ADVERTISEMENT

ಹುತಾತ್ಮರ ಚಿಂತನೆ ಮನಗಾಣಲು ಸಲಹೆ

ಹುತಾತ್ಮ ದಿನಾಚರಣೆಯ ಸ್ಮರಣಾರ್ಥವಾಗಿ ನಡೆದ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 4:45 IST
Last Updated 24 ಮಾರ್ಚ್ 2017, 4:45 IST

ತುಮಕೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರ ಚಿಂತನೆಗಳನ್ನು ಸಾರ್ವಜನಿಕರು ಮನಗಾಣಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ಸಹಯೋಗದಲ್ಲಿ ಗುರುವಾರ ಭಗತ್‌ಸಿಂಗ್‌, ರಾಜ್‌ಗುರು, ಸುಖದೇವ್‌ ಅವರ ಹುತಾತ್ಮ ದಿನಾಚರಣೆಯ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ಭಗತ್‌ ಸಿಂಗ್‌, ರಾಜ್‌ಗುರು, ಸುಖದೇವ್‌ ಅವರಿಂದ ಕ್ರಾಂತಿಕಾರಿ ನೆನಪು ಬರುತ್ತದೆ. ಇವರು ಯಾವುದೇ ಜಾತಿ, ಧರ್ಮಕ್ಕಾಗಿ ಹೋರಾಡಲಿಲ್ಲ. ಬದಲಾಗಿ ದೇಶದ ಸ್ವಾತಂತ್ರ್ಯ, ಗುಲಾಮತನದ ವಿರುದ್ಧ ಹೋರಾಟ ಇವರದ್ದಾಗಿತ್ತು. ವಿದ್ಯಾರ್ಥಿಗಳು ಭಗತ್‌ ಸಿಂಗ್‌ ಜೀವನ ಚರಿತ್ರೆ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ದೇಶದಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯ ಕಳೆದುಕೊಳ್ಳುವ ಸಂದರ್ಭದಲ್ಲಿದ್ದೇವೆ. ಈಗಲೂ ಜಾತಿ, ತಾರತಮ್ಯ, ಅಸಮಾನತೆ ಇರುವುದು ದುರಂತ’ ಎಂದು ಅಸಮಾಧಾನ ವ್ಯಕ್ತಪಡಿದರು.

ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷ ಸೈಯದ್‌ ಮುಜೀದ್‌ ಮಾತನಾಡಿ, ‘ಮನುಷ್ಯ ಬದುಕು ಅಸಮಾನತೆಯಿಂದ ಇರಬಾರದೆಂಬ ಕನಸನ್ನು ಭಗತ್ ಸಿಂಗ್‌ ಕಂಡಿದ್ದರು. ಸ್ವಾತಂತ್ರ್ಯಕ್ಕಾಗಿ ಗಾಂಧಿ ಅಹಿಂಸೆ ಮಾರ್ಗ ಅನುಸರಿಸಿದ್ದರೆ, ಭಗತ್ ಸಿಂಗ್‌ ಕ್ರಾಂತಿ ಮಾರ್ಗ ಅನುಸರಿಸಿದ್ದರು’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಲವು ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಡಿವೈಎಫ್‌ಐ ನಗರ ಘಟಕ ಅಧ್ಯಕ್ಷ ಜಿ.ದರ್ಶನ್‌, ಜಿಲ್ಲಾ ಘಟಕ ಅಧ್ಯಕ್ಷ ಎಸ್‌.ರಾಘವೇಂದ್ರ, ಎಸ್‌ಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷ ಇ.ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.