ADVERTISEMENT

ಶಿರಾದಲ್ಲಿ 904 ನಿವೇಶನ: ಶಾಸಕ ಟಿ.ಬಿ.ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 3:20 IST
Last Updated 19 ಅಕ್ಟೋಬರ್ 2025, 3:20 IST
   

ಶಿರಾ: ವಸತಿಹೀನರಿಗೆ ನಿವೇಶನ ಹಂಚಿಕೆ ಮಾಡಲು ಕೆಲವರು ಅಡ್ಡಿಪಡಿಸುತ್ತಿದ್ದು, ಎಲ್ಲ ಅಡ್ಡಿ ಆತಂಕಗಳನ್ನು ದಾಟಿ ನಗರ ಪ್ರದೇಶದ 904 ಮಂದಿಗೆ ನಿವೇಶನ ಹಂಚಿಕೆ ಮಾಡಲು ಆಶ್ರಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 10 ಸಾವಿರ ನಿವೇಶನ ವಿತರಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು ಶೀಘ್ರ ಮುಖ್ಯಮಂತ್ರಿ ಅವರನ್ನು ಕರೆಸಿ ಸಾರ್ಥಕ ಸಮಾವೇಶ ನಡೆಸುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಹಂಚಿಕೆಗಾಗಿ 460 ಎಕರೆ ಜಮೀನು ಗುರ್ತಿಸಲಾಗಿದೆ. ಈಗಾಗಲೇ 4 ಸಾವಿರ ನಿವೇಶನ ಹಂಚಿಕೆಗೆ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ಗುರ್ತಿಸಲಾಗಿದ್ದು, ಈಗ 2,800 ನಿವೇಶನಗಳು ಹಂಚಿಕೆಗೆ ಸಿದ್ಧವಾಗಿದೆ ಎಂದರು.

ADVERTISEMENT

ನಗರ ಪ್ರದೇಶದಲ್ಲಿ 4,500 ನಿವೇಶನ ನೀಡುವ ಗುರಿ ಇದೆ. ಮೊದಲ ಹಂತವಾಗಿ 904 ನಿವೇಶನ ವಿತರಿಸುತ್ತಿದ್ದು ಇದರಲ್ಲಿ ನಗರಸಭೆಯ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ನಿವೃತ್ತ ಸೈನಿಕರು ಸೇರಿದ್ದಾರೆ. ಅದೇ ರೀತಿ ಸರ್ವೆ ನಂ 5 ಮತ್ತು 6ರಲ್ಲಿ 50 ವರ್ಷದಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು ಅವರಿಗೆ ಇ– ಖಾತೆ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದರು.

ನಗರದಲ್ಲಿ 1,008 ಗುಂಪು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು ಅದರಲ್ಲಿ 265 ಮನೆಗಳು ಸಿದ್ಧವಾಗಿವೆ. ಮನೆಗಳಿಗೆ ₹5.16 ಲಕ್ಷ ಮೌಲ್ಯವಿದ್ದು ಫಲಾನುಭವಿಗಳು ₹1 ಲಕ್ಷ ಪಾವತಿಸಿದರೆ ಮನೆ ನೀಡಲಾಗುವುದು. ಈಗಾಗಲೇ 432 ಮಂದಿ ₹10 ಸಾವಿರ ಪಾವತಿ ಮಾಡಿದ್ದು ಅವರಿಗೆ ಮನೆ ವಿತರಿಸಲು ತೀರ್ಮಾನಿಸಿದ್ದು ₹1 ಲಕ್ಷ ಪಾವತಿ ಮಾಡುವರಿಗೆ ಅದ್ಯತೆಯ ಮೇಲೆ ಮನೆ ನೀಡಲಾಗುವುದು ಎಂದರು.

ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಆರ್.ಹರೀಶ್, ನಗರಸಭೆ ಅಧ್ಯಕ್ಷ ಜೀಷಾಬ್ ಮೆಹಮೂದ್, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಕೋಟೆ ಲೋಕೇಶ್, ರಾಧಾಕೃಷ್ಣ, ನೂರುದ್ದೀನ್, ಅಂಜನ್ ಕುಮಾರ್, ಮಂಜುಳಾಬಾಯಿ, ಪಿ.ಬಿ.ನರಸಿಂಹಯ್ಯ, ಎನ್ಎಸ್ ಯುಐ ಅಧ್ಯಕ್ಷ ರಂಗನಾಥ್ ಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.