ADVERTISEMENT

ನೆರೆ–ಬರ ಪರಿಹಾರಕ್ಕೆ ₹ 1 ಲಕ್ಷ ಕೋಟಿ ನೀಡಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 12:31 IST
Last Updated 5 ಸೆಪ್ಟೆಂಬರ್ 2019, 12:31 IST
ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌   

ತುಮಕೂರು: ರಾಜ್ಯದಲ್ಲಿ ತಲೆದೂರಿರುವ ಪ್ರವಾಹ ಮತ್ತು ಬರದ ಪರಿಸ್ಥಿತಿಯಿಂದಾಗಿ ಕೋಟ್ಯಾಂತರ ಮೌಲ್ಯದ ಬೆಳೆ, ಆಸ್ತಿ–ಪಾಸ್ತಿ ನಷ್ಟವಾಗಿದೆ. ಇದನ್ನು ನಿಭಾಯಿಸಲು ಕೇಂದ್ರ ಸರ್ಕಾರ ₹ 1 ಲಕ್ಷ ಕೋಟಿ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿದರು.

ನಮ್ಮ ಸಂಘದ ಅಂದಾಜಿನ ಪ್ರಕಾರ ರಾಜ್ಯದಲ್ಲಿ ₹ 1 ಲಕ್ಷ ಕೋಟಿಯಷ್ಟು ಹಾನಿ ಸಂಭವಿಸಿದೆ. ಆದರೆ, ರಾಜ್ಯ ಸರ್ಕಾರ ₹ 35,000 ಕೋಟಿ ಕೊಡಿ, ₹ 40,000 ಕೋಟಿ ಕೊಡಿ ಎಂದು ಬೇಕಾಬಿಟ್ಟಿಯಾಗಿ ಕೇಂದ್ರವನ್ನು ಕೇಳುತ್ತಿದೆ. ವೈಜ್ಞಾನಿಕವಾಗಿ ಅಧ್ಯಯನ ಮಾಡಿಯೇ ಸಮಂಜಸವಾದ ಪರಿಹಾರಕ್ಕೆ ಪಟ್ಟು ಹಿಡಿಯಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾತ್ಕಾಲಿಕ ಜೀವನ ನಿರ್ವಹಣೆಗಾಗಿ ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ₹ 25,000 ನೀಡಬೇಕು. ಬಳಿಕ ವಿದ್ಯುತ್‌ ಸರಬರಾಜು ಜಾಲವನ್ನು ಮರುನಿರ್ಮಾಣ ಮಾಡಬೇಕು. ಟ್ರಾನ್ಸ್‌ಫಾರ್ಮರ್‌, ಪಂಪ್‌ಸೆಟ್‌ಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸಬೇಕು ಎಂದು ಹೇಳಿದರು.

14.80 ಲಕ್ಷ ಎಕರೆ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ. ಅದರಲ್ಲಿನ 3.5 ಲಕ್ಷ ಎಕರೆ ಕಬ್ಬು ಸೇರಿದೆ. ಜತೆಗೆ ಜೋಳ, ಭತ್ತ, ತೆಂಗು, ಅಡಿಕೆ, ಸೋಯಾಬಿನ್‌, ಕಡಲೆ ಬೆಳೆಗೂ ಹಾನಿಯಾಗಿದೆ. ಹಳ್ಳಿಗಳು ಮುಳುಗಿವೆ. ಶಾಲೆಗಳು ಬಿದ್ದಿವೆ. ರಸ್ತೆಗಳು ಹಾಳಾಗಿವೆ. ಇವುಗಳನ್ನು ಆದಷ್ಟು ಬೇಗ ಸರಿಪಡಿಸಲು ಸಮಂಜಸ ಪರಿಹಾರ ಧನ ಬೇಕು. ಅದಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರವನ್ನು ಒತ್ತಾಯಿಸಬೇಕು ಎಂದರು ತಿಳಿಸಿದರು.

ಸಂಘದ ಮುಖಂಡರಾದ ಎಚ್‌.ಆರ್‌.ಬಸವರಾಜಪ್ಪ, ಈಚನಘಟ್ಟ ಸಿದ್ಧವೀರಪ್ಪ, ಲಕ್ಷ್ಮಣ ಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಕೆಂಕೇರೆ ಸತೀಶ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

ರೈತ ಸಂಘದ ಬೇಡಿಕೆಗಳು

* ಒಟ್ಟು ಸಾಲದಲ್ಲಿನ ₹ 1 ಲಕ್ಷದ ವರೆಗಿನ ಮೊತ್ತವನ್ನು ಮನ್ನಾ ಮಾಡಿ

* ಭೂಸ್ವಾಧೀನ ಕಾಯ್ದೆ–2019 ಕೈಬಿಟ್ಟು 2013ರ ಕಾಯ್ದೆಯನ್ನೆ ಮುಂದುವರಿಸಿ

* ನೆರೆ ಸಂತ್ರಸ್ತರಿಂದ ಸಾಲ ವಸೂಲಿಯನ್ನು ನಿಲ್ಲಿಸಿ

* ಹನಿ ನಿರಾವರಿಯ ಸಹಾಯಧನವನ್ನು ಶೇ 100ಕ್ಕೆ ಹೆಚ್ಚಿಸಿ

ಪ್ರಧಾನಿ ಮೋದಿ ಅವರು ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ನೆರೆ ಬಂದಾಗ, ವೈಮಾನಿಕ ಸಮೀಕ್ಷೆ ನಡೆಸಿ, ಸಾವಿರಾರು ಕೋಟಿ ಪರಿಹಾರ ಘೋಷಿಸಿದರು. ಅವರೇಕೆ ರಾಜ್ಯದ ನೆರೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

– ಕೋಡಿಹಳ್ಳಿ ಚಂದ್ರಶೇಖರ್‌, ಅಧ್ಯಕ್ಷ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.