ADVERTISEMENT

ತುಮಕೂರು: ಜಿಲ್ಲೆಯಲ್ಲಿ ನಿತ್ಯ 2 ಸಾವಿರ ಮಾದರಿ ಪರೀಕ್ಷೆ

ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೋವಿಡ್ ಪ್ರಯೋಗಾಲಯ ಆರಂಭ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:52 IST
Last Updated 19 ಸೆಪ್ಟೆಂಬರ್ 2020, 16:52 IST
ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೋವಿಡ್ ಪ್ರಯೋಗಾಲಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಡಾ.ಜಿ.ಪರಮೇಶ್ವರ ಇದ್ದರು
ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೋವಿಡ್ ಪ್ರಯೋಗಾಲಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಡಾ.ಜಿ.ಪರಮೇಶ್ವರ ಇದ್ದರು   

ತುಮಕೂರು: ಇಡೀ ವಿಶ್ವಕ್ಕೆ ಹೋಲಿಸಿದರೆ ‌ಭಾರತದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ ಕಡಿಮೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಶನಿವಾರ ಹೇಳಿದರು.

ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ ನೂತನವಾಗಿ ಪ್ರಾರಂಭಿಸಿರುವ ಕೋವಿಡ್-19 ಮಾದರಿ ಪರೀಕ್ಷೆ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.

‘ನಾನು ಸಹ ಸಿದ್ಧಾರ್ಥ ವೈದ್ಯಕೀಯ ಕಾಲೇಜು ವಿದ್ಯಾರ್ಥಿ. ಇಂದು ಇದೇ ಸಂಸ್ಥೆಯ ಪ್ರಯೋಗಾಲಯ ಉದ್ಘಾಟಿಸು
ತ್ತಿರುವುದು ಸಂತಸ ತಂದಿದೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಅತ್ಯಾಧುನಿಕವಾದ 3 ಪ್ರಯೋಗಾಲಯಗಳು ಸ್ಥಾಪನೆಯಾಗಿವೆ. ಜಿಲ್ಲೆಯಲ್ಲಿ ಇನ್ನು ಮುಂದೆ ನಿತ್ಯ 2 ಸಾವಿರಕ್ಕೂ ಅಧಿಕ ಕೋವಿಡ್ ಮಾದರಿಗಳ ಪರೀಕ್ಷೆಗಳನ್ನು ಮಾಡಲು ಅವಕಾಶ ಇದೆ ಎಂದು ಹೇಳಿದರು.

ADVERTISEMENT

‘ಪರಮೇಶ್ವರ ಅವರು ನನ್ನ ಮೇಲೆ ತುಂಬಾ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ನನಗೆ ಈ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಸ್ಥಾನ ಕೊಟ್ಟಿದ್ದು ಮತ್ತು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ನಿಂದ ‘ಬಿ' ಫಾರಂ ಕೊಡುವಲ್ಲಿ ಪರಮೇಶ್ವರ ಶ್ರಮ ವಹಿಸಿದ್ದಾರೆ. ಹಾಗಾಗಿ ಅವರು ನನಗೆ ತಂದೆ ಸಮಾನ’ ಎಂದರು.

‘ನಾನು ಎರಡೂ ಬಾರಿ ಚುನಾವಣೆ ನಿಂತಾಗಲೂ ಪರಮೇಶ್ವರ ದಂಪತಿ ಆಶೀರ್ವಾದ ಪಡೆದಿದ್ದೆ. ಮೊನ್ನೆ ಉಪಚುನಾವಣೆ ಸಂದರ್ಭದಲ್ಲೂ ಹೋಗಬೇಕು ಎಂದುಕೊಂಡಿದ್ದೆ. ಆದರೆ ಭಯವಾಯಿತುಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ‘ಸರ್ಕಾರಿ ಆಸ್ಪತ್ರೆಯಲ್ಲಿ 200–300 ಪರೀಕ್ಷೆ ಮಾಡಲಾಗುತ್ತಿತ್ತು. ಲ್ಯಾಬ್‍ಗಳ ಕೊರತೆ ಇದ್ದಾಗ ಕೊರೊನಾ ವಿಚಾರದಲ್ಲಿ ಅವಾಂತರಗಳು ಆಗಿತ್ತು. ಆದರೆ ಈಗ ಪ್ರಯೋಗಾಲಯಗಳು ಸ್ಥಾಪನೆ ಆಗಿರುವುದರಿಂದ ಪ್ರತಿದಿನ ಸಾವಿರಾರು ಪರೀಕ್ಷೆ ಮಾಡುವ ಸಾಮರ್ಥ್ಯ ಇದೆ’ ಎಂದರು.

ಶಾಸಕರಾದ ಡಾ.ಜಿ.ಪರಮೇಶ್ವರ, ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಮುರುಳೀಧರ ಹಾಲಪ್ಪ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಎಸ್‌ಪಿ ಡಾ.ಕೆ.ವಂಶಿಕೃಷ್ಣ, ಡಿಎಚ್‍ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಇದ್ದರು.

ಹೆಚ್ಚು ಹಣ ಪಡೆದರೆ ದೂರು ನೀಡಿ:

‘ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ಚಿಕಿತ್ಸೆಗೆ ಹೆಚ್ಚಿನ ದರ ಪಡೆದರೆ ದೂರು ನೀಡಿ. ಈ ಬಗ್ಗೆ ತನಿಖೆ ನಡೆಸಿ ತಪ್ಪಾಗಿದ್ದರೆ ಕ್ರಮಕೈಗೊಳ್ಳಲಾಗುವುದು’ ಎಂದು ಡಾ.ಕೆ.ಸುಧಾಕರ್ ಶನಿವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.