ADVERTISEMENT

4 ಹೊಸ ಸ್ನಾತಕೋತ್ತರ ಕೋರ್ಸ್ ಆರಂಭ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:15 IST
Last Updated 5 ಸೆಪ್ಟೆಂಬರ್ 2013, 8:15 IST

ತುಮಕೂರು: ಹೊಸದಾಗಿ ನಾಲ್ಕು ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತುಮಕೂರು ವಿವಿ ಕುಲಪತಿ ಡಾ.ರಾಜಾಸಾಬ್ ಹೇಳಿದರು.

ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೈವಿಕ ತಂತ್ರಜ್ಞಾನ, ಸೂಕ್ಷ್ಮ ಜೀವಶಾಸ್ತ್ರದ ಕೋರ್ಸ್ ಆರಂಭಿಸಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ವಿಷಯಗಳಲ್ಲಿ ಪದವಿ ಅಧ್ಯಯನ ಮಾಡಿದ ವಿ.ವಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗೆ ಅವಕಾಶವಿರಲಿಲ್ಲ. ಇದನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ. ಪ್ರಸ್ತಾವನೆಗೆ ವಿ.ವಿ ಹಣಕಾಸು ಸಮಿತಿ, ವಿದ್ಯಾವಿಷಯಕ ಪರಿಷತ್, ಸಿಂಡಿಕೇಟ್ ಅನುಮೋದನೆ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್ ಆರಂಭಿಸಲಾಗುವುದು ಎಂದು ಹೇಳಿದರು.

ಪ್ರತಿ ಕೋರ್ಸ್‌ಗೆ ಪ್ರತಿ ವರ್ಷ ರೂ. 70 ಲಕ್ಷದಂತೆ, ಒಟ್ಟಾರೆ ರೂ. 2.80 ಕೋಟಿ ವೆಚ್ಚ ತಗುಲಲಿದೆ. ಇದನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದರು.

ಬಿ.ಕಾಂ.ಗೆ ಹೆಚ್ಚುವರಿ ವಿಭಾಗ: ಬಿ.ಕಾಂ.ನಲ್ಲಿ ಹೆಚ್ಚುವರಿಯಾಗಿ ಒಂದು ವಿಭಾಗ ತೆರೆದರೂ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ. ಅರ್ಜಿ ಸಲ್ಲಿಸಿದ 900 ವಿದ್ಯಾರ್ಥಿಗಳಲ್ಲಿ 120 ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರವೇಶ ದೊರೆತಿದೆ. ಉಳಿವರು ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಾಯಿತು. ಹೀಗಾಗಿ ಮುಂದಿನ ವರ್ಷ ಮತ್ತಷ್ಟು ವಿಭಾಗ ತೆರೆಯಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ ನಾಲ್ಕು ಬೋಧಕ ಹುದ್ದೆಗೆ ಅನುಮೋದನೆ ನೀಡಬೇಕೆಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಘಟಕ ಆರಂಭ: ಯುಜಿಸಿ ಅನುದಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕ ಹಾಗೂ ವಿಶ್ವವಿದ್ಯಾನಿಲಯ ಗಣಕ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ವಿಶ್ವವಿದ್ಯಾನಿಲಯ ಹಣಕಾಸು ಸಮಿತಿ, ವಿದ್ಯಾವಿಷಯಕ ಪರಿಷತ್, ಸಿಂಡಿಕೇಟ್ ಅನುಮೋದನೆ ನೀಡಿದ್ದು, ಸರ್ಕಾರದ ಅನುಮತಿಗೆ ಕೋರಲಾಗಿದೆ ಎಂದರು.

ಉಪನ್ಯಾಸ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಭೌತಶಾಸ್ತ್ರದಲ್ಲಿ ವಿಶೇಷ ಉಪನ್ಯಾಸ ನಡೆಸಲು ರೂ. 1.14 ಲಕ್ಷ ನೀಡಿದ್ದು, ಮೂರು ದಿನಗಳ ಕಾಲ ಹನ್ನೆರಡು ಉಪನ್ಯಾಸ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಭೂಮಿ ಬೇಕು: ಸರ್ಕಾರ 250 ಎಕರೆಯಿಂದ 300 ಎಕರೆ ಭೂಮಿ ನೀಡಿದರೆ ವಿ.ವಿ ಅಭಿವೃದ್ಧಿಪಡಿಸಬಹುದು. ಸರ್ಕಾರದ ಮೇಲೆ ಒತ್ತಡ ತಂದು ಭೂಮಿ ಮಂಜೂರು ಮಾಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಭೂಮಿ ನೀಡದಿದ್ದರೆ ವಿ.ವಿ ಅಭಿವೃದ್ಧಿ ಅಸಾಧ್ಯ.

ಬಿದರೆಕಟ್ಟೆ, ಗೊಲ್ಲಹಳ್ಳಿ, ವಸಂತನರಸಾಪುರ, ಬೆಳ್ಳಾವಿ ಕ್ರಾಸ್ ಬಳಿ ಭೂಮಿ ನೋಡಲಾಗಿದೆ. ಎಲ್ಲಿಯಾದರೂ ಸರಿಯೇ, 250ರಿಂದ 300 ಎಕರೆ ಭೂಮಿಯ ಅಗತ್ಯವಿದೆ. ಇದಕ್ಕಿಂತಲೂ ಕಡಿಮೆ ಭೂಮಿ ನೀಡಿದರೆ ಪ್ರಯೋಜನವಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

18ರಂದು ಅಬ್ದುಲ್ ಕಲಾಂ ಸಂವಾದ
ಸೆ. 18ರಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅಂದು ಮಧ್ಯಾಹ್ನ 3.45ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಒಂದು ಗಂಟೆ ಕಾಲ ನಡೆಯಲಿದೆ ಎಂದು ಕುಲಪತಿ ಡಾ.ರಾಜಾಸಾಬ್ ತಿಳಿಸಿದರು.

ವಿ.ವಿ ಹಳೆ ಲಾಂಛನ ಮುಂದುವರಿಸುವಂತೆ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಬೇಡಿಕೆ ಇಟ್ಟರೆ ಮಾತ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಈ ವಿವಾದ ಬೆಳೆಸಲು ಇಷ್ಟಪಡುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.