ADVERTISEMENT

ಧ್ಯಾನ ಮಂದಿರದ ಮುಂದೆ ಕಸದ ರಾಶಿ

ಪಾರ್ಕ್‌ ಹತ್ತಿರವೇ ತ್ಯಾಜ್ಯ; ಗಬ್ಬು ನಾರುತ್ತಿದೆ ವಿಶ್ವವಿದ್ಯಾಲಯ ಆವರಣ

​ಪ್ರಜಾವಾಣಿ ವಾರ್ತೆ
Published 3 ಮೇ 2025, 15:40 IST
Last Updated 3 ಮೇ 2025, 15:40 IST
ತುಮಕೂರು ವಿ.ವಿ ಆವರಣದಲ್ಲಿರುವ ರಮಣ ಮಹರ್ಷಿ ಉದ್ಯಾನದ ಬಳಿ ಕಸದ ರಾಶಿ
ತುಮಕೂರು ವಿ.ವಿ ಆವರಣದಲ್ಲಿರುವ ರಮಣ ಮಹರ್ಷಿ ಉದ್ಯಾನದ ಬಳಿ ಕಸದ ರಾಶಿ   

ತುಮಕೂರು: ವಿಶ್ವವಿದ್ಯಾಲಯದ ಆವರಣದಲ್ಲಿರುವ ರಮಣ ಮಹರ್ಷಿ ಉದ್ಯಾನವನದ ಬಳಿ ಕಸ, ತ್ಯಾಜ್ಯ ಸುರಿಯುತ್ತಿದ್ದು, ಸ್ವಲ್ಪ ಹೊತ್ತು ಕೂತು ವಿಶ್ರಾಂತಿ ಪಡೆಯಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ.

ಪಾರ್ಕ್‌ನಲ್ಲಿ ರಮಣ ಮಹರ್ಷಿ ಧ್ಯಾನ ಮಂದಿರ ಇದೆ. ಇಲ್ಲಿ ಸದಾ ಒಂದಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಪಾರ್ಕ್‌ ಮುಂಭಾಗದ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್‌, ಆಹಾರದ ತ್ಯಾಜ್ಯ ಎಸೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಳೆಯಾಗುತ್ತಿದ್ದು, ಕಸ ಕೊಳೆತಿದೆ. ಇದು ಗಬ್ಬು ವಾಸನೆ ಬೀರುತ್ತಿದ್ದು, ಉಸಿರು ಬಿಗಿ ಹಿಡಿದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ.

ವಿಶ್ವವಿದ್ಯಾಲಯದಲ್ಲಿ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಪ್ರತಿ ಕಾರ್ಯಕ್ರಮದ ನಂತರ ಉಳಿದ ಆಹಾರವನ್ನು ತಂದು ಉದ್ಯಾನದ ಬಳಿ ಸುರಿಯುತ್ತಿದ್ದಾರೆ. ಇದರಿಂದಾಗಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಬೀದಿ ನಾಯಿಗಳು ವಿ.ವಿಯಲ್ಲಿ ಆಶ್ರಯ ಪಡೆದಿವೆ. ದಾರಿಯ ತುಂಬೆಲ್ಲ ಕಸ ಹರಡುತ್ತಿವೆ. ವಿದ್ಯಾರ್ಥಿಗಳು, ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಹೋಗುವವರಿಗೂ ಕಿರಿಕಿರಿಯಾಗುತ್ತಿದೆ.

ADVERTISEMENT

ಉದ್ಯಾನದಲ್ಲಿ ನಾನಾ ಬಗೆಯ ಮರಗಳಿವೆ. ವಿದ್ಯಾರ್ಥಿಗಳು ವಿಶ್ರಾಂತಿ ಪಡೆಯಲು, ಕೂತು ಅಭ್ಯಾಸ ಮಾಡಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಧ್ಯಾನ ಮಂದಿರದಲ್ಲಿಯೂ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇದಕ್ಕೆ ಪೂರಕವಾದ ವಾತಾವರಣ ಮಾತ್ರ ಮಾಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಖಾಲಿ ಜಾಗ ಸಿಕ್ಕಲೆಲ್ಲ ಕಸ ತುಂಬಿಸುತ್ತಿದ್ದಾರೆ.

ಇಲ್ಲಿಯೇ ಎಂ.ಎಸ್‌.ಸುಬ್ಬಲಕ್ಷ್ಮಿ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಹೊಸದಾಗಿ ಕಾಲೇಜು ಸೇರುವ ವಿದ್ಯಾರ್ಥಿಗಳು ಉದ್ಯಾನಕ್ಕೆ ಭೇಟಿ ನೀಡಿ ಧ್ಯಾನ ಮಂದಿರ, ಪುತ್ಥಳಿ ವೀಕ್ಷಿಸುವುದು ಸಾಮಾನ್ಯವಾಗಿದೆ. ಈಗಾಗಲೇ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಶುರುವಾಗಿದ್ದು, ಪ್ರವೇಶಕ್ಕೆ ಬರುವ ವಿದ್ಯಾರ್ಥಿಗಳು ವಿ.ವಿ ಆವರಣದಲ್ಲಿ ಒಂದು ಸುತ್ತು ಹಾಕುತ್ತಿದ್ದಾರೆ. ಪಾರ್ಕ್‌ನ ಅಧ್ವಾನ ಕಂಡು ಸ್ವಲ್ಪ ಹೊತ್ತು ಕೂಡ ಇರದೆ ಜಾಗ ಖಾಲಿ ಮಾಡುತ್ತಿದ್ದಾರೆ.

ಪಾರ್ಕ್‌ಗೆ ಹೊಂದಿಕೊಂಡಂತೆ ಟೆನ್ನಿಸ್‌ ಅಂಕಣ ಇದೆ. ಇದು ಸದ್ಯ ಮಿನಿ ಕ್ರಿಕೆಟ್‌ ಮೈದಾನವಾಗಿದೆ. ಟೆನ್ನಿಸ್‌ ಅಂಕಣದಲ್ಲಿ ಕ್ರಿಕೆಟ್‌ ಅಭ್ಯಾಸ ನಡೆಯುತ್ತಿದೆ. ಪ್ರತಿ ದಿನ ಸಂಜೆ ಹೆಚ್ಚಿನ ಸಂಖ್ಯೆ ಯುವಕರು, ಮಕ್ಕಳು ಕ್ರಿಕೆಟ್‌ ಅಭ್ಯಾಸ ಮಾಡುತ್ತಾರೆ. ತ್ಯಾಜ್ಯ ಹೊರ ಸೂಸುವ ಕೆಟ್ಟ ವಾಸನೆಯಿಂದ ಅಭ್ಯಾಸಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ.

‘ಕಸ ವಿಲೇವಾರಿಗೆ ವೈಜ್ಞಾನಿಕ ಕ್ರಮ ಅನುಸರಿಸಬೇಕು. ಅದನ್ನು ಬಿಟ್ಟು ತೆರೆದ ಪ್ರದೇಶದಲ್ಲಿ ಪ್ಲಾಸ್ಟಿಕ್‌, ತ್ಯಾಜ್ಯ ಗುಡ್ಡೆ ಹಾಕುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಂಭವ ಹೆಚ್ಚಿರುತ್ತದೆ. ಸ್ವಚ್ಛತೆ, ಆರೋಗ್ಯ, ಶಿಕ್ಷಣದ ಕುರಿತು ಪಾಠ ಹೇಳುವ ಜಾಗವೇ ಅನೈರ್ಮಲ್ಯ ತಾಣವಾಗಿದೆ. ಸಂಬಂಧಪಟ್ಟವರು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ವಿ.ವಿ ಆವರಣದಲ್ಲಿ ಕ್ರಿಕೆಟ್‌ ಅಭ್ಯಾಸದಲ್ಲಿ ನಿರತರಾಗಿದ್ದ ಮನೋಹರ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.