ADVERTISEMENT

ನ್ಯಾಯಾಲಯದ ಹೊರಗು ನ್ಯಾಯ ಪ್ರತಿಪಾದಿಸಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 7:03 IST
Last Updated 12 ಫೆಬ್ರುವರಿ 2018, 7:03 IST

ತುಮಕೂರು: ‘ನ್ಯಾಯವನ್ನೇ ಧರ್ಮ ಎಂದು ನಂಬುವ ವಕೀಲರು ಕೇವಲ ನ್ಯಾಯಾಲಯದ ಆವರಣದಲ್ಲಿ ಮಾತ್ರವಲ್ಲದೆ ನ್ಯಾಯಾಲಯದ ಹೊರಗೂ ನ್ಯಾಯವನ್ನು ಪ್ರತಿಪಾದಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಹೇಳಿದರು. ನಗರದಲ್ಲಿ ಅಧಿವಕ್ತಾ ಪರಿಷತ್‌ನ ಭಾನುವಾರ ನಡೆದ ‘ಯುವೋತ್ಸವ’ ಯುವ ವಕೀಲರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಆಕಾಶದಿಂದ ಮಳೆಯ ರೂಪದಲ್ಲಿ ಭೂಮಿಗೆ ಬೀಳುವ ನೀರು ತನ್ನೆಲ್ಲ ಕರ್ತವ್ಯವನ್ನು ನಿಭಾಯಿಸಿಯೇ ಆವಿಯಾಗಿ ಮೇಲೆ ಹೋಗುತ್ತದೆ. ಹೀಗೆಯೆ ಮನುಷ್ಯ ಕೂಡ ಸಾಯುವ ಮೊದಲು ತಾನು ಮಾಡಬೇಕಾಗಿರುವ ಕರ್ತವ್ಯವನ್ನು ತಪ್ಪದೇ ಮಾಡಬೇಕು’ ಎಂದು ಹೇಳಿದರು.

ವಕೀಲರು ಸಮಾಜದಲ್ಲಿ ಬದಲಾವಣೆಯ ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ಹಕ್ಕು ಮತ್ತು ಕರ್ತವ್ಯ ಏನು ಎನ್ನುವ ಕುರಿತು ವಕೀಲರು ಅರಿವು ಮೂಡಿಸಬೇಕು. ಎಷ್ಟೋ ಜನರಿಗೆ ಇದುವರೆಗೂ ತಮ್ಮ ಹಕ್ಕುಗಳ ಬಗ್ಗೆಯೇ ಅರಿವಿಲ್ಲ. ಹೀಗಾಗಿ ಅವರು ತಮ್ಮ ಹಕ್ಕುಗಳ ರಕ್ಷಣೆ ಮಾಡಿಕೊಳ್ಳಲಾಗುತ್ತಿಲ್ಲ ಎಂದರು.

ADVERTISEMENT

‘ಕಾನೂನು ವ್ಯಕ್ತಿಯ ದೇಹ, ಆಸ್ತಿ ಮತ್ತು ಗೌರವವನ್ನು ರಕ್ಷಣೆ ಮಾಡುತ್ತದೆ. ವ್ಯಕ್ತಿ ಬದುಕಿದ್ದಾಗ ಮಾತ್ರವಲ್ಲ, ಅವನು ಸತ್ತು ದೇಹ ಮಣ್ಣಾಗುವವರೆಗೂ ದೇಹಕ್ಕೆ ಕಾನೂನಿನ ರಕ್ಷಣೆ ನೀಡಬೇಕು’ ಎಂದು ತಿಳಿಸಿದರು.

ವಿಭು ಫೌಂಡೇಶನ್‌ ಸಂಸ್ಥಾಪಕಿ ಆರತಿ ‘ಯುವ ಮನಸುಗಳು’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕರ್ನಾಟಕ ಪೊಲೀಸ್‌ ಅಕಾಡೆಮಿಯ ಡಾ.ಜಿ.ಅನಂತ ಪ್ರಭು ‘ಸೈಬರ್‌ ಬೆದರಿಕೆಗಳು–ಆಂತರಿಕ ಭದ್ರತೆ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಅಧಿವಕ್ತಾ ಪರಿಷತ್‌ನ ರಾಜ್ಯ ಘಟಕದ ಎ.ಎಂ.ಸೂರ್ಯಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಕೆ.ಎನ್‌.ರಾಜಶೇಖರ್‌, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಬದಾಮಿಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.