ADVERTISEMENT

ಸರ್ಕಾರಿ ಜಾಗದಲ್ಲಿ ಬಡಾವಣೆ: ಬಡವರಿಗೆ ನಿವೇಶನ; ಶಾಸಕ ಕೆ.ಎನ್.ರಾಜಣ್ಣ

ಜನಸಂಪರ್ಕ ಸಭೆಯಲ್ಲಿ ಶಾಸಕ ಕೆ.ಎನ್.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:17 IST
Last Updated 13 ನವೆಂಬರ್ 2025, 6:17 IST
ಮಧುಗಿರಿ ತಾಲ್ಲೂಕು ದೊಡ್ಡೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಕೆ.ಎನ್.ರಾಜಣ್ಣ ಅರ್ಹರಿಗೆ ಹಕ್ಕುಪತ್, ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಿದರು
ಮಧುಗಿರಿ ತಾಲ್ಲೂಕು ದೊಡ್ಡೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಕೆ.ಎನ್.ರಾಜಣ್ಣ ಅರ್ಹರಿಗೆ ಹಕ್ಕುಪತ್, ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಿದರು   

ಮಧುಗಿರಿ: ಕ್ಷೇತ್ರದ ಜನರಿಗೆ ಮೂಲ ಸೌಕರ್ಯ ಒದಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಿ ಜಾಗದಲ್ಲಿ ಬಡವಾಣೆಗಳನ್ನು ನಿರ್ಮಿಸಿ ಬಡವರಿಗೆ ನಿವೇಶನ ನೀಡಲಾಗುತ್ತಿದೆ. ಸರ್ಕಾರದಿಂದ ಮನೆ ಮಂಜೂರು ಮಾಡಿಸುವ ಮೂಲಕ ಸೂರು ಒದಗಿಸಲಾಗುತ್ತಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲ್ಲೂಕಿನ ದೊಡ್ಡೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.

ಕೌಶಲ ಕಲಿತರೆ ಈ ಭಾಗದ ವಿದ್ಯಾರ್ಥಿಗಳಿಗೆ ಶೀಘ್ರ ಕೆಲಸ ಸಿಗಲಿದೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ಈ ಭಾಗದಲ್ಲಿ ಜಿಟಿಟಿಸಿ ಕಾಲೇಜು ಪ್ರಾರಂಭಿಸಲಾಗುತ್ತಿದೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜನ ಸಂಪರ್ಕ ಸಭೆಯಲ್ಲಿ ಶೇ.70 ರಷ್ಟು ಕಂದಾಯ ಇಲಾಖೆ ಸಂಬಂಧಿತ ಅಹವಾಲು ಬರುತ್ತವೆ. ಕಳೆದ ವರ್ಷದಿಂದ ಪೌತಿ ಖಾತೆ ಆಂದೋಲನ ಮಾಡುತ್ತಿದ್ದು, ಜಿಲ್ಲೆಯಲ್ಲಿ 33,566 ಅರ್ಜಿ, ಮಧುಗಿರಿ ತಾಲ್ಲೂಕಿನಲ್ಲಿ 1,351 ಅರ್ಜಿ, ಕಳೆದ ಒಂದು ವಾರದಲ್ಲಿ ವಿಲೇವಾರಿ ಮಾಡುವ ಮೂಲಕ ಮೊದಲನೇ ಸ್ಥಾನಕ್ಕೆ ಬರಲು ಶ್ರಮಿಸಲಾಗಿದೆ. ಇನ್ನೂ ಮೂರು ಲಕ್ಷ ಪೌತಿ ಖಾತೆ ಬಾಕಿ ಇದ್ದು, ದಾಖಲೆ ರಹಿತ ಜನ ವಸತಿ ಪ್ರದೇಶಗಳಿವೆ ಎಂದರು.

ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಭೂ ಸ್ವಾಧಿನ ಪ್ರಕ್ರಿಯೆಯಿಂದ ನನೆಗುದಿಗೆ ಬಿದ್ದಿದ್ದು, ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿ.ಪಂ ಸಿಇಒ ಜಿ. ಪ್ರಭು ಮಾತನಾಡಿ, ವರ್ಷಕ್ಕೆ ಒಂದು ಅಥವಾ ಎರಡು ಇಲಾಖೆ ಗುರಿಯಾಗಿಸಿಕೊಂಡು ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಎನ್‌ಆರ್‌ಇಜಿಯಲ್ಲಿ ರಾಜ್ಯಕ್ಕೆ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ₹96 ಕೋಟಿ ವೆಚ್ಚದಲ್ಲಿ ಆರು ಸಾವಿರ ಕಾಮಗಾರಿ ಮಾಡಲಾಗಿದೆ. ಮಧುಗಿರಿ ತಾಲ್ಲೂಕಿನಲ್ಲಿ 50 ಅಂಗನವಾಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 500 ಆಸ್ಪತ್ರೆಗಳನ್ನು ಪ್ರಾರಂಭಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದರು.

ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್, ತಹಶೀಲ್ದಾರ್ ಶ್ರೀನಿವಾಸ್, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ತಾ.ಪಂ ಇಒ ಲಕ್ಷ್ಮಣ್, ಯೋಜನಾ ನಿರ್ದೇಶಕ ಧನಂಜಯ್ ಅಧಿಕಾರಿಗಳಾದ  ಜಗದೀಶ್, ಮಂಜುನಾಥ್, ಹನುಮಂತರಾಯಪ್ಪ, ಹನುಮಂತರಾವ್,  ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಚೌಡಪ್ಪ, ಕೃಷಿಕ ಸಮಾಜದ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಯಾವ ಬಾವುಟ ಹಿಡಿಯಬೇಕು ನೋಡೋಣ’ ‘

2004ರಲ್ಲಿ ನಾನು ಜೆಡಿಎಸ್‌ನಿಂದ ಶಾಸಕನಾಗಿದ್ದಾಗ ಜಿಲ್ಲೆಯಲ್ಲಿ ಕಾಂಗ್ರೆಸ್ ವೈಟ್‌ವಾಶ್ ಆಗಿತ್ತು. ಮತ್ತೆ ಆ ಸಂದರ್ಭ ಬಂದರೂ ಬರಬಹುದು. ಇಂದಿನ ಬೈಕ್ ರ‍್ಯಾಲಿಯಲ್ಲಿ ನಮ್ಮ ಕಾರ್ಯಕರ್ತರು ಸಹ ಕಾಂಗ್ರೆಸ್ ಬಾವುಟ ಹಿಡಿದಿಲ್ಲ. ಏಕೆ ಎನ್ನುವುದು ನನಗೂ ಗೊತ್ತಿಲ್ಲ. ನಾನು ಮುಂದೆ ಯಾವ ಬಾವುಟ ಹಿಡಿಯಬೇಕು ಎಂಬುದನ್ನು ನೋಡೋಣ. ರಾಜಕಾರಣದಲ್ಲಿ ಯಾರೂ ಶತೃಗಳು ಅಲ್ಲ ಮಿತ್ರರೂ ಅಲ್ಲ. ಜನರ ಬೆಂಬಲವೇ ನನಗೆ ಆನೆ ಬಲ. ನಾನು ಜನರನ್ನು ನಂಬಿ ರಾಜಕಾರಣ ಮಾಡುತ್ತಿದ್ದೇನೆ. ನನಗೂ ಮಧುಗಿರಿಗೂ ಯಾವ ಋಣಾನುಬಂಧವೊ ಗೊತ್ತಿಲ್ಲ. ತುಮಕೂರಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಬೇಕು ಎಂದುಕೊಂಡಿದ್ದ ನನಗೆ ಕ್ಷೇತ್ರದ ಜನ ಮಧುಗಿರಿಯಲ್ಲಿ ರಾಜಕೀಯ ಜನ್ಮ ನೀಡಿದರು’ ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.