ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನವನ್ನು ವಿದ್ಯಾರ್ಥಿಗಳ ಆಟೋಟಕ್ಕಿಂತ ಕಾರ್ಯಕ್ರಮ ಆಯೋಜನೆಗೆ ಹೆಚ್ಚು ಬಳಸಿದ್ದರ ಪರಿಣಾಮ ಮೈದಾನದಲ್ಲಿ ಕಬ್ಬಿಣದ ಮೊಳೆಗಳು ಗಿಡದ ಬೇರಿನಂತೆ ಹರಡಿಕೊಂಡಿವೆ. ಕಾಲಿಟ್ಟ ಕಡೆಯಲ್ಲಿ ಮೊಳೆಗಳು ಕಾಲಿಗೆ ಚುಚ್ಚಿಕೊಳ್ಳುತ್ತಿವೆ.
ಸರ್ಕಾರಿ, ಖಾಸಗಿ ಕಾರ್ಯಕ್ರಮ ಸೇರಿ ಮೈದಾನದಲ್ಲಿ ಸದಾ ಒಂದಲ್ಲೊಂದು ಚಟುವಟಿಕೆ ನಡೆಯುತ್ತಿರುತ್ತದೆ. ಆಯೋಜಕರು ಕೆಲಸ ಮುಗಿದ ನಂತರ ತಮ್ಮ ಪಾಡಿಗೆ ತಾವು ಜಾಗ ಖಾಲಿ ಮಾಡುತ್ತಿದ್ದಾರೆ. ಆದರೆ, ಮೈದಾನ ನಿರ್ವಹಣೆಗೆ ಯಾರೂ ಆಸಕ್ತಿ ತೋರುತ್ತಿಲ್ಲ.
ಮೈದಾನದಲ್ಲಿ ದಸರಾ ಪ್ರಯುಕ್ತ ಸುಮಾರು 11 ದಿನಗಳ ಕಾಲ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕಾಗಿ ಬೃಹತ್ ಪೆಂಡಾಲ್ ಅಳವಡಿಸಲಾಗಿತ್ತು. ಈ ಸಮಯದಲ್ಲಿ ನೆಲಕ್ಕೆ ಹೊಡೆದಿದ್ದ ಮೊಳೆಗಳನ್ನು ಈವರೆಗೆ ಹೊರ ತೆಗೆದಿಲ್ಲ. ಇದರ ನಂತರ ನಾನಾ ಕಾರ್ಯಕ್ರಮಗಳು ಮೈದಾನದಲ್ಲಿ ನಡೆದವು. ಅವರು ಸಹ ಇದನ್ನು ಮುಂದುವರಿಸಿದ್ದು, ಮೊಳೆ ಮತ್ತಷ್ಟು ಜಾಸ್ತಿಯಾದವು. ಇದರ ಪರಿಣಾಮ ಈಗ ವಿದ್ಯಾರ್ಥಿಗಳು, ಕ್ರೀಡಾಪಟುಗಳ ಮೇಲೆ ಬೀಳುತ್ತಿದೆ. ಅಪಾಯದಲ್ಲಿ ಆಟವಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘ತುಮಕೂರು ದಸರಾ’ ಅಂಗವಾಗಿ ಧಾರ್ಮಿಕ ಮಂಟಪ, ಮುಖ್ಯ ವೇದಿಕೆ ನಿರ್ಮಿಸಿದ್ದ ಜಾಗದಲ್ಲಿ ಮೊಳೆಗಳ ರಾಶಿಯೇ ಇದೆ. ಇನ್ನೂ ಹಲವು ನೆಲದಲ್ಲಿಯೇ ಮರೆಯಾಗಿವೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನೀರಿನ ಹರಿವಿಗೆ ಕೆಲ ಮೊಳೆಗಳು ಕಿತ್ತು ಬಂದಿವೆ. ಕ್ರೀಡಾಪಟುಗಳು, ಮೈದಾನದಲ್ಲಿ ವಾಕಿಂಗ್ ಮಾಡುವವರು ಇದನ್ನು ಗಮನಿಸದೆ ಮುಂದೆ ನಡೆದರೆ ಅಪಾಯ ಕಟ್ಟಿಟ್ಟ ಬುತ್ತಿ.
ಪೋಷಕರು ತಮ್ಮ ಮಕ್ಕಳನ್ನು ಮೈದಾನಕ್ಕೆ ಕರೆ ತಂದು ಕ್ರಿಕೆಟ್, ಓಟದ ಅಭ್ಯಾಸ ನಡೆಸುತ್ತಾರೆ. ಕೆಲವರು ಬರಿಗಾಲಿನಲ್ಲಿ ಅಭ್ಯಾಸ ಮಾಡುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಮೊಳೆಗಳು ಮಳೆಗೆ ಒದ್ದೆಯಾಗಿ ತುಕ್ಕು ಹಿಡಿದಿವೆ. ಇವು ಕಾಲಿಗೆ ಚುಚ್ಚಿದರೆ ಸೀದಾ ಆಸ್ಪತ್ರೆ, ಶಸ್ತ್ರಚಿಕಿತ್ಸೆ ಹೀಗೆ ಹಲವು ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳು ತಮ್ಮ ಬದುಕಿನ ಬಗ್ಗೆ ಕಂಡ ಕನಸುಗಳು ಬಾಲ್ಯದಲ್ಲಿಯೇ ಕಮರಿ ಹೋಗುತ್ತವೆ.
ಮೈದಾನದಲ್ಲಿ ಕ್ರೀಡಾಕೂಟಕ್ಕಿಂತ ಖಾಸಗಿ ಕಾರ್ಯಕ್ರಮಗಳು ಹೆಚ್ಚಾಗಿ ಜರುಗುತ್ತಿವೆ. ಮೈದಾನದ ಉಸ್ತುವಾರಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಕೂಡ ರಚಿಸಲಾಗಿದೆ. ಇದರ ಬಳಕೆಗೆ ಜಿಲ್ಲಾಧಿಕಾರಿ ಅನುಮತಿ ನೀಡಬೇಕು. ಖಾಸಗಿ ಕಾರ್ಯಕ್ರಮಗಳಿಗೆ ನಿಯಂತ್ರಣ ಹೇರಿ ಕೇವಲ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಸುವ ಬಗ್ಗೆ ಯಾರೊಬ್ಬರೂ ಚಿಂತಿಸಿಲ್ಲ.
ಮಿನಿ ಕ್ರೀಡಾಂಗಣದಲ್ಲಿ ಚರಂಡಿಯ ಚಪ್ಪಡಿ ಕುಸಿದಿದ್ದು, ವಿಲೇವಾರಿಗೆ ಕ್ರಮಕೈಗೊಂಡಿಲ್ಲ. ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಲ್ಲ. ಕೊಕ್ಕೊ, ಕಬಡ್ಡಿ, ವಾಲಿಬಾಲ್ ಅಂಕಣದಲ್ಲಿ ನೀರು ನಿಲ್ಲುತ್ತಿದೆ. ಮಳೆ ಬಂದಾಗ ಪ್ರತಿ ಸಾರಿ ಅಭ್ಯಾಸಕ್ಕೆ ಅಡ್ಡಿಯಾಗುತ್ತಿದೆ. ಇದು ಅಧಿಕಾರಿಗಳ ಗಮನದಲ್ಲಿ ಇದ್ದರೂ ಸರಿಪಡಿಸುವತ್ತ ಗಮನ ಹರಿಸುತ್ತಿಲ್ಲ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಡೆದ ಗೋಡೆ ಮುಚ್ಚಿಲ್ಲ
ದಸರಾ ಸಮಯದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಬಿ.ಎಚ್.ರಸ್ತೆಗೆ ಹೊಂದಿಕೊಂಡಿರುವ ಮೈದಾನದ ಕಾಂಪೌಂಡ್ ಒಡೆಯಲಾಗಿದೆ. ಆದರೆ ಅದನ್ನು ಈವರೆಗೂ ಮುಚ್ಚಿಲ್ಲ. ಇದರಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಸಿಕ್ಕಂತಾಗಿದ್ದು ಮೈದಾನ ಕುಡುಕರ ಅಡ್ಡೆಯಾಗಿ ಬದಲಾಗಿದೆ. ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಕಾಣಿಸುತ್ತವೆ. ರಾತ್ರಿ ಸಮಯದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇದನ್ನು ನಿಯಂತ್ರಿಸುವ ಪ್ರಯತ್ನವೂ ನಡೆದಿಲ್ಲ. ‘ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು. ಕ್ರೀಡಾಂಗಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕ್ರೀಡೆಗೆ ಆದ್ಯತೆ ನೀಡಲಾಗುವುದು ಎಂದು ಬರೀ ಭಾಷಣದಲ್ಲಿ ಹೇಳಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು. ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಕಾರ್ಯ ಪ್ರವೃತ್ತರಾಗಬೇಕು’ ಎಂದು ಕ್ರೀಡಾಪಟು ಆನಂದ್ ಕುಮಾರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.