ADVERTISEMENT

ಡ್ರಗ್: ಕಠಿಣ ಕ್ರಮಕ್ಕೆ ಎಬಿವಿಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 15:26 IST
Last Updated 4 ಸೆಪ್ಟೆಂಬರ್ 2020, 15:26 IST
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ ಮಾತನಾಡಿದರು
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ ಮಾತನಾಡಿದರು   

ತುಮಕೂರು: ಚಿತ್ರರಂಗ ಹಾಗೂ ಡ್ರಗ್ ಜಾಲದ ನಡುವೆ ನಂಟು ಇರುವುದನ್ನು ಅಧಿಕಾರಿಗಳು ಭೇದಿಸುತ್ತಿದ್ದು ಈ ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ‍ಪರಿಷತ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

ಡ್ರಗ್ಜಾಲದಲ್ಲಿ ಪ್ರಭಾವಿ ಶ್ರೀಮಂತ ಕುಟುಂಬಗಳ ವ್ಯಕ್ತಿಗಳು, ಸಿನಿಮಾ ನಟ, ನಟಿಯರು, ರಾಜಕಾರಣಿಗಳ ಮಕ್ಕಳು ಇರುವ ಮಾಹಿತಿ ಇದೆ. ಸಮಾಜಕ್ಕೆ ಮಾದರಿ ಆಗಬೇಕಾದವರೆಲ್ಲ ಇಂತಹ ಚಟಗಳಿಗೆ ಅಂಟಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. ದೇಶದ ಯುವಶಕ್ತಿಯನ್ನು ರಕ್ಷಿಸಿಕೊಳ್ಳಲು ಡ್ರಗ್ ಜಾಲವನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತು ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲಸಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಹಲವು ಶಾಲಾ ಕಾಲೇಜುಗಳಲ್ಲಿ ಡ್ರಗ್ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ಕಾರ್ಯಕರ್ತರಾದ ಜಗದೀಶ್, ರಾಧಕೃಷ್ಣ, ಕುಮಾರಸ್ವಾಮಿ, ಪ್ರಶಾಂತ, ಹಿಮೇಶ್, ನರಸಿಂಹ, ಸಿದ್ದು, ಮಂಜು, ತರುಣ್, ಸುರೇಶ್, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.