ತಿಪಟೂರು: ತಾಲ್ಲೂಕಿನ ಕೊನೇಹಳ್ಳಿ ವ್ಯಾಪ್ತಿ ಹಳ್ಳಿಗಳಿಗೆ ಹೇಮಾವತಿ ನೀರು ಪೂರೈಸಬೇಕೆಂದು ಒತ್ತಾಯಿಸಿ ಆ ವ್ಯಾಪ್ತಿಯ ರೈತರು, ವಿವಿಧ ಮುಖಂಡರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಪರಿಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ಜನಾಂದೋಲನ ವೇದಿಕೆಯಡಿ ಕೊನೇಹಳ್ಳಿಯಿಂದ ಆಗಮಿಸಿ ಕೆಂಪಮ್ಮ ದೇವಿ ದೇಗುಲದಿಂದ ಉಪವಿಭಾಗಾಧಿ ಕಾರಿ ಕಚೇರಿವರೆಗೆ ಮೆರೆವಣಿಗೆ ನಡೆಸಿದರು.
ತಾಲ್ಲೂಕಿನ ಗಡಿ ಭಾಗ ಕೊನೇಹಳ್ಳಿ, ಸಿದ್ದಾಪುರ, ಶಂಕರೀ ಕೊಪ್ಪಲು, ಅಂಚೆಕೊಪ್ಪಲು, ಕರೀಕೆರೆ, ಭೈರಾಪುರ, ಬಿದರೆಗುಡಿ, ಹಿರೇಬಿದರೆ, ಲಕ್ಕೀಹಳ್ಳಿ, ನಾಗತಿಹಳ್ಳಿ, ಮಾರಗೊಂಡ ನಹಳ್ಳಿ, ಕಬ್ಬಿನಕೆರೆ ಹಾಗೂ ಶಿವರ ಸುತ್ತಮುತ್ತ ಅಂತರ್ಜಲ ಬತ್ತಿ ಕುಡಿಯುವ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇಲ್ಲಿನ ಕೆರೆಗಳಿಗೆ ಹೇಮಾವತಿ ಮೂಲದ ಹೊನ್ನವಳ್ಳಿ ಏತ ನೀರಾವರಿ ಮೂಲಕ ಅಥವಾ ಅರಸೀಕೆರೆ ಪೈಪ್‌ಲೈನ್ ಮೂಲಕ ನೀರು ಹರಿಸಬೇಕೆಂದು ಒತ್ತಾಯಿಸಿದರು.
ಸಿಂಗ್ರಿನಂಜಪ್ಪ ವೃತ್ತದಲ್ಲಿ ಮನವಿ ಸ್ವೀಕರಿಸಿದ ಶಾಸಕ ಬಿ.ಸಿ.ನಾಗೇಶ್, ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಉಪ ವಿಭಾಗಾಧಿಕಾರಿ ಎಂ.ಶಿಲ್ಪಾ ಅವರಿಗೆ ಮನವಿ ಸಲ್ಲಿಸಿದರು.
ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಮೇಶ್, ಸಿದ್ದಾಪುರ ಸುರೇಶ್, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಆರ್.ವಿಜಯಕುಮಾರ್, ವಿವಿಧ ಸಂಘಟನೆಗಳ ಲೋಕೇಶ್, ಯಧುನಂದನ, ಶಂಕರಣ್ಣ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.