ADVERTISEMENT

75 ಹಾಸಿಗೆಗೆ ಆಮ್ಲಜನಕ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 3:28 IST
Last Updated 11 ಜುಲೈ 2021, 3:28 IST
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಿದ್ದು, ಲೋಕಾರ್ಪಣೆ ಕಾರ್ಯಕ್ರಮವನ್ನು ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಸಂಸದ ಜಿ.ಎಸ್.ಬಸವರಾಜು ಇದ್ದಾರೆ
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಿದ್ದು, ಲೋಕಾರ್ಪಣೆ ಕಾರ್ಯಕ್ರಮವನ್ನು ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಸಂಸದ ಜಿ.ಎಸ್.ಬಸವರಾಜು ಇದ್ದಾರೆ   

ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ 75 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದ್ದು, ಶನಿವಾರ ರೋಗಿಗಳ ಬಳಕೆಗೆ ಸಮರ್ಪಿಸಲಾಯಿತು.

ಐಕ್ಯಾಟ್ ಪೌಂಡೇಶನ್‍ ಸಂಸ್ಥೆಯು ಈ ಸೌಲಭ್ಯ ಕಲ್ಪಿಸಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸಿದರು. ಕೋವಿಡ್ ನಿರ್ವಹಣೆಯಲ್ಲಿ ದಾನಿಗಳ ನೆರವು, ಸೇವೆ, ಕೊಡುಗೆ ಶ್ರೇಷ್ಠವಾದದ್ದು ಎಂದು ಸ್ಮರಿಸಿದರು.

ಹಲವು ಸಂಕಷ್ಟದ ನಡುವೆಯೂ ವೈದ್ಯರನ್ನು ಒಳಗೊಂಡಂತೆ ಎಲ್ಲರ ಸಹಕಾರದಿಂದ ಕೋವಿಡ್ ಎರಡನೇ ಅಲೆ ಗೆದ್ದಿದ್ದೇವೆ. ಇದರಲ್ಲಿ ದಾನಿಗಳ ನೆರವಿನ ಫಲವೂ ಇದೆ. ಕೋವಿಡ್ ಎರಡನೇ ಅಲೆ ಅಪ್ಪಳಿಸಿದಾಗ ಆಮ್ಲಜನಕದ ಕೊರತೆ ಎದುರಾದ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಆಮ್ಲಜನಕ ಸೇರಿದಂತೆ ಇತರೆ ನೆರವು ನೀಡಿ ಸಹಕಾರಿಯಾಗಿವೆ ಎಂದರು.

ADVERTISEMENT

ಸೋಂಕಿತರ ಆರೈಕೆಯಲ್ಲಿ ವೈದ್ಯರಂತೆ ಶುಶ್ರೂಷಕಿಯರ ಕಾರ್ಯವೂ ಅತ್ಯುತ್ತಮ. ಕಾಣದ ಕೋವಿಡ್ ಮಹಾಮಾರಿ ವಿರುದ್ಧ ಯಾವುದೇ ಸಿದ್ಧತೆಗಳಿಲ್ಲದೆ ವೈದ್ಯಕೀಯ ಸಿಬ್ಬಂದಿ ಯುದ್ಧ ಮಾಡಿದ್ದಾರೆ. ಆರೋಗ್ಯವಂತ ಸಮಾಜಕ್ಕೆ ಅವರ ಸೇವೆ ಸರ್ವಶ್ರೇಷ್ಠವಾಗಿದೆ ಎಂದು ಸ್ಮಾಮೀಜಿ ಹೇಳಿದರು.

ಸಂಸದ ಜಿ.ಎಸ್.ಬಸವರಾಜು, ‘ಕೋವಿಡ್ ನಿರ್ವಹಣೆಗೆ ನೆರವಾಗುವ ಮೂಲಕ ದಾನಿಗಳು ವಾರಿಯರ್ಸ್‌ಗಳಂತೆ ಸೇವೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯ 75 ಹಾಸಿಗೆಗಳಿಗೆ ಆಮ್ಲಜನಕ ಪೈಪ್‌ಲೈನ್ ಕಲ್ಪಿಸುವ ಮೂಲಕ ಐಕ್ಯಾಟ್ ಶ್ಲಾಘನೀಯ ಕೆಲಸ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್‍ಜಿಒಗಳಲ್ಲಿ ಸೇವಾ ಮನೋಭಾವ ಮೂಡಿರುವುದು ಉತ್ತಮ ಬೆಳವಣಿಗೆ. ಆಮ್ಲಜನಕ ಸಾಂದ್ರಕ ಸೇರಿದಂತೆ ಆಮ್ಲಜನಕ ಘಟಕ ಸ್ಥಾಪನೆಗೂ ನೆರವು ನೀಡಿದ್ದಾರೆ. ಜೀವ ಉಳಿಸುವ ದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.

ಐಕ್ಯಾಟ್ ಪೌಂಡೇಶನ್‍ ನಿರ್ದೇಶಕಿ ಡಾ.ಶಾಲಿನಿ ನಲ್ವಾಡ್, ‘ಕೋವಿಡ್ ಸಮಯದಲ್ಲಿ ಪ್ರತಿಯೊಬ್ಬ ವೈದ್ಯರೂ ದೈಹಿಕ ರೋಗದ ಜತೆಗೆ ಮಾನಸಿಕ ಕಾಯಿಲೆ ಗುಣ ಮಾಡುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಸೇನಾನಿಗಳಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಕಾಣದ ವೈರಸ್ ಶತ್ರು ವಿರುದ್ಧ ತಾನು, ತನ್ನದು, ತನ್ನ ಕುಟುಂಬವನ್ನೆಲ್ಲಾ ತೊರೆದು ಪ್ರಾಣದ ಹಂಗಿಲ್ಲದೆ ಜನರ ಜೀವಕ್ಕಾಗಿ ಹೋರಾಡಿದ್ದಾರೆ’ ಎಂದು
ಸ್ಮರಿಸಿದರು.

ಜಿಲ್ಲಾ ಸರ್ಜನ್ ಡಾ.ಸುರೇಶ್ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಸ್ಥಾನಿಕ ವೈದ್ಯಾಧಿಕಾರಿ ಡಾ.ವೀಣಾ, ಕ್ಲೌಡ್ ನೈನ್ ಕ್ಲಿನಿಕಲ್ ಮುಖ್ಯಸ್ಥ ಡಾ.ನಾಗನಿಶ್ಚಲ್, ಅರ್ಜುನ್ ನಾಗಾರ್ಜುನ್, ಪ್ರತಾಪ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.