ADVERTISEMENT

ಹೇಮಾವತಿ ಕಚೇರಿ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:00 IST
Last Updated 18 ಸೆಪ್ಟೆಂಬರ್ 2013, 6:00 IST

ತುರುವೇಕೆರೆ: ದಂಡಿನಶಿವರ ವ್ಯಾಪ್ತಿಯ ಡಿ.8 ನಾಲೆಯಲ್ಲಿ ನೀರು ಹರಿಸದೆ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಮಂಗಳವಾರ ಹೇಮಾವತಿ ನಾಲಾವಲಯದ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ನುಗ್ಗಿ ಅತ್ಮಾರ್ಪಣೆಯ ಬೆದರಿಕೆ ಒಡ್ಡಿದರು.

ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ನೇತೃತ್ವದಲ್ಲಿ ಜಮಾವಣೆಗೊಂಡ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ, ಬಳ್ಳೇಕಟ್ಟೆ, ಕೊಂಡಜ್ಜಿ, ಕಾಳಂಜಿಹಳ್ಳಿ, ಮಾಚೇನಹಳ್ಳಿ, ಸಂಪಿಗೆ, ಹಟ್ಟಿಹಳ್ಳಿ, ಬೇವಿನಹಳ್ಳಿ ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮಗಳ ನೂರಾರು ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಈ ಕೂಡಲೇ ಡಿ-.8 ನಾಲೆಯಲ್ಲಿ ನೀರು ಹರಿಸಬೇಕೆಂದು ಆಗ್ರಹಿಸಿದರು.

ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರು ಸೀದಾ ಅಧೀಕ್ಷರ ಕಚೇರಿಗೆ ನುಗ್ಗಿ ಸೆಕ್ಷನ್ ಎಂಜಿನಿಯರ್ ರಾಜೇಗೌಡ ಹಾಗೂ ಉಪ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಕಚೇರಿಯಲ್ಲಿ ಅಡ್ಡಗಟ್ಟಿ ಮುತ್ತಿಗೆ ಹಾಕಿದರು.

ತಾಲ್ಲೂಕಿನ ರೈತರಿಗೆ ಅಧಿಕಾರಿಗಳು ದ್ರೋಹ ಬಗೆಯುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲಿ ನೀರು ಕೊಟ್ಟಿಲ್ಲ. ಸೆ.1ರಿಂದ ನಾಲೆಗಳಲ್ಲಿ ನೀರು ಹರಿಸುತ್ತೇವೆಂದು ಮಾತು ಕೊಟ್ಟಿದ್ದ ಅಧಿಕಾರಿ­ಗಳು ಕದ್ದುಮುಚ್ಚಿ ಶಿರಾ, ಕಳ್ಳಂಬೆಳ್ಳ, ನಾಗ­ಮಂಗಲಕ್ಕೆ ನೀರು ಹರಿಸುತ್ತಿದ್ದಾರೆ. ನಾಲೆಗೆ ಭೂಮಿ ನೀಡಿದ ಸಾವಿರಾರು ರೈತರಿಗೆ ವಂಚನೆ ಮಾಡುತ್ತಿ­ದ್ದಾರೆ. ವಿತರಣಾ ನಾಲೆಗಳನ್ನು ದುರಸ್ಥಿಗೊಳಿಸದೆ ಲಕ್ಷಾಂತರ ರೂಪಾಯಿಗೆ ಬಿಲ್ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ಕಳೆದ ವರ್ಷವೂ ನೀರು ಹರಿಸದ ಕಾರಣ ದಂಡಿನಶಿವರ ಭಾಗದ ಸಾವಿರಾರು ಕೊಳವೆ ಬಾವಿಗಳು ಬತ್ತಿಹೋಗಿವೆ. ಸೆ.3ರಂದು ನೀರು ಬಿಟ್ಟ ಶಾಸ್ತ್ರ ಮಾಡಿದ ಅಧಿಕಾರಿಗಳು ಎರಡೇ ದಿನದಲ್ಲಿ ನೀರು ನಿಲ್ಲಿಸಿದ್ದಾರೆ. ಈ ಕೂಡಲೇ ಡಿ.-8 ನಾಲೆಯಲ್ಲಿ ನೀರು ಹರಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಒತ್ತಾಯಿಸಿದರು.

ರೈತರ ಮನವೊಲಿಕೆಯ ಪ್ರಯತ್ನ ಮಾಡಿದ ಅಧಿಕಾರಿಗಳು, ನೀರು ಹರಿಸುವಿಕೆ ವೇಳಾಪಟ್ಟಿ ಬದಲಾಗಿದ್ದು ಅ.6ರಿಂದ ತಾಲ್ಲೂಕಿನ ನಾಲೆಗಳಲ್ಲಿ ನೀರು ಹರಿಸಲಾಗುವುದು ಎಂಬ ಭರವಸೆ ನೀಡಿದರು. ಇದರಿಂದ ರೊಚ್ಚಿಗೆದ್ದ ರೈತರು ನೀರು ಹರಿಸುವ ತನಕ ಕದಲುವುದಿಲ್ಲ ಎಂದು ಕುರ್ಚಿಗಳನ್ನು ಎತ್ತೆಸೆದು ಕಚೇರಿಯಲ್ಲೇ ಧರಣಿ ಕೂತರು.

ಹೇಮಾವತಿ ನಾಲಾ ವಲಯದ ಮುಖ್ಯ ಎಂಜಿನಿಯರ್ ಅವರೊಂದಿಗೆ ದೂರವಾಣಿಯಲ್ಲಿ ಮಾತ­ನಾಡಿದ ಅಧಿಕಾರಿಗಳು ಪರಿಸ್ಥಿತಿ ವಿವರಿಸಿ­ದರು. ನೀರು ಹರಿಸಲು ಮುಖ್ಯ ಎಂಜಿನಿಯರ್ ಒಪ್ಪದಿದ್ದಾಗ ಒಂದು ಗಂಟೆಯೊಳಗೆ ಡಿ.8 ಮತ್ತು ಡಿ-10 ನಾಲೆಯಲ್ಲಿ ನೀರು ಹರಿಸಲು ಅನುಮತಿ ಕೊಡಬೇಕು. ಇಲ್ಲವಾದಲ್ಲಿ ಇಲ್ಲೇ ಆತ್ಮಾರ್ಪಣೆ ಮಾಡಿಕೊಳ್ಳುತ್ತೇವೆ ಎಂದು ರೈತರು ಹಠ ಹಿಡಿದು ಕುಳಿತರು.

ತೀವ್ರ ಒತ್ತಡಕ್ಕೆ ಸಿಲುಕಿದ ಅಧಿಕಾರಿಗಳು ಮತ್ತೆ ಮುಖ್ಯ ಎಂಜಿನಿಯರ್ ಜೊತೆ ಮಾತುಕತೆ ನಡೆಸಿದರು. ಸುಮಾರು ಒಂದು ಗಂಟೆ ಕಾಲ ಹಗ್ಗ ಜಗ್ಗಾಟದ ನಂತರ ಮುಖ್ಯ ಎಂಜಿನಿಯರ್ ಡಿ-8 ನಾಲೆಯಲ್ಲಿ ನೀರು ಹರಿಸಲು ಒಪ್ಪಿದ್ದಾರೆ ಎಂದು ಅಧಿಕಾರಿಗಳು ಪ್ರಕಟಿಸಿದರು. ಸಂತಸಗೊಂಡ ರೈತರು ಪ್ರತಿಭಟನೆ ವಾಪಸ್ ಪಡೆದರು.

ಅಧಿಕಾರಿಗಳು ಮಂಗಳವಾರ ರಾತ್ರಿ ವೇಳೆಗೆ ನಾಲೆಗಳಲ್ಲಿ ನೀರು ಹರಿಸುವ ಭರವಸೆ ನೀಡಿದ್ದಾರೆ ಎಂದು ಕೊಂಡಜ್ಜಿ ವಿಶ್ವನಾಥ್ ತಿಳಿಸಿದ್ದಾರೆ. ಕಾಳಂಜಿಹಳ್ಳಿ ಲಕ್ಷಣ್, ನಂಜೇಗೌಡ, ಸೋಮಶೇಖರ್,ರಾಜು, ಬಾಬು, ದಿನೇಶ್, ಮಧು ರಾಜಶೇಖರ್, ಅಣ್ಣೇಗೌಡ, ಶಿವಣ್ಣ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.