ADVERTISEMENT

ಹೆಬ್ಬೆಟ್ಟು ಗುರುತಿದ್ದರೆ ಮಾತ್ರ ಪಡಿತರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:40 IST
Last Updated 18 ಅಕ್ಟೋಬರ್ 2012, 8:40 IST

ತುಮಕೂರು: ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ನವೆಂಬರ್ ಅಂತ್ಯದ ವೇಳೆಗೆ ವಿದ್ಯುನ್ಮಾನ ಯಂತ್ರದ ಮೂಲಕ ಪಡಿತರ ವಿತರಣೆ ವ್ಯವಸ್ಥೆ ಜಾರಿಗೆ ಬರಲಿದೆ.

ಜಿಲ್ಲೆಯ 99 ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಾಯೋಗಿಕವಾಗಿ ವಿದ್ಯುನ್ಮಾನ ಯಂತ್ರಗಳನ್ನು ಅಳವಡಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಜಿಲ್ಲೆಯ ಎಲ್ಲೆಡೆ ಈ ಯೋಜನೆ ವಿಸ್ತರಿಸಲಾಗುವುದು. ನವೆಂಬರ್ ಕೊನೆ ವೇಳೆಗೆ ಎಲ್ಲ ಅಂಗಡಿಗಳಲ್ಲಿ ಯಂತ್ರ ಅಳವಡಿಸಲಾಗುವುದು ಎಂದು ಆಹಾರ ಸಚಿವ ಜೀವರಾಜ್ ಇಲ್ಲಿ ಬುಧವಾರ ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸಲು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ವಿದ್ಯುನ್ಮಾನ ತೂಕದ ಯಂತ್ರಗಳನ್ನು ಅಳವಡಿಸಿ ಯಶಸ್ಸು ಕಂಡಿರುವುದನ್ನು ನಗರದ ವಿನಾಯಕ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯ 99 ನ್ಯಾಯಬೆಲೆ ಅಂಗಡಿಗಳಿಗೆ ವಿದ್ಯುನ್ಮಾನ ಯಂತ್ರ ನೀಡಲಾಗಿದ್ದು, ಮುಂದಿನ ತಿಂಗಳ ಅಂತ್ಯದೊಳಗೆ ಉಳಿದ 900 ಅಂಗಡಿಗಳಿಗೆ ಒದಗಿಸಲಾಗುವುದು. ನಂತರ ರಾಜ್ಯದ ಎಲ್ಲೆಡೆ ವಿಸ್ತರಿಸಲಾಗುವುದು ಎಂದರು.
ರೂ 46,000 ಮೊತ್ತದ ಯಂತ್ರವನ್ನು ಸರ್ಕಾರವೇ ಖರೀದಿಸಿ ಉಚಿತವಾಗಿ ನ್ಯಾಯಬೆಲೆ ಅಂಗಡಿಗಳಿಗೆ ನೀಡುತ್ತಿದೆ. ಯಂತ್ರದಲ್ಲಿ ಹೆಬ್ಬೆಟ್ಟು ಒತ್ತಿದ ತಕ್ಷಣ ಕಾರ್ಡ್ ವಿವರಗಳು ಲಭ್ಯವಾಗುತ್ತವೆ.

ಪ್ರತಿ ಕಾರ್ಡ್‌ಗೆ ನಿಗದಿಯಾಗಿರುವ ಅಕ್ಕಿ, ಗೋಧಿ, ಸಕ್ಕರೆ ವಿವರಗಳು ಹಾಗೂ ಈಗಾಗಲೇ ತೆಗೆದುಕೊಂಡಿದ್ದರೆ ಆಯಾ ತಿಂಗಳಿನ ಉಳಿಕೆಯ ಪ್ರಮಾಣದ ಮಾಹಿತಿ ಲಭ್ಯವಾಗುತ್ತದೆ. ಆಹಾರ ಪಡೆದುಕೊಂಡ ನಂತರ ಯಂತ್ರದ ಮೂಲಕ ರಸೀದಿ ಬರುತ್ತದೆ. ಇದರಿಂದಾಗಿ ತೂಕ ಹಾಗೂ ಹೆಚ್ಚು ಹಣ ಪಡೆದು ವಂಚಿಸುವುದನ್ನು ತಡೆಗಟ್ಟಬಹುದು ಎಂದರು.

ನ್ಯಾಯಬೆಲೆ ಅಂಗಡಿಗೆ ಬಂದಿರುವ ಪಡಿತರ, ವಿತರಣೆಯಾಗಿರುವ ಪ್ರಮಾಣ, ಉಳಿದಿರುವ ಆಹಾರ ಮತ್ತಿತರ ವಿವರ ವೆಬ್‌ಸೈಟ್‌ನಲ್ಲಿ ದಾಖಲಾಗುತ್ತದೆ. ಮುಂದಿನ ತಿಂಗಳಿಗೆ ನ್ಯಾಯಬೆಲೆ ಅಂಗಡಿಗೆ ಆಹಾರ ವಿತರಿಸುವಾಗ ಹಿಂದಿನ ತಿಂಗಳು ಉಳಿದಿರುವ ಅಹಾರದ ಪ್ರಮಾಣವನ್ನು ಕಳೆದು ನೀಡಲಾಗುತ್ತದೆ. ಇದರಿಂದ ಜನರಿಗೂ ವಂಚನೆ ಇರುವುದಿಲ್ಲ, ಸರ್ಕಾರದ ಸಬ್ಸಿಡಿ ಹಣವೂ ಪೋಲಾಗುವುದನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಸಚಿವರು ಹೇಳಿದರು.

ಕೇಂದ್ರ ಮೆಚ್ಚುಗೆ: ರಾಜ್ಯದಲ್ಲಿ ಜಾರಿಗೆ ತಂದಿರುವ ನೂತನ ವ್ಯವಸ್ಥೆಗೆ ಕೇಂದ್ರ ಸರ್ಕಾರ ಮೆಚ್ಚುಗೆ ಸೂಚಿಸಿ ವಿವಿಧ ರಾಜ್ಯಗಳಿಗೆ ಈ ಸೌಲಭ್ಯ ಹೊಂದುವಂತೆ ಸಲಹೆ ಮಾಡಿದೆ ಎಂದರು.

ಸೀಮೆ ಎಣ್ಣೆ: ಅಡುಗೆ ಅನಿಲ ಸಂಪರ್ಕ ಹೊಂದಿರುವ ಕುಟುಂಬಗಳಿಗೆ ಎರಡು ಲೀಟರ್ ಸೀಮೆ ಎಣ್ಣೆ ನೀಡಬೇಕೆಂಬ ಬೇಡಿಕೆ ಹೆಚ್ಚುತ್ತಲೇ ಇದೆ.

ರಾಜ್ಯದಲ್ಲಿ 1.38 ಕೋಟಿ ಕಾರ್ಡುದಾರರಿದ್ದು, 44 ಸಾವಿರ ಕಿಲೊ ಲೀಟರ್ ಸೀಮೆ ಎಣ್ಣೆಯನ್ನು ಕೇಂದ್ರ ನೀಡುತ್ತಿದೆ. ಕಾರ್ಡುದಾರರಿಗೆ ವಿತರಿಸಲು ಇದು ಸಾಲದಾಗಿದೆ. ಕೇಂದ್ರ ಸರ್ಕಾರವೇ ಸೀಮೆ ಎಣ್ಣೆ ಹಂಚಿಕೆ ಮಾಡಬೇಕಿದ್ದು, ರಾಜ್ಯಕ್ಕೆ ಹೆಚ್ಚುವರಿಯಾಗಿ ನೀಡದೆ ಬಿಪಿಎಲ್ ಕಾರ್ಡ್‌ದಾರರನ್ನು ಹೊರತುಪಡಿಸಿ ಉಳಿದವರಿಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.ಆಹಾರ ಇಲಾಖೆ ಆಯುಕ್ತ ಗೋವಿಂದರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.