ADVERTISEMENT

ತುಮಕೂರು | ₹55 ಲಕ್ಷದ ಚಿನ್ನಾಭರಣ ವಶ; ಐವರ ಬಂಧನ

918 ಗ್ರಾಂ ಚಿನ್ನಾಭರಣ ವಶ; 17 ಪ್ರಕರಣ ಭೇದಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 15:22 IST
Last Updated 13 ಸೆಪ್ಟೆಂಬರ್ 2024, 15:22 IST
ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಎಸ್ಸಿ ಕೆ.ವಿ.ಅಶೋಕ್ ಜಪ್ತಿ ಮಾಡಿರುವ ಚಿನ್ನಾಭರಣಗಳನ್ನು ವೀಕ್ಷಿಸಿದರು. ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು
ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಎಸ್ಸಿ ಕೆ.ವಿ.ಅಶೋಕ್ ಜಪ್ತಿ ಮಾಡಿರುವ ಚಿನ್ನಾಭರಣಗಳನ್ನು ವೀಕ್ಷಿಸಿದರು. ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು   

ತುಮಕೂರು: ವಿವಿಧ ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಕಳ್ಳರನ್ನು ಬಂಧಿಸಿರುವ ಪೊಲೀಸರು, ₹55.15 ಲಕ್ಷ ಮೌಲ್ಯದ 918 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಒಟ್ಟು 17 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ 15 ಕಡೆಗಳಲ್ಲಿ ಕಳ್ಳತನ ಮಾಡಿದ್ದ ಪ್ಲವರ್ ಡೆಕೊರೇಷನ್ ಕೆಲಸ ಮಾಡುವ ಆಂಧ್ರಪ್ರದೇಶದ ಗುಂಟೂರಿನ ಬಂಡಿಕಾಳ್ಳ ರತ್ನರಾಜು (36) ಹಾಗೂ ಮಧುಗಿರಿ ತಾಲ್ಲೂಕು ಜನಕಲೋಟಿ ಸಮೀಪದ ಹಳೇ ಇಟಕಲೋಟಿ ಗ್ರಾಮದ ಎಚ್.ವಿ.ಶ್ರೀನಿವಾಸ– ಕಳ್ಳಸೀನ (30) ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದಲ್ಲಿ ಟಿ.ವಾಸುದೇವ ಎಂಬುವರ ಮನೆ ಕಳ್ಳತನ ಪ್ರಕರಣದ ಬೆನ್ನುಹತ್ತಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಮತ್ತಷ್ಟು ಕಡೆಗಳಲ್ಲಿ ಕಳ್ಳತನ ಮಾಡಿದ್ದು ಗೊತ್ತಾಗಿದೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10, ನಗರ ಠಾಣೆ ವ್ಯಾಪ್ತಿಯಲ್ಲಿ 2, ಹೊಸಬಡಾವಣೆ ಠಾಣೆ, ಹೆಬ್ಬೂರು ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಸೇರಿಸಿದಂತೆ 15 ಕಡೆಗಳಲ್ಲಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಕಳ್ಳತನ ಮಾಡಿದ ₹49.16 ಲಕ್ಷ ಮೊತ್ತದ 819 ಗ್ರಾಂ ಚಿನ್ನದ ಆಭರಣಗಳು, ₹88 ಸಾವಿರ ಬೆಲೆ ಬಾಳುವ 1 ಕೆ.ಜಿ 300 ಗ್ರಾಂ ಬೆಳ್ಳಿಯ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಸರಗಳ್ಳರ ಬಂಧನ: ಸರಗಳ್ಳತನ ಪ್ರಕರಣದಲ್ಲಿ ಕ್ಯಾಬ್ ಚಾಲಕ ಬೆಂಗಳೂರು ಲಗ್ಗೆರೆಯ (ಮೂಲ ನಾಗಮಂಗಲದ ಜೋಡಿ ಮುನೇಶ್ವರ ದೇವಸ್ಥಾನ) ಮುನಿರಾಜು (37), ಕಾರ್ಖಾನೆಯೊಂದರಲ್ಲಿ ಲೋಡರ್ ಕೆಲಸ ಮಾಡುತ್ತಿದ್ದ ಬೆಂಗಳೂರು ನೆಲಗದರನಹಳ್ಳಿಯ (ಮೂಲ ಶಿರಾ ತಾಲ್ಲೂಕು ತಡಕಲೂರು) ಅಭಿಷೇಕ್ (21) ಹಾಗೂ ಕ್ಯಾಬ್ ಚಾಲಕ ಬೆಂಗಳೂರು ಪೀಣ್ಯದ ದೊಡ್ಡ ಬಿದರನಕಲ್ಲು ಬಡಾವಣೆಯ ರೋಹನ್ ಕುಮಾರ್ (20) ಎಂಬುವರನ್ನು ಬಂಧಿಸಿದ್ದಾರೆ.

ಜಯನಗರ ಬಡಾವಣೆಯ ಎ.ಮಂಜುಳ ಎಂಬುವರ ಸರಗಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಎರಡು ಕಡೆಗಳಲ್ಲಿ ಕಳ್ಳತನ ಮಾಡಿದ್ದು ಗೊತ್ತಾಗಿದೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ₹3.4 ಲಕ್ಷ ಬೆಲೆಯ 50 ಗ್ರಾಂ ತೂಕದ ಚಿನ್ನದ ಸರ, ಮತ್ತೊಂದು ಕಡೆ ಕಳ್ಳತನ ಮಾಡಿದ್ದ ₹2.95 ಲಕ್ಷ ಬೆಲೆ ಬಾಳುವ 49 ಗ್ರಾಂ ತೂಕದ ಚಿನ್ನದ ಸರ, ಬೈಕ್ ಜಪ್ತಿ ಮಾಡಿದ್ದಾರೆ.

ನಗರ ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸೈಬರ್ ವಂಚನೆ: ₹6 ಕೋಟಿ ವಾಪಸ್

ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಂಚನೆಗೆ ಒಳಗಾದವರಿಗೆ ಈ ವರ್ಷ ₹6 ಕೋಟಿ ಹಣವನ್ನು ವಾಪಸ್ ಕೊಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು. ಜನರಲ್ಲೂ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡುತ್ತಿದೆ. ತಡೆಗಟ್ಟಲು ಜಾಗೃತಿ ಮೂಡಿಸುತ್ತಿದ್ದು ಪತ್ತೆ ಮಾಡಲು ಆಧುನಿಕ ಸಾಧನಗಳನ್ನು ಬಳಕೆ ಮಾಡಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಇದು ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಮಯದಲ್ಲಿ ಭದ್ರತೆಗಾಗಿ ಜಿಲ್ಲೆಯಲ್ಲಿ ಸುಮಾರು 800 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಬಡ್ಡಿ ದಂಧೆ ನಡೆಸುವವರು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಂತಿ ಸಭೆ ನಡೆಸಿ ಈದ್ ಮಿಲಾದ್ ಸಮಯದಲ್ಲಿ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ. ಬಿ.ಎಚ್.ರಸ್ತೆ ಅಶೋಕ ರಸ್ತೆಗಳಲ್ಲಿ ಬ್ಯಾನರ್ ಬಂಟಿಗ್ಸ್ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಮೆರವಣಿಗೆ ಸಮಯದಲ್ಲಿ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.