ADVERTISEMENT

3 ಆಮ್ಲಜನಕ ಸಾಂದ್ರಕ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 8:00 IST
Last Updated 14 ಮೇ 2021, 8:00 IST
ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ ಮೂಲಕ ಪೊಲೀಸ್ ಇಲಾಖೆಯಿಂದ 5 ಆಮ್ಲಜನಕ ಸಾಂದ್ರಕಗಳನ್ನು ನೀಡಿದರು
ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ ಮೂಲಕ ಪೊಲೀಸ್ ಇಲಾಖೆಯಿಂದ 5 ಆಮ್ಲಜನಕ ಸಾಂದ್ರಕಗಳನ್ನು ನೀಡಿದರು   

ಶಿರಾ: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಜಾರಿಗೊಳಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಶಾಸಕ ಡಾ.ಸಿ‌.ಎಂ.ರಾಜೇಶ್ ಗೌಡ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಪೊಲೀಸ್ ಇಲಾಖೆಯಿಂದ ನೀಡಿದ 3 ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್ ಕಾನ್ಸ್‌ಟ್ರೇಟರ್) ಸ್ವೀಕರಿಸಿ ಮಾತನಾಡಿದರು.

ಕೋವಿಡ್‌ ಸೋಂಕಿತರಿಗೆ ಆಮ್ಲಜನಕದ ಅವಶ್ಯಕತೆ ಹೆಚ್ಚಿದೆ. ಇಂತಹ ಸಮಯದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆಗೆ 5, ಶಿರಾ ಆಸ್ಪತ್ರೆಗೆ 3 ಹಾಗೂ ತಿಪಟೂರು ಆಸ್ಪತ್ರೆಗೆ 2 ಸೇರಿದಂತೆ ಒಟ್ಟು 10 ಆಮ್ಲಜನಕದ ಸಾಂದ್ರಕಗಳನ್ನು‌ ವಿತರಿಸುವ ಮೂಲಕ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದೆ ಎಂದರು.

ADVERTISEMENT

ಶಿರಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇಲ್ಲ. ಶೀಘ್ರದಲ್ಲೇ ಆಮ್ಲಜನಕ ಉತ್ಪಾದನಾ ಘಟಕ ಕೆಲಸ ಪ್ರಾರಂಭಿಸಲಿದೆ. ಈಗಾಗಲೇ ಆಸ್ಪತ್ರೆಯಲ್ಲಿ 5 ಆಮ್ಲಜನಕ ಸಾಂದ್ರಕಗಳಿದ್ದು ಈಗ ಅಮೆಜಾನ್ ಕಂಪನಿಯವರು 5, ಪೊಲೀಸ್ ಇಲಾಖೆಯವರು 3 ಮತ್ತು ಸರ್ಕಾರದಿಂದ 7 ಬಂದಿರುವುದರಿಂದ ಒಟ್ಟು 20 ಆಮ್ಲಜನಕ ಸಾಂದ್ರಕಗಳು ಆಸ್ಪತ್ರೆಯಲ್ಲಿದ್ದು, ರೋಗಿಗಳಿಗೆ ಯಾವುದೇ ರೀತಿಯಲ್ಲಿ ಆಮ್ಲಜನಕದ ಸಮಸ್ಯೆ ಉಂಟಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ತಹಶೀಲ್ದಾರ್ ಎಂ.ಮಮತ, ಡಿವೈಎಸ್‌ಪಿ ಕುಮಾರಪ್ಪ, ನಗರ ವೃತ್ತ ನಿರೀಕ್ಷಕ ಹನುಮಂತಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕ ರವಿಕುಮಾರ್, ಪಿಎಸ್ಐ ಸಿದ್ಧಾರ್ಥ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.