ADVERTISEMENT

10 ಆಮ್ಲಜನಕ ಸಾಂದ್ರಕ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 7:58 IST
Last Updated 14 ಮೇ 2021, 7:58 IST
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ ನೀಡಿದ ಆಮ್ಲಜನಕ ಸಾಂದ್ರಕಗಳನ್ನು ಶಾಸಕ ಡಾ.ರಂಗನಾಥ್ ಹಸ್ತಾಂತರಿಸಿದರು. ಸಂಸ್ಥೆಯ ಅಧ್ಯಕ್ಷ ರವಿಪ್ರಸಾದ್ ಇದ್ದರು
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ ನೀಡಿದ ಆಮ್ಲಜನಕ ಸಾಂದ್ರಕಗಳನ್ನು ಶಾಸಕ ಡಾ.ರಂಗನಾಥ್ ಹಸ್ತಾಂತರಿಸಿದರು. ಸಂಸ್ಥೆಯ ಅಧ್ಯಕ್ಷ ರವಿಪ್ರಸಾದ್ ಇದ್ದರು   

ಕುಣಿಗಲ್: ‘ಕೋವಿಡ್‌ ಸಂಕಷ್ಟ ಸ್ಥಿತಿಯಲ್ಲಿ ವಿರೋಧಿಗಳ ಕುತಂತ್ರಗಳಿಗೆ ಜಗ್ಗದೆ, ಅಳುಕದೆ ತಾಲ್ಲೂಕಿನ ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮ ಕಾರ್ಯ ಹಮ್ಮಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುವೆ’ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.

ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ, ಐ ಕ್ಯಾಟ್ ಸಂಸ್ಥೆ, ಅವಿರತ ಭಾರತ ಸಂಯುಕ್ತಾಶ್ರಯದಲ್ಲಿ 10 ಆಮ್ಲಜನಕ ಸಾಂದ್ರಕಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಕೋವಿಡ್‌ ಎರಡನೇ ಅಲೆ ಅಬ್ಬರಿಸುತ್ತಿದ್ದರೂ ಸರ್ಕಾರ ಸಕಾಲದಲ್ಲಿ ಆಮ್ಲಜನಕ, ರೆಮ್‌ಡಿಸಿವಿರ್‌ ವಿತರಿಸುತ್ತಿಲ್ಲ. ತಾಲ್ಲೂಕು ಮಟ್ಟದ ಅಧಿಕಾರಿಗಳು ಸೋಂಕಿತರ ಮತ್ತು ಮೃತರ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ತಾಲ್ಲೂಕಿನಲ್ಲಿ ಸುಮಾರು 3,500 ಸೋಂಕಿತರಿದ್ದಾರೆ. 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದರು.

ADVERTISEMENT

ಅಮೃತೂರಿನಲ್ಲಿ 30 ಆಮ್ಲಜನಕ ಸೌಲಭ್ಯ ಸಹಿತ ಆಸ್ಪತ್ರೆ ಮತ್ತು ಪಟ್ಟಣದ ಸಪ್ತಗಿರಿ ಆಸ್ಪತ್ರೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ 20 ಆಮ್ಲಜನಕ ಸೌಲಭ್ಯ ಸಹಿತ ಹಾಸಿಗೆಯ ಆಸ್ಪತ್ರೆಯನ್ನು ಶೀಘ್ರ ಪ್ರಾರಂಭಿಸಲಾಗುವುದು. ಡಿಕೆಎಸ್ ಚಾರಿಟಬಲ್ ಸಂಸ್ಥೆಯಿಂದ ಕೋವಿಡ್ ಕಿಟ್‌ಗಳನ್ನು ವಿತರಿಸಲಾಗುವುದು ಎಂದರು.

ಸ್ಥಳೀಯ ಬಿಜೆಪಿ ಮುಖಂಡರು ಕೊರೊನಾ ಸೋಂಕಿತರ ಸಮಸ್ಯೆಗೆ ಸ್ಪಂದಿಸದೆ, ಸ್ಪಂದಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕ್ಷುಲಕ ಕಾರಣಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯವರ ಕುತಂತ್ರಕ್ಕೆ ತಲೆಕೆಡಿಸಿಕೊಳ್ಳದೆ ಸೋಂಕಿತರರ ಸೇವೆ ಸದಾ ಸಿದ್ಧರಿದ್ದೇವೆ ಎಂದರು.

ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆಯ ಅಧ್ಯಕ್ಷ ರವಿಪ್ರಸಾದ್, ಕಾರ್ಯದರ್ಶಿ ಆನಂದ್ ರಾಮಚಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಜಗದೀಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು, ಸಪ್ತಗಿರಿ ಆಸ್ಪತ್ರೆಯ ಡಾ.ಕುಮಾರ್,
ಡಾ. ಶೈಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.