ADVERTISEMENT

ಕೊಳಚೆ ನೀರಿನಿಂದ ನಿಂತ ಪೂಜಾಕಾರ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 7:03 IST
Last Updated 20 ಫೆಬ್ರುವರಿ 2018, 7:03 IST

ಚಿಕ್ಕನಾಯಕನಹಳ್ಳಿ: ಅವೈಜ್ಞಾನಿಕ ಸಿ.ಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಯಿಂದಾಗಿ ದೇವಸ್ಥಾನದ ಮುಂದೆ ಕೊಳಚೆ ನಿಂತು ನಿಲ್ಲುತ್ತಿದ್ದು ಕಳೆದ 6 ತಿಂಗಳಿನಿಂದ ದೇವಸ್ಥಾನದ ಪೂಜಾಕಾರ್ಯ ನಿಂತು ಹೋಗಿದೆ. ಕೊಚ್ಚೆ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಬರಗೂರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬರಗೂರು ಎ.ಕೆ.ಕಾಲೊನಿ ನಿವಾಸಿಗಳು ದೂರಿದ್ದಾರೆ.

ಎ.ಕೆ.ಕಾಲೊನಿಯಲ್ಲಿ 30 ಮನೆಗಳಿವೆ. ಜನಾಂಗದ ದೈವ, ಶಿವಶರಣ ಹರಳಯ್ಯನಿಗೆ ಪುಟ್ಟ ಗುಡಿಕಟ್ಟಿ ಪ್ರತೀ ಸೋಮವಾರ ಪೂಜೆ ಸಲ್ಲಿಸುತ್ತಿದ್ದೆವು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಸಿ.ಸಿ ರಸ್ತೆ ಹಾಗೂ ರಸ್ತೆ ಬದಿ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿತ್ತು. ಅಂದಿನಿಂದ ಕೊಳಚೆ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಹಲವು ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಪಂಚಾಯಿತಿ ಅಧಿಕಾರಿಗಳು ಸ್ಪಂದಿಸದಾದಾಗ ಕಾಲೊನಿ ಜನರೇ ಮುಂದೆ ನಿಂತು ದೇವಸ್ಥಾನದ ಮುಂದೆ ನಿಲ್ಲುತ್ತಿದ್ದ ನೀರನ್ನು ಪಕ್ಕದ ಬಯಲಿನಲ್ಲಿ ಇಂಗುವಂತೆ ಮಾಡಿದ್ದೆವು. ಕಳೆದ ಸೆಪ್ಟೆಂಬರ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬಯಲನ್ನು ಆಕ್ರಮಿಸಿಕೊಂಡು ಕೊಳಚೆ ನೀರು ಹರಿದು ಹೋಗದಂತೆ ಅಡ್ಡಲಾಗಿ ಮಣ್ಣು ಹೊಡೆದಿದ್ದಾರೆ. ಅಂದಿನಿಂದ ಕೊಳಚೆನೀರು ದೇವಸ್ಥಾನದ ಮುಂದೆ ನಿಲ್ಲುತ್ತಿದೆ. ಒಮ್ಮೊಮ್ಮೆ ಕೊಳಚೆ ನೀರು ದೇವಸ್ಥಾನದ ಒಳಗೆ ಹರಿಯುವುದರಿಂದ ದೇವಸ್ಥಾನದ ಒಳಗೆ ಇರುವ ಹುತ್ತ ಕರಗುತ್ತಿದೆ. ಒಳಗೆ ಪ್ರವೇಶಿಸಲು ಸಾಧ್ಯವಾಗದೆ 6 ತಿಂಗಳಿನಿಂದ ಪೂಜೆ ನಿಂತಿದೆ ಎಂದು ದಯಾನಂದ್, ನೇತ್ರಾವತಿ, ನಾಗರಾಜು, ದೇವೀರಮ್ಮ, ಭಾಗ್ಯಮ್ಮ, ಕೆಂಚಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ನಿರಂತರವಾಗಿ ಕೊಳಚೆ ನಿಲ್ಲುತ್ತಿದ್ದು ದೇವಸ್ಥಾನದ ಆವರಣ ಸೊಳ್ಳೆಗಳ ಉತ್ಪಾದನಾ ತಾಣವಾಗಿ ಪರಿಣಮಿಸಿದೆ. ಕಾಲೊನಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಕೊಳಚೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಈ ಗಾಗಲೇ ಮನವಿ ಸಲ್ಲಿಸಿದ್ದೇವೆ. ಪಂಚಾಯಿತಿ ಅಧಿಕಾರಿಗಳು ಉದಾಸೀನ ಧೋರಣೆ ಅನುಸರಿಸಿದರೆ ಪಂಚಾಯಿತಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ’ ಎಂದು ಕಾಲೊನಿ ನಿವಾಸಿಗಳು ಎಚ್ಚರಿಸಿದ್ದಾರೆ.

ಬರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಮಾತನಾಡಿ, ಕೊಳಚೆ ನೀರು ಹೊರ ಹೋಗುವಂತೆ ಮಾಡಲು 150 ಮೀ. ಉದ್ದದ ಒಳಚರಂಡಿ ನಿರ್ಮಿಸಬೇಕು. ಜತೆಗೆ ರಸ್ತೆ ನಿರ್ಮಾಣವೂ ಆಗಬೇಕು. ಈ ಎಲ್ಲ ಕಾಮಗಾರಿಗೆ ₹ 10ರಿಂದ 12 ಲಕ್ಷ ಅನುದಾನ ಬೇಕಾಗುತ್ತದೆ. ಇದಕ್ಕಾಗಿ ಶಾಸಕರ ಅಥವಾ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನ ಬರುವವರೆಗೆ ಕಾಯಬೇಕು ಎಂದರು.

ಧನಂಜಯ

* * 

ನಾನು ಪಂಚಾಯಿತಿಗೆ ಬಂದು 3 ತಿಂಗಳಾಗಿದೆ. ಹಿಂದೆ ಏನಾಗಿತ್ತು ಎನ್ನುವುದು ಗೊತ್ತಿಲ್ಲ. ಸದಸ್ಯರ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ.
-ಕೃಷ್ಣಾಬಾಯಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬರಗೂರು ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.