ADVERTISEMENT

70 ಕೋಟಿ ಆಸ್ತಿ: 4 ಕೆ.ಜಿ ಚಿನ್ನ, 35 ಕೆ.ಜಿ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 6:13 IST
Last Updated 20 ಮಾರ್ಚ್ 2014, 6:13 IST

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎ.ಕೃಷ್ಣಪ್ಪ ಮತ್ತು ಪತ್ನಿ ಮಂಜುಳಾ ಸ್ಥಿರ ಮತ್ತು ಚರ ಆಸ್ತಿ ಸೇರಿ ಒಟ್ಟು ₨ 70 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಕೃಷ್ಣಪ್ಪ ದಂಪತಿ ಬಳಿ 4 ಕೆ.ಜಿ.ಗೂ ಹೆಚ್ಚು ಚಿನ್ನ ಮತ್ತು 35 ಕೆ.ಜಿ. ಬೆಳ್ಳಿ ಇದೆ.

ಕೃಷ್ಣಪ್ಪ ಸ್ಥಿರ ಆಸ್ತಿಯ ಮಾರುಕಟ್ಟೆ ಒಟ್ಟು ಮೌಲ್ಯ ₨ 29.55 ಕೋಟಿ, ಪತ್ನಿ ಮಂಜುಳಾ ಸ್ಥಿರ ಆಸ್ತಿಯ ಮಾರುಕಟ್ಟೆ ಮೌಲ್ಯ ₨ 17.02 ಕೋಟಿ. ಕೃಷ್ಣಪ್ಪ ₨ 14.79 ಕೋಟಿ, ಪತ್ನಿ ₨ 8.81 ಕೋಟಿ ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ.

ಇದರಲ್ಲಿ ಕೃಷ್ಣಪ್ಪ ಸ್ವಯಾರ್ಜಿತ ಆಸ್ತಿ ₨ 24.85 ಕೋಟಿ ಮತ್ತು ಪಿತ್ರಾರ್ಜಿತ ₨ 4.7 ಕೋಟಿ ಮೌಲ್ಯ ಹೊಂದಿದೆ. ಪತ್ನಿಯ ಸ್ವಯಾರ್ಜಿತ ಆಸ್ತಿ ₨ 16.30 ಕೋಟಿ ಮತ್ತು ಪಿತ್ರಾರ್ಜಿತ 72 ಲಕ್ಷ ಆಸ್ತಿ ಹೊಂದಿದ್ದಾರೆ.

ಪತ್ನಿ ಮಂಜುಳಾ ಅವರು ಕೃಷ್ಣಪ್ಪ ಅವರಿಗಿಂತ ಹೆಚ್ಚು ಚಿನ್ನಾಭರಣ ಹೊಂದಿದ್ದಾರೆ. ಕೃಷ್ಣಪ್ಪ ಬಳಿ 1100 ಗ್ರಾಂ ಚಿನ್ನಾಭರಣ (₨ 30 ಲಕ್ಷ), 15 ಕೆ.ಜಿ. ಬೆಳ್ಳಿ  (₨7 ಲಕ್ಷ) ಇದ್ದರೆ, ಪತ್ನಿ ಮಂಜುಳಾ ಬಳಿ 3120 ಗ್ರಾಂ ಚಿನ್ನಾಭರಣ ಮತ್ತು 20 ಕೆ.ಜಿ ಬೆಳ್ಳಿ (₨ 9 ಲಕ್ಷ) ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ಕೃಷ್ಣಪ್ಪ ಅವರಿಗೆ ವಾರ್ಷಿಕ ₨ 30 ಲಕ್ಷ ಬಾಡಿಗೆ ಆದಾಯವಿದೆ. ವಿವಿಧ ಕಂಪೆನಿಗಳಲ್ಲಿ ₨ 13.97 ಲಕ್ಷ ಹೂಡಿಕೆ  ಮಾಡಿದ್ದಾರೆ. ಮಂಜುಳಾ ಅವರಿಗೆ ₨ 12 ಲಕ್ಷ ಬಾಡಿಗೆ ಬರುತ್ತದೆ. ₨ 12.9 ಲಕ್ಷ ಹೂಡಿಕೆ ಮಾಡಿದ್ದಾರೆ. ಕೃಷ್ಣಪ್ಪ ಬಳಿ ₨ 15.29 ಲಕ್ಷ ಮತ್ತು ಮಂಜುಳಾ ಅವರಲ್ಲಿ ₨ 43.02 ಲಕ್ಷ ನಗದು ಹಣವಿದೆ.

ಕೃಷ್ಣಪ್ಪ ಹಾಗೂ ಪತ್ನಿ ಹೆಸರಿನಲ್ಲಿ ₨ 9.93 ಕೋಟಿ ಮತ್ತು ₨ 7.57 ಕೋಟಿ ಬ್ಯಾಂಕ್‌ ಸಾಲವಿದೆ. ಅಲ್ಲದೆ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿ ಕೃಷ್ಣಪ್ಪ ₨ 58 ಲಕ್ಷ, ಪತ್ನಿ ₨ 12.39 ಲಕ್ಷ ಹೊಂದಿದ್ದಾರೆ. ಕೃಷ್ಣಪ್ಪ ₨ 3 ಲಕ್ಷವನ್ನು  ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಕೃಷ್ಣಪ್ಪ ವಿವಿಧ ವ್ಯಕ್ತಿಗಳಿಗೆ ₨ 12.81 ಕೋಟಿ ಮತ್ತು ಪತ್ನಿ 7.2 ಕೋಟಿ ವೈಯಕ್ತಿಕ ಸಾಲ ನೀಡಿದ್ದಾರೆ.

ಕೃಷ್ಣಪ್ಪ ಬಳಿ ಮಹೇಂದ್ರ ಜೀಪ್‌, ಫಾರ್ಚುನರ್‌ ಕಾರು, ಟ್ರ್ಯಾಕ್ಟರ್‌ ಇದ್ದು, ಇವುಗಳ ಒಟ್ಟು ಬೆಲೆ ₨ 33 ಲಕ್ಷ. ಇದರಲ್ಲಿ ಕಾರಿನ ಮೇಲೆ ಸಾಲ ತೋರಿಸಿದ್ದಾರೆ. ಪತ್ನಿ ಹೆಸರಿನಲ್ಲಿ ವಾಹನವಿಲ್ಲ.

ಕೃಷ್ಣಪ್ಪ ಹೆಸರಿನಲ್ಲಿ ಬೆಂಗಳೂರು ದೇವಸಂದ್ರದಲ್ಲಿ ₨ 4.5 ಕೋಟಿ ಮೌಲ್ಯದ 1.10 ಎಕರೆ ಕೃಷಿ ಭೂಮಿ ಇದೆ. ಹೊಸಕೋಟೆ ತಾಲ್ಲೂಕು ಏಕರಾಜಪುರ, ಕೆ.ಆರ್‌.ಪುರಂನ ದೇವಸಂದ್ರ, ಕಲ್ಕೆರೆ ಗ್ರಾಮದಲ್ಲಿ 22.33 ಎಕರೆ, 54 ಸಾವಿರ ಚದರ ಅಡಿಯ ಕೃಷಿಯೇತರ ಭೂಮಿ ಇದ್ದು, ಒಟ್ಟು ಮೌಲ್ಯ ₨ 16.5 ಕೋಟಿ. ಬೆಂಗಳೂರಿನ ಕೆ.ಆರ್‌.ಪುರಂ, ದೇವಸಂದ್ರ, ಬಸವನಪುರ, ಹೆಣ್ಣೂರು ಬಾಣಸವಾಡಿಯಲ್ಲಿ ₨ 8.53 ಕೋಟಿ ಮೌಲ್ಯದ 7 ವಸತಿ ಗೃಹಗಳಿವೆ.

ದೇವಸಂದ್ರದಲ್ಲಿ ₨ 72 ಲಕ್ಷ ಮೌಲ್ಯದ ವಾಣಿಜ್ಯ ಮಳಿಗೆ ಇದೆ. ಪತ್ನಿ ಮಂಜುಳಾ ಹೆಸರಲ್ಲಿ ಕಂಬ್ಳೀಪುರ, ಬಸವನಪುರದಲ್ಲಿ ₨ 16.30 ಕೋಟಿ ಮೌಲ್ಯದ 28.30 ಎಕರೆ ಜಮೀನು ಮತ್ತು 14960 ಚದರಡಿ ವಿಸ್ತೀರ್ಣದ ಭೂಮಿ ಇದೆ ಎಂದು ಅವರು ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.