ಗುಬ್ಬಿ: ತಾಲ್ಲೂಕಿನಲ್ಲಿ ಬಿದ್ದ ಹದಮಳೆಗೆ ಪೂರ್ವ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಿವೆ.
ನಿಟ್ಟೂರು ಹೋಬಳಿ ಎನ್.ಪುರದಲ್ಲಿ ಬುಧವಾರ ಹೊನ್ನಾರು ಹೂಡಿದರು. ಸರಿಯಾದ ಸಮಯಕ್ಕೆ ಪೂರ್ವ ಮುಂಗಾರು ಪ್ರಾರಂಭವಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
‘ಭರಣಿ ಬಂದರೆ ಧರಣಿ ಹಸಿರು’ ಎಂಬ ಮಾತಿನಂತೆ ಮಳೆ ಬಂದ ತಕ್ಷಣ ಗ್ರಾಮೀಣ ಭಾಗದ ರೈತರು ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು, ಅಲಸಂದೆ, ಹರಳು, ತೊಗರಿ ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಮೇವು ಬಿತ್ತನೆಗೆ ಅನುಕೂಲವಾಗುವುದು. ಹೊಲ, ಗದ್ದೆ, ತೋಟಗಳಲ್ಲಿ ಹಸಿರು ಮೇವು ಚಿಗುರುವುದರಿಂದ ಹೊರಗಡೆ ಕುರಿ, ದನ, ಕರುಗಳು ಮೇಯಲು ಮೇವು ದೊರಕುವುದರಿಂದ ರೈತರು ಸಂತೋಷದಲ್ಲಿದ್ದಾರೆ.
ಯುಗಾದಿಯ ನಂತರ ಬೀಳುವ ಮೊದಲ ಮಳೆಯಲ್ಲಿ ಹೊನ್ನಾರು ಹೂಡಿ ಕೃಷಿ ಚಟುವಟಿಕೆಗೆ ಚಾಲನೆ ನೀಡುವ ರೂಢಿ ತಾಲ್ಲೂಕಿನಲ್ಲಿದೆ. ಹದ ಮಳೆ ನಂತರ ನೇಗಿಲು, ನೊಗವನ್ನು ಪೂಜೆ ಮಾಡಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಗ್ರಾಮದ ಸುತ್ತ ಹೊರವಲಯದಲ್ಲಿ ನೇಗಿಲು ಗೆರೆ ಹೊಡೆಯುವ ಮೂಲಕ ಕೃಷಿ ಚಟುವಟಿಕೆಗೆ ಚಾಲನೆ ನೀಡುವರು.
ಗ್ರಾಮದಲ್ಲಿ ತಲೆತಲಾಂತರಗಳಿಂದ ರೂಢಿಸಿಕೊಂಡು ಬಂದಿರುವ ಹೊನ್ನಾರು ಪದ್ಧತಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಂಪ್ರದಾಯದಂತೆ ಎತ್ತುಗಳೊಂದಿಗೆ ನೇಗಿಲು, ನೊಗ ಪೂಜಿಸಿ ಹೊನ್ನಾರು ಹೂಡಲಾಗಿದೆ ಎನ್ನುತ್ತಾರೆ ಪ್ರಭುಶಂಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.