ADVERTISEMENT

ತುರುವೇಕೆರೆ| ಒಳಚರಂಡಿ ನಿರ್ಮಾಣಕ್ಕೆ ₹ 10 ಕೋಟಿ ಬಿಡುಗಡೆ

ತುರುವೇಕೆರೆ: ₹ 8 ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 9:57 IST
Last Updated 7 ಮಾರ್ಚ್ 2023, 9:57 IST
ತುರುವೇಕೆರೆ ಪಟ್ಟಣದಲ್ಲಿ ನಿರ್ಮಿಸಿರುವ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಸೋಮವಾರ ಶಾಸಕ ಮಸಾಲ ಜಯರಾಂ ಉದ್ಘಾಟಿಸಿದರು 
ತುರುವೇಕೆರೆ ಪಟ್ಟಣದಲ್ಲಿ ನಿರ್ಮಿಸಿರುವ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಸೋಮವಾರ ಶಾಸಕ ಮಸಾಲ ಜಯರಾಂ ಉದ್ಘಾಟಿಸಿದರು    

ತುರುವೇಕೆರೆ: ರಾಜ್ಯ ಸರ್ಕಾರದಿಂದ ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ ₹ 10 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮಸಾಲ ಜಯರಾಂ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ಪಟ್ಟಣ ಪಂಚಾಯಿತಿಯಿಂದ ₹ 8 ಕೋಟಿ ವೆಚ್ಚದಡಿ ನಿರ್ಮಿಸಿರುವ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

12 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಮುಕ್ತಿ ನೀಡಲಾಗಿದೆ. 2007ರಲ್ಲಿ ಭೂಮಿಪೂಜೆ ಮಾಡಿ 15 ವರ್ಷ ಆಡಳಿತ ನಡೆಸಿದರೂ ವಾಣಿಜ್ಯ ಸಂಕೀರ್ಣ ಪೂರ್ಣಗೊಳಿಸಲು ಸಾಧ್ಯವಾಗದೆ ಕಟ್ಟಡವನ್ನು ಮುಚ್ಚಲಾಗಿತ್ತು ಎಂದರು.

ADVERTISEMENT

‘ನಾನು ಶಾಸಕನಾದ ನಂತರ ಅರ್ಧಕ್ಕೆ ನಿಂತಿದ್ದ ಕಟ್ಟಡಕ್ಕೆ ಅನುದಾನ ನೀಡಿ ಪಟ್ಟಣ ಪಂಚಾಯಿತಿ ಸದಸ್ಯರ ಸಹಕಾರದಿಂದ ಈಗ ಎರಡು ಅಂತಸ್ತು ನಿರ್ಮಾಣ ಮಾಡಿಸಿದ್ದೇನೆ. ನೆಲಮಹಡಿಯಲ್ಲಿ ಸುಸಜ್ಜಿತವಾದ 50ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು, ಮೊದಲನೆ ಮಹಡಿಯಲ್ಲಿ ವಿಶಾಲವಾದ ಹಾಲ್ ನಿರ್ಮಿಸಲಾಗಿದೆ’ ಎಂದು ವಿವರಿಸಿದರು.

ಈ ಕಟ್ಟಡದಿಂದ ಪಟ್ಟಣ ಪಂಚಾಯಿತಿಗೆ ವಾರ್ಷಿಕವಾಗಿ ಸುಮಾರು ₹ 50ರಿಂದ ₹ 60 ಲಕ್ಷ ಆದಾಯ ಬರಲಿದೆ. ಈ ಆದಾಯ ಬಳಸಿಕೊಂಡು ಪಟ್ಟಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು. ನಗರೋತ್ಥಾನ ಯೋಜನೆಯಡಿ ಈಗಾಗಲೇ ₹ 5 ಕೋಟಿ ಬಿಡುಗಡೆಯಾಗಿದೆ. ಎಲ್ಲಾ ವಾರ್ಡ್‍ಗಳಲ್ಲಿಯೂ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ವಾಣಿಜ್ಯ ಸಂಕೀರ್ಣ ಕಟ್ಟಡದ ಸುತ್ತಮುತ್ತಲಿನ ಬೀದಿಬದಿ ವ್ಯಾಪಾರಿಗಳಿಗೆ ಸಂತೆ ಮೈದಾನದಲ್ಲಿ ಕುಡಿಯುವ ನೀರು, ನೆರಳು, ಶೌಚಾಲಯ ನಿರ್ಮಿಸಿ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಪ್ರಭಾಕರ್, ಉಪಾಧ್ಯಕ್ಷೆ ಎಚ್.ಸಿ. ಶೀಲಾ, ಸದಸ್ಯರಾದ ಯಜಮಾನ್ ಮಹೇಶ್, ಟಿ.ಕೆ. ಚಿದಾನಂದ್, ಅಂಜನ್ ಕುಮಾರ್, ಆಶಾರಾಣಿ, ಭಾಗ್ಯ, ಮೇಘನಾ, ನವೀನ್ ಬಾಬು, ಬಿ.ಎಂ. ಶೋಭಾ, ರವಿ, ಮುಖ್ಯಾಧಿಕಾರಿ ಡಿ. ಲಕ್ಷ್ಮಣ್‍ ಕುಮಾರ್, ಎಂಜಿನಿಯರ್ ಬಿ. ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.