ADVERTISEMENT

ದಲಿತರ ಕೈಗೆಟುಕದ ಸರ್ಕಾರದ ಯೋಜನೆ

ತುಮಕೂರು ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 15:32 IST
Last Updated 27 ಸೆಪ್ಟೆಂಬರ್ 2019, 15:32 IST
ಸಭೆಯಲ್ಲಿ ತಹಶೀಲ್ದಾರ್ ಯೋಗಾನಂದ್ ಮಾತನಾಡಿದರು. ದಲಿತ ಮುಖಂಡರು ಸಭೆಯಲ್ಲಿದ್ದರು
ಸಭೆಯಲ್ಲಿ ತಹಶೀಲ್ದಾರ್ ಯೋಗಾನಂದ್ ಮಾತನಾಡಿದರು. ದಲಿತ ಮುಖಂಡರು ಸಭೆಯಲ್ಲಿದ್ದರು   

ತುಮಕೂರು: ತುಮಕೂರು ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗ ಹಿತರಕ್ಷಣಾ ಸಮಿತಿ ಸಭೆಯಲ್ಲಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್ ಅವರನ್ನು ದಲಿತ ಸಂಘಟನೆಗಳ ಮುಖಂಡರು ಒತ್ತಾಯ ಮಾಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ತಹಶೀಲ್ದಾರ್ ಯೋಗಾನಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಮುಖಂಡರು ದೂರುಗಳ ಸುರಿಮಳೆಗೈದರು.

ಯಲ್ಲಾಪುರದ ನ್ಯಾಷನಲ್ ಶಾಲೆ ಮತ್ತು ಅಂತರಸನಹಳ್ಳಿಯ ಚೇತನ ಶಾಲೆಯಲ್ಲಿ ಮೂಲ ಸೌಕರ್ಯಗಳಿಲ್ಲದ ಬಗ್ಗೆ ಮೂರು ವರ್ಷಗಳಿಂದ ಹಿತರಕ್ಷಣಾ ಸಮಿತಿಯಲ್ಲಿ ಚರ್ಚಿಸಲಾಗುತ್ತಿದೆ. ಹಾಗೆಯೇ ಬಿಟ್ಟನಕುರಿಕೆ ದಲಿತರ ಜಮೀನಿಗೆ ರಸ್ತೆ ನಿರ್ಮಿಸಿಕೊಡುವ ಸಂಬಂಧ ಹತ್ತಾರು ವರ್ಷಗಳಿಂದ ಸಭೆಯಲ್ಲಿ ಚರ್ಚಿಸಲಾಗಿದೆಯೇ ಹೊರತು ಯಾವುದೇ ಪರಿಹಾರ ಕ್ರಮವನ್ನು ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಗರದಲ್ಲಿರುವ ಅಂಬೇಡ್ಕರ್ ಸಮುದಾಯ ಭವನದ ಮುಂದೆಯೇ ಫುಟ್‌ಪಾತ್‌ನಲ್ಲಿ ಚಿಲ್ಲರೆ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುತ್ತಿರುವುದರಿಂದ ಭವನದೊಳಗೆ ಬರಲು ಸಮಸ್ಯೆಯಾಗುತ್ತಿದೆ, ತಕ್ಷಣ ತಹಶೀಲ್ದಾರ್ ಅವರು ಈ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಹೆಗ್ಗೆರೆ ಕೃಷ್ಣಪ್ಪ ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆ ನಿರ್ವಹಣೆ ಮಾಡುತ್ತಿರುವ ಈ ಭವನದಲ್ಲಿ ಶೌಚಾಲಯದ ಕೊರತೆ ಇದೆ, ಇರುವ ಶೌಚಾಲಯವನ್ನು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಸರಿಪಡಿಸುತ್ತಿಲ್ಲ ಇದರಿಂದಾಗಿ ಇಲ್ಲಿಗೆ ತರಬೇತಿಗೆ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದ್ದು ತಕ್ಷಣ ಶೌಚಾಲಯವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪಿ.ಎನ್.ರಾಮಯ್ಯ ಆಗ್ರಹಿಸಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ತಲಾ ₹ 40 ಸಾವಿರ ಮೊತ್ತವನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮ ಠೇವಣಿ ಇಡಬೇಕು. ಸ್ಕ್ಯಾವೆಂಜರ್ ಮಕ್ಕಳಿಗೆ ಪ್ರತಿ ತಿಂಗಳು ₹ 2150 ವಿದ್ಯಾರ್ಥಿ ವೇತನ ನೀಡಬೇಕು ಎಂಬ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ಇದುವರೆಗೆ ಒಬ್ಬರಿಗೂ ಠೇವಣಿಯನ್ನಾಗಲಿ, ವಿದ್ಯಾರ್ಥಿ ವೇತನವನ್ನಾಗಲಿ ಮಂಜೂರು ಮಾಡಿಲ್ಲ ಎಂದು ದೂರಿದರು.

ರೆಡ್ಸ್ ಸಂಯೋಜಕ ರಂಗಯ್ಯ ಮಾತನಾಡಿ, ‘ಎಸ್‌ಸಿಪಿ, ಟಿಎಸ್‌ಪಿ ಹಣ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ. ಬಿಲ್ ಆಗುತ್ತಿದೆಯೇ ಹೊರತು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಂಡುತೋಪುಗಳನ್ನು ಲೇಔಟ್ ಮಾಡಿದಂತೆಯೇ ಪರಿಶಿಷ್ಟರಿಗೆ ನಿವೇಶನ ಹಂಚಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಯೋಗಾನಂದ್, ಮುಂದಿನ ಸಭೆಗೆ ಎಲ್ಲ ಇಲಾಖೆಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆ ಮಾಡಿರುವ ಬಗ್ಗೆ ಹಾಗೂ ಇಲ್ಲಿ ಚರ್ಚಿಸಿರುವ ವಿಷಯಗಳನ್ನು ಪರಿಹರಿಸುವುದಾಗಿ ತಿಳಿಸಿದರು.

ಹಿತರಕ್ಷಣಾ ಸಮಿತಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟೀಸ್ ನೀಡುವುದಾಗಿ ಮುಖಂಡರಿಗೆ ಭರವಸೆ ನೀಡಿದರು.

ಸಭೆಯಲ್ಲಿ ತಾ.ಪಂ. ಇಒ ಜೈಪಾಲ್, ಕಂದಾಯ ನಿರೀಕ್ಷಕರಾದ ಜಯಪ್ರಕಾಶ್, ಶಿವಣ್ಣ, ಬಿಇಒ ರಂಗಧಾಮಪ್ಪ, ಬೆಸ್ಕಾಂ ಇಂಜನಿಯರ್ ಷರೀಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.