ADVERTISEMENT

650 ಗಿಡ ಕಿತ್ತು ಹಾಕಿದ ಗ್ರಾಮಸ್ಥರು

ಅಮೃತೂರು ಠಾಣೆಯಲ್ಲಿ ವಲಯ ಅರಣ್ಯಾಧಿಕಾರಿ ಶೈಲಾ ದೂರು

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 11:00 IST
Last Updated 10 ಜೂನ್ 2018, 11:00 IST

ಕುಣಿಗಲ್: ಗ್ರಾಮಸ್ಥರ ಅವಿವೇಕದ ವರ್ತನೆಯಿಂದಾಗಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕೆರೆ ಅಂಗಳದಲ್ಲಿ ನೆಟ್ಟ 650 ವಿವಿಧ ಜಾತಿಯ ಗಿಡಗಳು ನಾಶವಾಗಿವೆ.

ತಾಲ್ಲೂಕಿನ ಎಡೆಯೂರು ಹೋಬಳಿಯ ದೊಡ್ಡಮದುರೈ ಗ್ರಾಮದ ಕೆರೆ ಅಂಗಳದಲ್ಲಿ ಕಳೆದವಾರ ಮಹಾಘನಿ, ಆಲ, ಹೆಬ್ಬೇವು
ಸೇರಿದಂತೆ ವಿವಿಧ ಜಾತಿಯ 850 ಗಿಡಗಳನ್ನು ನೆಡಲಾಗಿತ್ತು. ಸಸಿಗಳನ್ನು ನೆಡುವ ಸಮಯದಲ್ಲಿ ಬಂದ ಕೆಲ ಗ್ರಾಮಸ್ಥರು, ಸಸಿಗಳನ್ನು ನೆಡದಂತೆ ಆಗ್ರಹಿಸಿದ್ದರು, ನೆಟ್ಟರೆ ಕಿತ್ತುಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ವಲಯ ಅರಣ್ಯಾಧಿಕಾರಿ ಶೈಲಾ ತಿಳಿಸಿದ್ದಾರೆ.

ಆದರೂ, ಇಲಾಖೆ ಸಿಬ್ಬಂದಿ ಸಸಿಗಳನ್ನು ನೆಟ್ಟಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರಾದ ಮೋಹನ್, ಚನ್ನೇಗೌಡ, ಹುಚ್ಚಯ್ಯ, ಜಗ್ಗ, ರಾಜಣ್ಣ ಅವರು ನೆಟ್ಟಿದ ಗಿಡಗಳನ್ನು ಬುಡಸಮೇತ ಕಿತ್ತು ನಾಶಪಡಿಸಿದ್ದಾರೆ. ಈ ಕುರಿತು ಅಮೃತೂರು ಪೊಲೀಸ್‌ ಠಾಣೆಯಲ್ಲಿ ವಲಯ ಅರಣ್ಯಾಧಿಕಾರಿ ಶೈಲಾ ದೂರು ದಾಖಲಿಸಿದ್ದಾರೆ.  ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತದೆ

ಕೆರೆ ಅಂಗಳದಲ್ಲಿ ಸಸಿಗಳನ್ನು ನೆಟ್ಟರೆ ಅರಣ್ಯವಾಗಿ ಬೆಳೆದು ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತದೆ. ಗಿಡಗಳ ಎಲೆಗಳು ಉದುರಿ ಕೆರೆ ನೀರು ಕುಲುಷಿತಗೊಳ್ಳುತ್ತದೆ. ಕೆರೆ ಅಂಗಳದ ವಿಸ್ತೀರ್ಣ ಕಡಿಮೆಯಾಗುತ್ತದೆ. ಆದಕಾರಣ ಗಿಡಗಳನ್ನು ಬೆಳೆಸಲು ಬಿಡುವುದಿಲ್ಲ’ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.