ADVERTISEMENT

ಭೂಗಳ್ಳರಿಗೆ ಕಂದಾಯ ಇಲಾಖೆ ಕುಮ್ಮಕ್ಕು

ರಾಜ್ಯಪಾಲರಿಗೆ ದೂರು ನೀಡಿದ ಶಂಬೋನಹಳ್ಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 5:09 IST
Last Updated 4 ಆಗಸ್ಟ್ 2020, 5:09 IST

ಕೋರ: ಶಂಬೋನಹಳ್ಳಿ ಗ್ರಾಮಕ್ಕೆ ಒಳಪಟ್ಟಿರುವ ಗೋಮಾಳದ ಜಮೀನ ನ್ನು ಪ್ರಭಾವಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರು ಕಂದಾಯ ಸಚಿವರು, ರಾಜ್ಯಪಾಲರು, ಜಿಲ್ಲಾಧಿಕಾರಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.

ಶಂಬೋನಹಳ್ಳಿ ಗ್ರಾಮದ ಸರ್ವೆ ನಂ. 39, 40, 41ರಲ್ಲಿ 37.18 ಎಕರೆ ಜಮೀನಿದೆ. ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಈ ಭೂಮಿಯನ್ನು ಗ್ರಾಮದಲ್ಲಿರುವ ಮೇಕೆ, ಕುರಿ, ದನಗಳು ಮೇಯಲು ಮೀಸಲಿಡಲಾಗಿತ್ತು. 1984- 85ರಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ಗೋಮಾಳದ ಜಮೀನಿಗೆ ನೀಲಗಿರಿ, ಅಕೇಶಿಯಾ ಮರ ನೆಟ್ಟು ನೆಡುತೋಪು ನಿರ್ಮಿಸಲಾಯಿತು.

2001-02ರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಈ ಭೂಮಿಯನ್ನು ವಶಕ್ಕೆ ಪಡೆದರು. ಬಳಿಕ ಗ್ರಾಮದ ಪ್ರಭಾವಿಗಳು ನೆಡುತೋಪಿಗೆ ಬೆಂಕಿ ಹಚ್ಚಿ ಕಡಿದು ಒತ್ತುವರಿ ಮಾಡಿಕೊಂಡರು. ಸಾಗುವಳಿ ಮಾಡದಿರುವ ಗೋಮಾಳದ ಜಮೀನಿಗೆ ಕಂದಾಯ ಅಧಿಕಾರಿಗಳು ಹಣ ಪಡೆದು ಅಕ್ರಮವಾಗಿ ಖಾತೆ, ಪಹಣಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ಶಂಬೋನಹಳ್ಳಿಯ ಜುಂಜಯ್ಯ ಹಾಗೂ ಗಂಗಮ್ಮ ಅವರಿಗೆ ಸರ್ವೆ ನಂ. 39ರ ಗೋಮಾಳದ ಜಮೀನಿನಲ್ಲಿ 4.12 ಎಕರೆಯನ್ನು 2019ರಲ್ಲಿ ಕಂದಾಯ ತನಿಖಾಧಿಕಾರಿ ಗೋಪಿನಾಥ್ ಹಾಗೂ ಗ್ರಾಮಲೆಕ್ಕಿಗ ರವಿಕುಮಾರ್ ಖಾತೆ ಮಾಡಿಕೊಟ್ಟಿದ್ದಾರೆ. ಖಾತೆ ಪಹಣಿಯಾದ ನಾಲ್ಕು ತಿಂಗಳ ನಂತರ ಗೋಮಾಳದಲ್ಲಿರುವ ನೆಡುತೋಪಿಗೆ ಬೆಂಕಿ ಇಟ್ಟಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಬಂದರೆ ಅವರನ್ನು ನಿಂದಿಸಿದ್ದಾರೆ. ಸಾಮಾಜಿಕ ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದು ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮ ಒತ್ತುವರಿ ತಡೆದು ನ್ಯಾಯ ದೊರಕಿಸುವಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದಯಾನಂದಬಾಬು ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.