ತುಮಕೂರು: ಸಣ್ಣ ನೀರಾವರಿ ಇಲಾಖೆಯಲ್ಲಿ ಟೆಂಡರ್ ನೀಡುವಲ್ಲಿ ಅಕ್ರಮಗಳು ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಇಲ್ಲಿ ಶುಕ್ರವಾರ ಒತ್ತಾಯಿಸಿದರು.
ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮಗಳು ನಡೆಯುತ್ತಿದ್ದರೂ ಶಾಸಕ ಬಿ.ಸುರೇಶ್‌ಗೌಡ ತಡೆಯುವ ಬದಲು, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಗ್ರಾಮಾಂತರ ಕ್ಷೇತ್ರಕ್ಕೆ ಸಣ್ಣ ನೀರಾವರಿ ಇಲಾಖೆಗೆ ₹1 ಕೋಟಿ ಅನುದಾನ ಬಂದಿದ್ದು, ಮಾರ್ಚ್ 12ರಂದು ಟೆಂಡರ್ ಅಂತಿಮಗೊಳಿಸಲಾಗಿದೆ. ಅಂದೇ ಕಾರ್ಯಾದೇಶ ಕೊಟ್ಟಿದ್ದು, ಕೆಲಸ ಮಾಡದೆ ಮಾರ್ಚ್ 13ರಂದು ಸರ್ಕಾರಕ್ಕೆ ಬಿಲ್ ಸಲ್ಲಿಸಲಾಗಿದೆ. ಮೊದಲ ಬಿಲ್ ₹48 ಲಕ್ಷ, ಎರಡನೇ ಬಿಲ್ ₹32 ಲಕ್ಷವನ್ನು ಒಂದೇ ದಿನಕ್ಕೆ ಸಲ್ಲಿಕೆ ಮಾಡಲಾಗಿದೆ. ಕೆಲಸ ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ. ಆದರೆ ಕೆಲಸವನ್ನೇ ಮಾಡದೆ ಬಿಲ್ ಸಲ್ಲಿಸಲಾಗಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಟೆಂಡರ್‌ನಲ್ಲಿ ಮೂವರು ಭಾಗವಹಿಸಿದ್ದು, ಕಡಿಮೆ ಮೊತ್ತ ನಮೂದಿಸಿದ್ದ ವೆಂಕಟೇಗೌಡ ಎಂಬುವರಿಗೆ ನೀಡದೆ, ಲಿಂಗರಾಜು ಎಂಬುವರಿಗೆ ಗುತ್ತಿಗೆ ಕಾಮಗಾರಿ ಕೊಡಲಾಗಿದೆ. ಇದರಲ್ಲಿ ಕಾರ್ಯಪಾಲಕ ಎಂಜಿನಿಯರ್ ಮೂಡಲಗಿರಿಯಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ ಭಾಗಿಯಾಗಿದ್ದಾರೆ. ಇಷ್ಟೆಲ್ಲ ಭ್ರಷ್ಟಾಚಾರ ನಡೆಯುತ್ತಿದ್ದರೂ, ಕಣ್ಣಿಗೆ ಕಾಣುತ್ತಿದ್ದರೂ ಸುರೇಶ್‌ಗೌಡ ಸುಮ್ಮನಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಗೂಳೂರು ಅಮಾನಿಕೆರೆ ನಿರ್ವಹಣಾ ಕಾಮಗಾರಿಯನ್ನು ಪರಿಶಿಷ್ಟ ಜಾತಿಯವರಿಗೆ ನೀಡುವ ಬಗ್ಗೆ ದಾಖಲೆಯಲ್ಲಿ ನಮೂದಿಸಲಾಗಿದೆ. ಆದರೆ ಅವರಿಗೆ ಕೊಟ್ಟಿಲ್ಲ. ಅಧಿಕಾರಿಗಳನ್ನು ಕೇಳಿದರೆ ತಪ್ಪಾಗಿದೆ ಕ್ಷಮಿಸಿ ಎನ್ನುತ್ತಾರೆ. ನಾಗವಲ್ಲಿ, ಕುಚ್ಚಂಗಿ ಕೆರೆ ಕಾಮಗಾರಿ ಮಾಡದೆ ಹಣ ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಕೋಟ್ಯಂತರ ಮೊತ್ತದ ಕಾಮಗಾರಿ ನಡೆಯುತ್ತಿದ್ದು, ಅದರಲ್ಲಿ ಅವ್ಯವಹಾರ ನಡೆದಿದೆ. ಕೆಲವು ಕಡೆಗಳಲ್ಲಿ ಕಾಮಗಾರಿ ಮಾಡದೆ ಬಿಲ್ ಮಾಡಿಕೊಳ್ಳಲಾಗುತ್ತಿದೆ. ಹಳೆಯ ಕಾಮಗಾರಿ ತೋರಿಸಿ ಬಿಲ್ ಮಾಡಲಾಗುತ್ತಿದೆ. ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಸುರೇಶ್‌ಗೌಡ ಏಕೆ ತಡೆಯುತ್ತಿಲ್ಲ? ಎಂದು ಕೇಳಿದರು.
ಕಾಂಗ್ರೆಸ್ ಮುಖಂಡರಾದ ನಾರಾಯಣಪ್ಪ, ಕೆಂಪಣ್ಣ, ಊರುಕೆರೆ ಉಮೇಶ್, ನರುಗನಹಳ್ಳಿ ವಿಜಯಕುಮಾರ್, ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.