ADVERTISEMENT

3 ತಿಂಗಳು ಟ್ಯಾಂಕರ್ ನೀರೇ ಗತಿ!

ಬುಗುಡನಹಳ್ಳಿ ಕೆರೆ ಬರಿದು; ಕಳೆದ ವರ್ಷ ಕೆರೆ ತುಂಬಿಸದೇ ಇದ್ದುದೇ ಸಮಸ್ಯೆಗೆ ಕಾರಣ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 6:08 IST
Last Updated 12 ಜೂನ್ 2018, 6:08 IST

ತುಮಕೂರು: ‘ನಗರಕ್ಕೆ ನೀರು ಪೂರೈಸುತ್ತಿದ್ದ ಬುಗುಡನಹಳ್ಳಿ ಕೆರೆ ಸಂಪೂರ್ಣ ಬರಿದಾಗಿದೆ. ಇನ್ನೂ ಮೂರು ತಿಂಗಳು ಕೊಳವೆ ಬಾವಿ ಮತ್ತು ಟ್ಯಾಂಕರ್‌ಗಳಿಂದಲೇ ನಗರಕ್ಕೆ ನೀರು ಪೂರೈಕೆ ಮಾಡುವ ಸಂಕಷ್ಟ ಎದುರಾಗಿದೆ’ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ವರ್ಷ ಹೇಮಾವತಿ ಜಲಾಶಯದಿಂದ ನೀರು ಹರಿಸಿದಾಗ ಬುಗುಡನಹಳ್ಳಿ ಕೆರೆ ಪೂರ್ಣ ಭರ್ತಿಯಾಗಲಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದೇ ಈಗಿನ ಪರಿಸ್ಥಿತಿಗೆ ಕಾರಣವಾಗಿದೆ’ ಎಂದು ದೂರಿದರು.

‘ನಗರದಲ್ಲಿ ನೀರಿನ ಸಮಸ್ಯೆ ಹೋಗಲಾಡಿಸಲು ತುರ್ತಾಗಿ ನೀರು ಹರಿಸಲು ಹೇಮಾವತಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ಗಳಿಗೆ ಮನವಿ ಮಾಡಲಾಗಿದೆ. ಸದ್ಯ ಜಲಾಶಯದಲ್ಲಿ 4.6 ಟಿಎಂಸಿ ಮಾತ್ರ ನೀರು ಇದೆ. ಒಳಹರಿವು ಹೆಚ್ಚಾಗುತ್ತಿದೆ. ಕನಿಷ್ಠ 20 ಟಿ.ಎಂ.ಸಿ.ಯಷ್ಟು ನೀರು ಸಂಗ್ರಹ ಆದ ಬಳಿಕವೇ ತುಮಕೂರು ವಲಯಕ್ಕೆ ನೀರು ಬಿಡುವ ಬಗ್ಗೆ ತೀರ್ಮಾನ ಮಾಡಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

‘ಹೇಮಾವತಿ ಜಲಾಶಯದಿಂದ ನವೆಂಬರ್ ತಿಂಗಳಲ್ಲಿ ಬುಗುಡನಹಳ್ಳಿ ಕೆರೆಗೆ ನೀರು ಹರಿಸಬೇಕು. ಆದರೆ, ಈವರೆಗೂ ಅದನ್ನು ಅನುಸರಿಸಿಲ್ಲ. ಇದೂ ಕೂಡಾ ನೀರಿನ ಸಮಸ್ಯೆಗೆ ಕಾರಣಗಳಲ್ಲೊಂದಾಗಿದೆ’ ಎಂದು ಹೇಳಿದರು.

ಹೊಸದಾಗಿ 64 ಕೊಳವೆ ಬಾವಿ: ‘ಮಹಾನಗರದಲ್ಲಿನ ವಿವಿಧ ಬಡಾವಣೆಗೆ ನೀರು ಪೂರೈಸಲು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 564 ಕೊಳವೆ ಬಾವಿಗಳು ಇವೆ. ಈ ವರ್ಷ ₹ 2 ಕೋಟಿ ವೆಚ್ಚದಲ್ಲಿ 64 ಕೊಳವೆ ಬಾವಿ ಕೊರೆಯಿಸಲು  ಪಾಲಿಕೆಯು ಸರ್ಕಾರದಿಂದ ಒಪ್ಪಿಗೆ ಪಡೆದಿದೆ. ಆದಷ್ಟು ಬೇಗ ಈ ಕೊಳವೆ ಬಾವಿ ಕೊರೆಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಈಚೆಗೆ ನಡೆದ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಸದ್ಯ ಚಾಲ್ತಿಯಲ್ಲಿರುವ ಕೊಳವೆ ಬಾವಿ ಪಂಪ್‌ಗಳನ್ನು ಹೊಸದಾಗಿ ಕೊರೆದ ಕೊಳವೆ ಬಾವಿಗೆ ಅಳವಡಿಸುವುದು, ಹಳೆಯ ಕೊಳವೆ ಬಾವಿಗಳಿಗೆ ಪಂಪ್ ಅಳವಡಿಸದೇ ಇರುವುದನ್ನು ಮಾಡಬಾರದು. ಹೀಗಾಗಿ, ಹೊಸದಾಗಿ ಕೊಳೆಬಾವಿ ಕೊರೆಸಿದ್ದಕ್ಕೆ ಅರ್ಥವೇ ಇರುವುದಿಲ್ಲ. ಇಂತಹ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.

‘ಪಾಲಿಕೆ ಎಂಜಿನಿಯರ್ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಆಯುಕ್ತರೇ ನೋಡುತ್ತಿದ್ದಾರೆ. ಹೀಗಾಗಿ, ವಿಳಂಬವಾಗುತ್ತಿದೆ ತ್ವರಿತವಾಗಿ ಕೆಲಸಗಳು ಆಗುತ್ತಿಲ್ಲ ಎಂದು ಪಾಲಿಕೆ ಸದಸ್ಯರು ನನ್ನ ಬಳಿ ದೂರಿದ್ದಾರೆ. ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯ ಧೋರಣೆ ತಾಳದೇ ಮೊದಲು ಕುಡಿಯುವ ನೀರು ಪೂರೈಕೆ ಮಾಡುವತ್ತ ಗಮನಹರಿಸಬೇಕಾಗಿದೆ’ ಎಂದು ತಿಳಿಸಿದರು.

ಮರಳೂರು– ಅಮಾನಿಕೆರೆ ಬಳಕೆ ಅವಶ್ಯ: ‘ತುಮಕೂರು ಮಹಾನಗರಕ್ಕೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ಆಗಬಾರದು ಎಂದರೆ ಅಮಾನಿಕೆರೆ ಮತ್ತು ಮರಳೂರು ಕೆರೆಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿ ಕುಡಿಯುವ ನೀರು ಸಂಗ್ರಹಾಗಾರಗಳಾಗಿ ಪರಿವರ್ತಿಸುವುದು ಅವಶ್ಯವಾಗಿದೆ’ ಎಂದು ಹೇಳಿದರು.

‘ನಗರದ ಒಳಗಡೆ ಮತ್ತು ಪಾಲಿಕೆ ವ್ಯಾಪ್ತಿಯ ಹಳ್ಳಿಗಳಲ್ಲಿನ ಕೆರೆಗಳು ಸೇರಿ 26 ಕೆರೆಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಬೇಕು. ಮಳೆಗಾಲದಲ್ಲಿ ನೀರು ಸಂಗ್ರಹವಾದರೆ ಯಾರೂ ನೀರು ಕೇಳುವುದಿಲ್ಲ. ಅಂತರ್ಜಲ ಹೆಚ್ಚಾಗಿ ಕೊಳವೆ ಬಾವಿಗಳಿಂದಲೇ ನೀರು ಬಳಸಿಕೊಳ್ಳುತ್ತಾರೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗುವುದು’ ಎಂದು ವಿವರಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಇಂದ್ರಕುಮಾರ್, ಸದಸ್ಯ ಬಾವಿಕಟ್ಟೆ ನಾಗಣ್ಣ, ಪಕ್ಷದ ಮುಖಂಡರಾದ ಸಿ.ಎನ್.ರಮೇಶ್, ಎಚ್.ಎಂ.ರವೀಶ್, ಮುನಿಯಪ್ಪ, ವಕ್ತಾರ ಶಂಭು ಗೋಷ್ಠಿಯಲ್ಲಿದ್ದರು.

ಸದ್ಯಕ್ಕೆ ಮೈದಾಳ ಕೆರೆಯೇ ಆಸರೆ

‘ಸದ್ಯಕ್ಕೆ ಮೈದಾಳ ಕೆರೆಯೇ ಸ್ವಲ್ಪ ಮಟ್ಟಿಗೆ ನಗರದ ನೀರಿನ ಸಮಸ್ಯೆ ಹೋಗಲಾಡಿಸಲು ಆಸರೆಯಾಗಲಿದೆ. ಶೇ 90ರಷ್ಟು ಕೆರೆ ಭರ್ತಿಯಾಗಿದೆ. ಈಗ 8 ಇಂಚಿನ ಪೈಪ್‌ನಲ್ಲಿ 7 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ವಾರ್ಡುಗಳಿಗೆ ಪೂರೈಕೆ ಮಾಡಲು 10 ಇಂಚಿನ ಪೈಪ್ ಅಳವಡಿಸಬೇಕಾಗಿದೆ’ ಎಂದರು. ‘ಈ ದಿಶೆಯಲ್ಲಿ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಯತ್ನದಿಂದ ಕನಿಷ್ಠ ಇನ್ನೂ 10 ವಾರ್ಡುಗಳಿಗೆ ನೀರು ಪೂರೈಸಬಹುದು’ ಎಂದು ಹೇಳಿದರು.

ಮನೆ ಹಂಚಿಕೆಯಲ್ಲಿ ಮಧ್ಯಪ್ರವೇಶವಿಲ್ಲ

‘ವಿವಿಧ ವಸತಿ ಯೋಜನೆಗಳಡಿ ದಿಬ್ಬೂರು ಕಾಲೊನಿಯಲ್ಲಿ 1100 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ವಸತಿ ಹೀನರ, ಕೊಳಚೆ ಪ್ರದೇಶವಾಸಿಗಳು, ಬಡವರಲ್ಲದೇ ಕೆಲ ಸ್ಥಿತಿವಂತರೂ ಮನೆ ಪಡೆದಿದ್ದಾರೆ ಎಂಬ ದೂರುಗಳಿವೆ. ಅದೇನೇ ಇದ್ದರೂ ಈ ವಿಷಯದಲ್ಲಿ ಯಾವುದೇ ರೀತಿ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದರು.

‘ಹಿಂದಿನದ್ದನ್ನು ಕೆದಕಿ ಏನೂ ಪ್ರಯೋಜನವಿಲ್ಲ. ಈಗ ಹೊಸದಾಗಿ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸುವಾಗ ಎಚ್ಚರಿಕೆ ವಹಿಸಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದರು.

ಹೂಳೆತ್ತಲು ₹ 63 ಕೋಟಿ

‘ಬುಗುಡನಹಳ್ಳಿ ಕೆರೆಯಲ್ಲಿನ ಹೂಳೆತ್ತಲು ₹ 63 ಕೋಟಿ ಮಂಜೂರಾಗಿದೆ. ಕೆರೆಯಲ್ಲಿ ನೀರು ಸಂಗ್ರಹವಾಗಬೇಕು. ಕಾಮಗಾರಿಯೂ ನಡೆಯಬೇಕು. ಆ ರೀತಿ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ತುಮಕೂರು ಅಮಾನಿಕೆರೆ ಹಾಗೂ ಬುಗುಡನಹಳ್ಳಿ ಕೆರೆ ಸಂಪರ್ಕಿಸುವ ರಾಜಗಾಲುವೆ ಒತ್ತುವರಿಯಾಗಿವೆ. ಇವುಗಳನ್ನು ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಯೋಜನೆಯಡಿ ತೆರವುಗೊಳಿಸಿ ಕೆರೆಗಳಿಗೆ ನೀರು ಹರಿದು ಹೋಗುವಂತಹ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ಯೋಜನೆ ರೂಪಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.