ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನ: ಜಿಲ್ಲೆಗೆ ಗೌರವ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 6:19 IST
Last Updated 7 ಜನವರಿ 2018, 6:19 IST
ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿದರು. ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ರಫೀಕ್ ಅಹಮ್ಮದ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜ್, ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಆರ್.ರಾಜೇಂದ್ರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಗ್ಗೆರೆ ನರಸಿಂಹಮೂರ್ತಿ, ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ನಿಂಗಪ್ಪ, ‘ಮುಖ್ಯಮಂತ್ರಿ’ ಚಂದ್ರು ಇದ್ದರು (ಎಡಚಿತ್ರ). ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು
ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿದರು. ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ರಫೀಕ್ ಅಹಮ್ಮದ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜ್, ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಆರ್.ರಾಜೇಂದ್ರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಗ್ಗೆರೆ ನರಸಿಂಹಮೂರ್ತಿ, ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ನಿಂಗಪ್ಪ, ‘ಮುಖ್ಯಮಂತ್ರಿ’ ಚಂದ್ರು ಇದ್ದರು (ಎಡಚಿತ್ರ). ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು   

ತುಮಕೂರು/ ಚಿಕ್ಕನಾಯಕನಹಳ್ಳಿ: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ’ ಕಾರ್ಯಕ್ರಮದಲ್ಲಿ ಮುಖಂಡರು ‘ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ಖಚಿತ’ ಎಂದು  ಒಕ್ಕೊರಲಿನಿಂದ ಪ್ರತಿಪಾದಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಯೋಜನೆಗಳ ಕುರಿತು ಪ್ರಶಂಸೆಯ ಮಳೆಗರೆದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ‘ನಾನು 7 ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇದು ಜಿಲ್ಲೆಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ನೀಡಿರುವ ಗೌರವ. ಆದ್ದರಿಂದ ಜಿಲ್ಲೆಯ ಜನರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಂಕಲ್ಪ ಮಾಡಬೇಕು’ ಎಂದು ಕೋರಿದರು.

ADVERTISEMENT

‘ಗ್ರಾಮಾಂತರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ದೊರೆಯುತ್ತದೆ ಎನ್ನುವುದು ಮುಖ್ಯವಲ್ಲ. ಹೈಕಮಾಂಡ್ ಟಿಕೆಟ್ ಕೊಟ್ಟವರ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಒಬ್ಬೊಬ್ಬರು ಒಂದೊಂದು ಕಡೆ ಮುಖ ಮಾಡಬಾರದು. ಒಗ್ಗಟ್ಟು ಇದ್ದರೆ ಖಂಡಿತ ಗೆಲುವು ಸಾಧಿಸಬಹುದು’ ಎಂದರು.

‘ಕಳೆದ ಲೋಕಸಭಾ ಚುನಾವಣೆ ವೇಳೆ ಎಸ್‌.ಪಿ.ಮುದ್ದಹನುಮೇಗೌಡರಿಗೆ ಇಲ್ಲಿ 49 ಸಾವಿರ ಮತಗಳು ಬಂದಿದೆ. ಆ ಮತಗಳನ್ನು ಮುಖಂಡರು ಮತ್ತೆ ಒಗ್ಗೂಡಿಸಬೇಕು’ ಎಂದು ಅವರು ಹೇಳಿದರು.

ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ‘ಗ್ರಾಮಾಂತರದಲ್ಲಿ ಕಾಂಗ್ರೆಸ್ ಸೊರಗಿರುವುದು ನಿಜ. ಆದ್ದರಿಂದ ಮತ್ತೆ ಜನರ ವಿಶ್ವಾಸಗಳಿಸಬೇಕು. ಇಲ್ಲಿ ನಾವು ಗಾಯಗೊಂಡಿರುವ ಹುಲಿಗಳು. ಸುಮ್ಮನೆ ಮಲಗಿದ್ದಾರೆ ಎಂದು ವಿರೋಧಿಗಳು ಭಾವಿಸಬಾರದು. ಮುಂದಿನ ಚುನಾವಣೆಯಲ್ಲಿ ಇಲ್ಲಿ ಅಚ್ಚರಿ ಫಲಿತಾಂಶ ಹೊರಹುಮ್ಮುತ್ತದೆ’ ಎಂದು ನುಡಿದರು. ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಕೆ.ಎನ್.ರಾಜಣ್ಣ ಮಾತನಾಡಿದರು.

ಕಾಂಗ್ರೆಸ್‌ಗೆ ರಾಯಸಂದ್ರ ರವಿಕುಮಾರ್

ಮುಖಂಡ ರಾಯಸಂದ್ರ ರವಿಕುಮಾರ್ ಇದೇ ವೇಳೆ ಕಾಂಗ್ರೆಸ್ ಸೇರಿದರು. ಯಡಿಯೂರಪ್ಪ ಬೆಂಬಲಿಗರಾಗಿದ್ದ ಅವರು ಕೆಜೆಪಿಯಲ್ಲಿ ಪ್ರಮುಖ ಸ್ಥಾನದಲ್ಲಿ ಇದ್ದರು. ಯಡಿಯೂರಪ್ಪ ಬಿಜೆಪಿ ಸೇರಿದ ನಂತರ ತಟಸ್ಥರಾಗಿದ್ದರು. ಇತ್ತೀಚೆಗೆ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ನಗರದಲ್ಲಿ  ಬೆಂಬಲಿಗರ ಸಭೆ ಸಹ ನಡೆಸಿದ್ದರು. ಟಾರ್ಗೆಟ್ 11, ‘ಪರಮ ಸಿದ್ಧ ಸರ್ಕಾರ’ ಎಂಬ ರವಿಕುಮಾರ್ ಅವರ ಫ್ಲೆಕ್ಸ್‌ಗಳು ಗಮನ ಸೆಳೆದವು.

ಸ್ಥಳೀಯ ಶಾಸಕರನ್ನು ಟೀಕಿಸದ ಮುಖಂಡರು

ಜಿಲ್ಲೆಯ ತುರುವೇಕೆರೆ, ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜೆಡಿಎಸ್ ಶಾಸಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡರು ಗ್ರಾಮಾಂತರದಲ್ಲಿ ಮಾತ್ರ ಸುರೇಶ್ ಗೌಡ ಅವರನ್ನು ಟೀಕಿಸಲಿಲ್ಲ.

ಚಿಕ್ಕನಾಯಕನಹಳ್ಳಿ: ‘ಅಭ್ಯರ್ಥಿ ಯಾರೇ ಆದರೂ ಒಗ್ಗಟ್ಟಿನಿಂದ ದುಡಿದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಸಚಿವ ಟಿ.ಬಿ.ಜಯಚಂದ್ರ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮೂರು ವರ್ಷಗಳಲ್ಲಿ ತಾಲ್ಲೂಕಿನ ಭದ್ರಾ ಮೇಲ್ದಂಡೆ, ಎತ್ತಿನ ಹೊಳೆ ಹಾಗೂ ಹೇಮಾವತಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಇದು ನಿಲ್ಲದಿದ್ದರೆ ತಲೆ ಹೋಗುತ್ತದೆ:  ಮುಖಂಡ ಸಾಸಲು ಸತೀಶ್ ಭಾವಚಿತ್ರ ಹಿಡಿದು ಸತೀಶಣ್ಣ ಎಂದು ಕಾರ್ಯಕರ್ತರು ಕೂಗುತ್ತಿದ್ದರು. ಇದನ್ನು ಗಮನಿಸಿದ ಡಾ.ಜಿ.ಪರಮೇಶ್ವರ್ ‘ಸತೀಶ ಇವರನ್ನು ನೀನೇ ಕರೆದುಕೊಂಡು ಬಂದಿದ್ದೀಯಾ. ಅವರಿಗೇನಾದರೂ ಡೋಸ್ ನೀಡಿದ್ದೀಯಾ.‌ ಇದು ನಿಲ್ಲದಿದ್ದರೆ ನಿನ್ನ ತಲೆ (ಟಿಕೆಟ್‌) ಹೋಗುತ್ತದೆ. ಅವರನ್ನು ಸುಮ್ಮನಿರಿಸು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಯೋಗೀಶ್ವರಿ, ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಸಂತೋಷ್ ಜಯಚಂದ್ರ, ಪ್ರೊ.ರಾಧಾಕೃಷ್ಣ, ಜಿ.ಜಿ.ರಘುನಾಥ್, ದಿವ್ಯಾಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.