ADVERTISEMENT

ಜನರಲ್ಲಿ ಕಾಣದ ಹಬ್ಬದ ಸಂಭ್ರಮ

ನಗರದ ಅಲ್ಲಲ್ಲಿ ಹೂ, ಬಾಳೆಗಿಡ, ಮಾವಿನಸೊಪ್ಪು ಮಾರಾಟ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 8:52 IST
Last Updated 21 ಆಗಸ್ಟ್ 2020, 8:52 IST
ಮಾರುಕಟ್ಟೆಯಲ್ಲಿ ಬಾಳೆ ಕಂದು ಮಾರಾಟ
ಮಾರುಕಟ್ಟೆಯಲ್ಲಿ ಬಾಳೆ ಕಂದು ಮಾರಾಟ   

ತುಮಕೂರು: ಗೌರಿ, ಗಣೇಶ ಹಬ್ಬದ ಕಾರಣ ಮಾರುಕಟ್ಟೆಯಲ್ಲಿ ಹೂವಿನ ದರ ಹೆಚ್ಚಾಗಿದೆ. ಗುಲಾಬಿ ಹೂ ಕೆ.ಜಿ.ಗೆ ₹160ರಿಂದ ₹200ರ ವರೆಗೂ ಮಾರಾಟವಾಗುತ್ತಿತ್ತು. ಕಾಕಡ ಕೆ.ಜಿ ₹600ರಿಂದ ₹700, ಬಿಳಿ ಸೇವಂತಿಗೆ ಒಂದು ಮಾರು ₹150, ಬಟನ್ಸ್‌ ಕೆ.ಜಿಗೆ ₹150ಕ್ಕೆ ಏರಿಕೆಯಾಗಿತ್ತು.

ನಗರದ ಅಂತರಸನಹಳ್ಳಿ, ಎಸ್‌.ಎಸ್‌.ಪುರಂ, ಶೆಟ್ಟಿಹಳ್ಳಿ ಗೇಟ್, ಎಂ.ಜಿ.ರಸ್ತೆ, ಮಂಡಿಪೇಟೆ, ಗುಮ್ಚಿ ಸರ್ಕಲ್‌, ಚಿಕ್ಕಪೇಟೆ, ನಗರದ ಹಳೆ ಮಾರುಕಟ್ಟೆ ಸೇರಿದಂತೆ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಹೂ, ಹಣ್ಣು, ತರಕಾರಿ, ವಸ್ತುಗಳನ್ನು ಮಹಿಳೆಯರು, ಹಿರಿಯರು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಗಣೇಶ ಚತುರ್ಥಿಯು ಮನೆಗಳಿಗಿಂತ ಸಾರ್ವಜನಿಕವಾಗಿ ವಿಜೃಂಭಣೆಯಿಂದ ನಡೆಯುತ್ತದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ನಿತ್ಯ ಪೂಜಾ ಕೈಂಕರ್ಯಗಳು ಹಾಗೂ ವಿಸರ್ಜನೆ ಸಂದರ್ಭಗಳಲ್ಲೂ ದೇವರಿಗೆ ಅಲಂಕಾರ ಮಾಡಲು ಹೂವು ಹೆಚ್ಚಾಗಿ ಬಳಕೆಯಾಗುತ್ತಿದ್ದವು. ಈಗ
ಮನೆಗಳಲ್ಲಿ ಮಾತ್ರ ಹಬ್ಬ ನಡೆಯುವುದರಿಂದ ವ್ಯಾಪಾರ ಕಳೆದ ವರ್ಷದಷ್ಟು ಇಲ್ಲ ಎಂದು ಮಾರುಕಟ್ಟೆಯ ಮಂಜುನಾಥಸ್ವಾಮಿ ಫ್ಲವರ್‌ ಸ್ಟಾಲ್‌ನ ಬಸವರಾಜು ಮಾಹಿತಿ ನೀಡಿದರು.

ADVERTISEMENT

ಹಣ್ಣಿನ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಹಾಪ್‌ಕಾಮ್ಸ್‌ನಲ್ಲಿ ಏಲಕ್ಕಿ ಬಾಳೆ ಕೆ.ಜಿ.ಗೆ ₹70ರಂತೆ ಮಾರಾಟವಾಗುತ್ತಿತ್ತು. ಮಾರುಕಟ್ಟೆ, ನಗರದ ಪ್ರಮುಖ ರಸ್ತೆಗಳಲ್ಲಿ ಬಾಳೆ ಹಣ್ಣಿಗೆ ₹70ರಿಂದ ₹80ರ ವರೆಗೂ ಇತ್ತು.

ಧಾನ್ಯಗಳ ಬೆಲೆ ಸ್ಥಿರ: ನಗರದ ಮಂಡಿಪೇಟೆಯಲ್ಲಿ ದವಸ ಧಾನ್ಯಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಕಳೆದ ವಾರದಂತೆ ಈ ವಾರವೂ ಬೆಲೆ ಇದೆ. ಹಬ್ಬಗಳ ಪ್ರಯುಕ್ತ ವ್ಯಾಪಾರ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.