ADVERTISEMENT

ಸರ್ಕಾರದ ಅನುದಾನ ಶ್ರೀಮಂತರ ಪಾಲು: ಜಿ.ಪದ್ಮಾವತಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 4:22 IST
Last Updated 14 ಆಗಸ್ಟ್ 2024, 4:22 IST
ತುಮಕೂರಿನಲ್ಲಿ ಮಂಗಳವಾರ ನಡೆದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು, ನಿಗಮದ ಅಧಿಕಾರಿ ಜಾಹ್ನವಿ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಮಂಗಳವಾರ ನಡೆದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು, ನಿಗಮದ ಅಧಿಕಾರಿ ಜಾಹ್ನವಿ ಉಪಸ್ಥಿತರಿದ್ದರು   

ತುಮಕೂರು: ಸರ್ಕಾರ ನೀಡುವ ಅನುದಾನ ‘ಸಾಹುಕಾರರ’ ಪಾಲಾಗುತ್ತಿದೆ. ಬ್ಯಾಂಕ್‌ ಅಧಿಕಾರಿಗಳು ತಮಗೆ ಬೇಕಾದವರಿಗೆ ಕೋಟ್ಯಂತರ ರೂಪಾಯಿ ಸಾಲ ಮಂಜೂರು ಮಾಡುತ್ತಿದ್ದಾರೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಸೂಟುಬೂಟು ಹಾಕಿಕೊಂಡು ಫೋಸು ಕೊಡುವ ವ್ಯಕ್ತಿಗಳು ಸರ್ಕಾರದ ನೆರವು ಪಡೆಯುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಯಾರ ಶಿಫಾರಸು ಲೆಕ್ಕಿಸದೆ ಅರ್ಹರನ್ನು ಗುರುತಿಸಬೇಕು. ಸರ್ಕಾರದಿಂದ ನಿಗಮಕ್ಕೆ ಬರುವ ಅನುದಾನ ಕಡಿಮೆ ಇದೆ. ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ಸಾಮಾನ್ಯರಿಗೆ ಸೌಲಭ್ಯ ತಲುಪಿಸಲು ಸಾಧ್ಯ ಎಂದರು.

ADVERTISEMENT

ಹಲವು ಕಡೆಗಳಲ್ಲಿ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳು ಶೋಚನೀಯವಾಗಿದ್ದು, ಅವ್ಯವಸ್ಥೆಯ ಕೂಪವಾಗಿವೆ. ಸಿಬ್ಬಂದಿ, ಅಗತ್ಯ ಸೌಲಭ್ಯಗಳಿಲ್ಲ. ಗುಮಾಸ್ತ ಕೆಲಸವನ್ನೂ ಅಧಿಕಾರಿಗಳೇ ಮಾಡಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಸಚಿವರ ಜತೆ ಚರ್ಚಿಸಲಾಗಿದೆ. ಆದಷ್ಟು ಬೇಗ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರ ನಿಗದಿಪಡಿಸಿದ ಗುರಿ ತಲುಪಬೇಕು. ಅನುದಾನ ವಾಪಸ್‌ ಹೋದರೆ ಏನು ಪ್ರಯೋಜನ. ನಿಗಮದ ಹಣ ಬೇರೆ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಆಗದಂತೆ ನೋಡಿಕೊಳ್ಳಬೇಕು, ಅರ್ಹರಿಗೆ ಸೌಲಭ್ಯ ತಲುಪಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಲಹೆ ಮಾಡಿದರು.

‘ಇಲಾಖೆ, ನಿಗಮದಿಂದ ತರಬೇತಿ ಪಡೆದವರು ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ. ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಮಾಲ್, ಇತರೆ ಕಡೆಗಳಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಕೆಎಸ್‌ಆರ್‌ಟಿಸಿ ನೂತನ ಬಸ್‌ ನಿಲ್ದಾಣದಲ್ಲಿ ಮಳಿಗೆ ತೆರೆಯಲು ಅವಕಾಶ ನೀಡಿದರೆ ಅನುಕೂಲವಾಗಲಿದೆ’ ಎಂದು ಮಹಿಳಾ ಸಂಘದ ಶಾಂತಾಕುಮಾರಿ ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು, ನಿಗಮದ ಅಧಿಕಾರಿ ಜಾಹ್ನವಿ ಇತರರು ಹಾಜರಿದ್ದರು.

3 ಸಾವಿರ ಮನೆ ಹಂಚಿಕೆ

ಪ್ರಸಕ್ತ ಸಾಲಿನಲ್ಲಿ ರಾಜ್ಯದ ದೇವದಾಸಿ ಲಿಂಗತ್ವ ಅಲ್ಪಸಂಖ್ಯಾತರಿಗೆ 3 ಸಾವಿರ ಮನೆ ಹಂಚಿಕೆ ಮಾಡಲಾಗುವುದು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ ‘ಕಳೆದ ಸರ್ಕಾರದಲ್ಲಿ ಸ್ಥಗಿತವಾಗಿದ್ದ ಕಿರು ಸಾಲ ಸಮೃದ್ಧಿ ಯೋಜನೆ ಮರು ಜಾರಿ ಮಾಡುವಂತೆ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಲಾಗಿದೆ. ನಿಗಮದಿಂದ ಎರಡನೇ ಬಾರಿಗೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು. ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ಬದಲಾಗಿ ನಿಗಮದ ಮುಖಾಂತರ ಸೌಲಭ್ಯ ವಿತರಿಸುವಂತೆ ಒತ್ತಾಯಿಸಲಾಯಿತು. ಲಿಂಗತ್ವ ಅಲ್ಪಸಂಖ್ಯಾತರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅನ್ನ ಭಾಗ್ಯ ಯೋಜನೆ ಸೌಲಭ್ಯವೂ ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.