮ್ಮೆ ತಿರುಗಾಡಿ ಬಂದರೆ ರಸ್ತೆಗಳ ದುಃಸ್ಥಿತಿ ಕಣ್ಣಿಗೆ ರಾಚುತ್ತದೆ.

ವಾಹನ ಹೋಗುವುದಿರಲಿ ಜನರು ಕೂಡ ಈ ರಸ್ತೆಗಳಲ್ಲಿ ನಡೆದಾಡಲೂ ಕಷ್ಟ ಎನ್ನುತ್ತಾರೆ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಯ್ಯ.

ಹೊಯ್ಸಳಕಟ್ಟೆ- ದಸೂಡಿವರೆಗಿನ 10 ಕಿ.ಮೀ. ರಸ್ತೆ ಸಂಚರಿಸಲು ಒಂದು ಗಂಟೆ ಬೇಕು. ಲಾರಿ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದೆ. ಜೊತೆಗೆ ಸೋಮನಹಳ್ಳಿ- ದಸೂಡಿ ಕ್ರಾಸ್, ಮೇಲನಹಳ್ಳಿ- ಚಿಕ್ಕಬ್ಯಾಲದಕೆರೆ ರಸ್ತೆಗಳಲ್ಲಿ ಜಲ್ಲಿಗಳು ಕಿತ್ತು ಬಂದಿದ್ದು ಜನರು ಕೂಡ ಓಡಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಗಾಣದಾಳು ಗ್ರಾಮದ ವಕೀಲ ಜಿ.ಎಸ್.ಚನ್ನಬಸಪ್ಪ.

ಚಿಕ್ಕನಾಯಕನಹಳ್ಳಿಯಿಂದ ತಿಪಟೂರು ಮಾರ್ಗದ ರಸ್ತೆ ಗೋಳು ಹೇಳ ತೀರದಾಗಿದೆ. ದುಗಡಿಹಳ್ಳಿ- ಈರಲಗೆರೆ ಗೇಟ್ ನಡುವಿನ ಮನೆಗಳಲ್ಲಿ ನಿತ್ಯ ದೂಳಿನ ಸ್ನಾನ. ರಸ್ತೆ ಕಿತ್ತಿರುವುದರಿಂದ ದೂಳು ವಿಪರೀತವಾಗಿದ್ದು, ಇಲ್ಲಿನ ಜನತೆ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಕಳಪೆ ಕಾಮಗಾರಿಯಿಂದಾಗಿ ಒಂದೆರಡು ವರ್ಷಗಳ ಹಿಂದೆ ನಿರ್ಮಾಣಗೊಂಡ ಹೊಸ ರಸ್ತೆಗಳು ಕಿತ್ತು ಹೋಗಿವೆ ಎನ್ನುತ್ತಾರೆ ಪ್ರಭುಸ್ವಾಮಿ.

ಚಿಕ್ಕನಾಯಕನಹಳ್ಳಿಗೆ ಹೊಂದಿಕೊಂಡಂತಿರುವ ದಿಬ್ಬದಹಳ್ಳಿ- ಬಾವನಹಳ್ಳಿಯಿಂದ ಪುಣ್ಯಕ್ಷೇತ್ರವಾದ ನಿರ್ವಾಣಸ್ವಾಮಿ ಗದ್ದಿಗೆಯ ರಸ್ತೆ ಹಾಳು ಬಿದ್ದಿದ್ದರೆ, ಕಾಡೇನಹಳ್ಳಿಯಿಂದ ದಬ್ಬೆಘಟ್ಟದ ರಸ್ತೆಯು ಕೇಜಿಗೆಹಳ್ಳಿ ಮಾರ್ಗದವರೆಗೂ ಜಲ್ಲಿ ಕಿತ್ತು ಬಂದಿದೆ. ಪುರಸಭೆಗೆ ರಸ್ತೆ ದುರಸ್ತಿಗಾಗಿ ರೂ. 5 ಕೋಟಿ ಅನುದಾನ ನೀಡಲಾಗಿದ್ದರೂ ರಸ್ತೆಗಳಿಗೆ ಮುಕ್ತಿ ಸಿಕ್ಕಿಲ್ಲ.

ನಾಲ್ಕರಲ್ಲಿ ಒಂದೂ ಸರಿ ಇಲ್ಲ
ತೋವಿನಕೆರೆಯಿಂದ ತುಮಕೂರು ತಲುಪಲು ನಾಲ್ಕು ರಸ್ತೆ ಮಾರ್ಗಗಳಿವೆ. ಒಂದಾದರೂ ಸರಿ ಇಲ್ಲ. ಈ ರಸ್ತೆಗಳಲ್ಲಿ ಪ್ರಯಾಣಿಸುವುದೆ ದೊಡ್ಡ ಪ್ರಯಾಸ.
ದೇವಲಾಪುರ, ಕೆಸ್ತೂರು ಮಾರ್ಗದಲ್ಲಿ ಸಂಚಾರ ಹೆಚ್ಚಿದೆ. 1-2 ಅಡಿವರೆಗೆ ಆಳದ ಗುಂಡಿಗಳಿವೆ. ದ್ವಿಚಕ್ರದಲ್ಲಿ ಬಿದ್ದವರೇ ಹೆಚ್ಚು. ತೋವಿನಕೆರೆ ರಸ್ತೆಗಳ ಅಪಘಾತಗಳ ರಹದಾರಿ ಎಂಬ ಮಾತು 108 ಆರೋಗ್ಯ ಕವಚ ವಾಹನ ಸಿಬ್ಬಂದಿಯಿಂದ ಕೇಳಿಬರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಈ ರಸ್ತೆ ಮಾರ್ಗ ಸೇರಿದೆಯಾದರೂ ದುರಸ್ತಿ ಭಾಗ್ಯ ಇದೂವರೆಗೂ ಕೂಡಿಬಂದಿಲ್ಲ. ಶಾಸಕರು ಗಮನ ಹರಿಸುತ್ತಿಲ್ಲ ಎಂಬುದು ಇಲ್ಲಿನ ಜನರ ಆರೋಪ.

ಎಂದು ಸರಿಯಾದೀತು ಶಿರಾ ರಸ್ತೆ
ಶಿರಾ ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ 48 ಕಿ.ಮೀ. ಉದ್ದದ ಶಿರಾ- ಅಮರಾಪುರ ರಸ್ತೆ ದುರಸ್ತಿಗೆ ಪಟ್ಟನಾಯಕನಹಳ್ಳಿ ಮಠಾಧೀಶ ನಂಜಾವಧೂತ ಸ್ವಾಮೀಜಿ ಬೀದಿಗಿಳಿದು ಹೋರಾಟ ಮಾಡಬೇಕಾಯಿತು. ಆದರೂ ವೀರಬೊಮ್ಮನಹಳ್ಳಿ ಗೇಟ್‌ವರೆಗೆ (22 ಕಿ.ಮೀ.) ರಸ್ತೆ ದುರಸ್ತಿ ಕಂಡಿದ್ದು, ಅಲ್ಲಿಂದಾಚೆಗೆ ಆಂಧ್ರಗಡಿವರೆಗೂ ಪ್ರಯಾಣ ಪ್ರಯಾಸ ಎನ್ನುವಂಥಾಗಿದೆ. ರಾಜ್ಯದ ಗಡಿ ಭಾಗದ ರಸ್ತೆ ಕಳಪೆ, ಹದಗೆಟ್ಟಿದ್ದರೆ, ಪಕ್ಕದ ಆಂಧ್ರಪ್ರದೇಶದ ರಸ್ತೆಗಳು ಗುಣಮಟ್ಟದಿಂದ ಕೂಡಿದ್ದು, ಜಿಲ್ಲೆಯ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

ಶಿರಾ- ಚಂಗಾವರ ರಸ್ತೆ ಅರ್ಧ ಕಿತ್ತು ಹೋಗಿರುವ ಡಾಂಬರು, ಇನ್ನರ್ಧಕ್ಕೆ ಡಾಂಬರೇ ಇಲ್ಲ. ಭೂತಕಾಟನಹಳ್ಳಿ ಮುಂದಿನ ಕಗ್ಗಲಡು ಕೆರೆ ಹಿಂಭಾಗದ ರಸ್ತೆ, ಗೌಡಗೆರೆ- ಹೊನ್ನೇನಹಳ್ಳಿವರೆಗೂ ರಸ್ತೆಯನ್ನು ಅಲ್ಲಲ್ಲಿ ಡಾಂಬರೀಕಣ ಮಾಡದೆ ಬಿಟ್ಟಿರುವುದು ಯಕ್ಷ ಪ್ರಶ್ನೆಯಾಗಿದೆ.

ಶಿರಾ- ಬುಕ್ಕಾಪಟ್ಟಣ- ಹುಳಿಯಾರ್ ರಸ್ತೆಯಲ್ಲೂ ಡಾಂಬರು ಕಿತ್ತಿದ್ದು, ಕೆಲವೆಡೆ ದೊಡ್ಡ ಗುಂಡಿ ಬಿದ್ದಿವೆ. ಬೆಳ್ಳಾರ ಅರಣ್ಯ ಪ್ರದೇಶದಲ್ಲಿ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನಗಳು ನಿಧಾನವಾಗಿ ಸಂಚರಿಸಬೇಕಾಗಿದೆ. ಇದನ್ನೇ ಕಳ್ಳರು ಅಸ್ತ್ರ ಮಾಡಿಕೊಂಡಿದ್ದು, ಈ ರಸ್ತೆಯಲ್ಲಿ ಕಳ್ಳತನ, ದರೋಡೆ ಮಾಮೂಲು ಆಗಿದೆ.

ಶಿರಾ- ಮಧುಗಿರಿ ರಸ್ತೆ ಡಾಂಬರೀಕರಣಗೊಂಡರೂ ಕಳಪೆ ಕಾಮಗಾರಿಯಿಂದಾಗಿ ಅಲಲ್ಲಿ ಕಿತ್ತು ಹೋಗಿದೆ. ಗುಳಿಗೇನಹಳ್ಳಿ- ಜಯನಗರ, ತಾವರೇಕೆರೆ- ಮೊಸರಕುಂಟೆ, ಮದಲೂರು- ಹುಳಿಗೆರೆ ರಸ್ತೆಗಳು `ನರಕಕ್ಕೆ ದಾರಿ~ ಎನ್ನುವಂಥಾಗಿವೆ.

ಹತ್ತೇ ದಿನದಲ್ಲಿ ಹಾಳಾಯ್ತು ಗುಬ್ಬಿ ರಸ್ತೆ!
ಗುಬ್ಬಿ ತಾಲ್ಲೂಕಿನಲ್ಲಿ ರಸ್ತೆ ದುರಸ್ತಿ ಕಂಡ 10 ದಿನದಲ್ಲಿ ಹಾಳಾಗುತ್ತವೆ. ಜನರು ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಅಧಿಕಾರಿಗಳು ಮುಲಾಜಿಲ್ಲದೆ ಕಳಪೆ ಕಾಮಗಾರಿ ನಡೆಸುತ್ತಲೇ ಸಾಗಿದ್ದಾರೆ.

ಶಿರಾ- ನೆಲ್ಲಿಗೆರೆ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಮೈಸೂರು, ಹಾಸನ, ಚಿಕ್ಕಮಗಳೂರು ಇತರ ಭಾಗದಿಂದ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರ ಸಂಪರ್ಕ ರಸ್ತೆ ಇದಾಗಿದೆ. ರೂ. 2 ಕೋಟಿ ವೆಚ್ಚ ಮಾಡಿ ದುರಸ್ತಿ ಮಾಡಿದ 10 ದಿನದಲ್ಲೇ ರಸ್ತೆ ಹಾಳಾಗಿ ಹೋಗಿದೆ.ಹಾಗಲವಾಡಿ ಮತ್ತು ಚೇಳೂರು ಹೋಬಳಿಯಲ್ಲಿನ ಗ್ರಾಮೀಣ ರಸ್ತೆಗಳು ಡಾಂಬರು ಕಂಡೇ ಇಲ್ಲ. ಇಲ್ಲಿ ವಾಹನಗಳಿರಲಿ ಎತ್ತಿನಗಾಡಿ ಕೂಡ ಸಂಚರಿಸಲು ಕಷ್ಟವಾಗಿದೆ ಎನ್ನುತ್ತಾರೆ ಜನತೆ.

`ಗುಬ್ಬಿ- ಸಿ.ಎಸ್.ಪುರ ಮಾರ್ಗದಲ್ಲಿ ಸಂಚರಿಸಿದವರೆ ಧೀರ~ ಎನ್ನುವಂತಾಗಿದೆ ರಸ್ತೆ ಸ್ಥಿತಿ. ಗುಬ್ಬಿ ಸಮೀಪದ ಹಳೇಗುಬ್ಬಿ, ಗುಲಗಂಜಿಹಳ್ಳಿ, ಪ್ರಭುವನಹಳ್ಳಿ ಗ್ರಾಮದಲ್ಲಿನ ರಸ್ತೆಗಳು ಗಾಡಿ ಜಾಡಿನಂತೆ ಕಾಣುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.