ಕುಣಿಗಲ್: ತಾಲ್ಲೂಕಿನಲ್ಲಿ 64,693 ಪಡಿತರ ಚೀಟಿಗಳು ಎಂದಿನಂತೆ ಚಾಲ್ತಿಯಲ್ಲಿವೆ. 171 ಚೀಟಿಗಳು ಮಾತ್ರ ರದ್ದಾಗಿದೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧುವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಆದಾಯ ತೆರಿಗೆ ಪಾವತಿ ಮಾಡುತ್ತಿರುವ 171 ಚೀಟಿಗಳು ರದ್ದಾಗಿದೆ. 437 ಅರ್ಜಿಗಳು ಬಂದಿದ್ದು ಮುಂದಿನ ದಿನಗಳಲ್ಲಿ ಪಡಿತರ ಚೀಟಿ ನೀಡಲಾಗುವುದು. ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ ಎಂದರು.
ನರೇಗಾ ಯೋಜನೆ ನಿರೀಕ್ಷಿತ ಗುರಿ ಮುಟ್ಟುವಲ್ಲಿ ಕೆಲ ಪಿಡಿಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಕಂಡು ಬಂದಿದ್ದು, ಗುರಿ ಸಾಧನೆಗೆ ಕ್ರಮವಹಿಸಲು ಸೂಚನೆ ನೀಡಿದರು. ದನದ ಕೊಟ್ಟಿಗೆ ನಿರ್ಮಾಣದ ಕ್ರಿಯಾಯೋಜನೆಗೆ ಅನುಮೋದನೆ ಸಿಗದ ಕಾರಣ ಸಮಸ್ಯೆಯಾಗುತ್ತಿದೆ ಎಂದು ಪಿಡಿಒಗಳು ದೂರಿದರು.
ಡಿಸೆಂಬರ್ ಮೊದಲ ವಾರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೀರಿನ ಟ್ಯಾಂಕ್ ಸೇರಿದಂತೆ ಚರಂಡಿಗಳನ್ನು ಸ್ವಚ್ಛಗೊಳಿಸುವ ಸಾಮೂಹಿಕ ಕಾರ್ಯಕ್ಕೆ ಚಾಲನೆ ನೀಡಲು ಸೂಚಿಸಿದರು.
ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ನವೆಂಬರ್ 30 ರಿಂದ ‘ಶಾಸಕರ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಮೋದೂರಿನಲ್ಲಿ ಹಮ್ಮಿಕೊಂಡಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ತಾಲ್ಲೂಕಿನಲ್ಲಿ ಜೆಜೆಎಂ ಸಂಪೂರ್ಣ ವಿಫಲವಾಗಿ, ಜನರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಶ್ವನಾಥ್ ಆರೋಪಿಸಿದರು. ಪಂಚಾಯಿತಿ ಅಧಿಕಾರಿಗಳು ಎಚ್ಚರಿಕೆಯಿಂದ ಗಮನಹರಿಸಲು ಸೂಚನೆ ನೀಡಿದರು.
ಸಭೆಗೆ ಯಾವುದೇ ಮಾಹಿತಿ ಮತ್ತು ದಾಖಲೆಗಳು ಇಲ್ಲದೆ, ಬೆಸ್ಕಾಂ ಇಇ, ಎಇಇ ಪರವಾಗಿ ಬಂದಿದ್ದ ಎಇ ಶ್ರೀನಿವಾಸ್ ನಾಯ್ಡು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಸಭೆಯಿಂದ ಹೊರಗಟ್ಟಿದರು.
ತಹಶೀಲ್ದಾರ್ ರಶ್ಮಿ, ಇಒ ನಾರಾಯಣ, ಪುರಸಭೆ ಮುಖ್ಯಾಧಿಕಾರಿ ಮಂಜುಳಾ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.