
ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಕೆಪಿಎಸ್ ಶಾಲೆ ಆವರಣದಲ್ಲಿ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಹೊನ್ನವಳ್ಳಿಯ ಪ್ರಮುಖ ಬೀದಿಗಳಲ್ಲಿ ಸಮ್ಮೇಳನ ಅಧ್ಯಕ್ಷ ಆಲೂರು ದೊಡ್ಡನಿಂಗಪ್ಪ ದಂಪತಿಯನ್ನು ಕೋಲಾಟ, ವೀರಗಾಸೆ, ಡೊಳ್ಳು ಕುಣಿತ, ಬಸವ ನಗಾರಿ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಜನಪದ ಕಲಾತಂಡಗಳೊಂದಿಗೆ ವೈಭವಯುತ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.
ಸಮ್ಮೇಳನದಲ್ಲಿ ‘ಭಾವಮಂಥನ’ ಕವನ ಸಂಕಲನ, ‘ಹೊನ್ನವಳ್ಳಿಯ ಒಂದು ಸಾಂಸ್ಕೃತಿಕ ಅಧ್ಯಯನ’, ‘ಗಂಗಾಪಾನಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಸಮ್ಮೇಳನಾಧ್ಯಕ್ಷ ಆಲೂರು ದೊಡ್ಡನಿಂಗಪ್ಪ ಮಾತನಾಡಿ, ಪಶುಪಾಲನೆ ಗ್ರಾಮೀಣ ಬದುಕಿಗೆ ಆಧಾರಸ್ತಂಭ. ಇದಕ್ಕೆ ಪೂರಕವಾಗಿ ನೀರಾವರಿ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ. ಎತ್ತಿನಹೊಳೆಯ ಸಾಮರ್ಥ್ಯ ಹೆಚ್ಚಿಸುವ ಮೂಲಕ ಇನ್ನಷ್ಟು ಪ್ರದೇಶಗಳನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸುವುದರಿಂದ ಕೃಷಿ, ಪಶುಪಾಲನೆ ಮತ್ತು ಗ್ರಾಮೀಣ ಆರ್ಥಿಕತೆ ಚೈತನ್ಯಗೊಳ್ಳಲಿದೆ ಎಂದರು.
ತಾಲ್ಲೂಕಿನ ಅನೇಕ ಸಮುದಾಯ ಭವನಗಳು ಬೀಗ ಹಾಕಿರುವ ಸ್ಥಿತಿಯಲ್ಲಿವೆ. ಇವುಗಳಲ್ಲಿ ಕನ್ನಡ ಪತ್ರಿಕೆ, ನಿಯತಕಾಲಿಕೆ ಹಾಗೂ ಪುಸ್ತಕಗಳನ್ನು ಒದಗಿಸುವ ಮೂಲಕ ಜ್ಞಾನ ಕೇಂದ್ರಗಳಾಗಿ ರೂಪಿಸಬೇಕು. ದೇಸಿ ರಾಸುಗಳ ಸಂರಕ್ಷಣೆಗೆ ಪಶುಸಂಗೋಪನಾ ಇಲಾಖೆ ಮುಂದಾಗಬೇಕು. ಹೊನ್ನವಳ್ಳಿಯಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸುವ ಅಗತ್ಯವಿದೆ ಎಂದರು.
ತಾಲ್ಲೂಕಿನ ಜನಪದ ಕಲಾವಿದರಿಗೆ ಪ್ರೋತ್ಸಾಹ, ಐತಿಹಾಸಿಕ ಅಯ್ಯನಬಾವಿಯನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಗುರುಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರ ಜಾತಿ ಆಧಾರಿತ ವ್ಯವಸ್ಥೆ ತೆಗೆದುಹಾಕುವ ದಿಕ್ಕಿನಲ್ಲಿ ಚಿಂತನೆ ನಡೆಸಬೇಕು. ಕನ್ನಡ ಪ್ರೇಮದ ಜೊತೆಗೆ ಭ್ರಾತೃತ್ವ ಬೆಳೆಸುವ ಮನೋಭಾವ ಅಗತ್ಯವಿದೆ. ಪ್ರತಿ ಹಳ್ಳಿ ಹಾಗೂ ಪಂಚಾಯಿತಿ ಮಟ್ಟದಲ್ಲಿ ಸಾಹಿತ್ಯ ಭಂಡಾರ ಕೇಂದ್ರಗಳನ್ನು ತೆರೆದು ದಾಸೋಹಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅಗ್ರಹಾರ ಕೃಷ್ಣಮೂರ್ತಿ, ಕವಿ ಬಿ.ಎಂ.ಶ್ರೀಕಂಠಯ್ಯ ಕನ್ನಡ ಜಾಗೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆಗೆ ಸ್ಥಾನ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ನವೋದಯ ಸಾಹಿತ್ಯ ಚಳವಳಿಗೆ ಬಲ ನೀಡಿದರು. ಪ್ರಾಚೀನ ಸಾಹಿತ್ಯ ಪ್ರಕಾರಗಳಿಗೆ ಹೊಸ ರೂಪ ನೀಡಿ, ಕಾವ್ಯ ಮತ್ತು ಕಾದಂಬರಿಗಳ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
‘ಶಿಕ್ಷಣ ಎತ್ತ ಸಾಗುತ್ತಿದೆ’, ‘ಹೊನ್ನವಳ್ಳಿ ಅಂದು ಇಂದು’ ವಿಚಾರ ಗೋಷ್ಠಿ, ಕವಿಗೋಷ್ಠಿಗಳು ನಡೆದವು.
ತಹಶೀಲ್ದಾರ್ ಮೋಹನಕುಮಾರ್ ರಾಷ್ಟ್ರಧ್ವಜ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸುದರ್ಶನ್ ನಾಡಧ್ವಜ, ಹೊನ್ನವಳ್ಳಿ ಗ್ರಾ.ಪಂ ಅಧ್ಯಕ್ಷ ಎಚ್.ಆರ್.ಪುರುಷೋತ್ತಮ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ, ಸಾಹಿತಿ ಬೀಜನಹಳ್ಳಿ ಕರೀಗೌಡ, ರಂಗನಿರ್ದೇಶಕ ಹೊನ್ನವಳ್ಳಿ ನಟರಾಜು, ಸಾಹಿತಿ ರಾಜಪ್ಪದಳವಾಯಿ, ರಂಗಾಯಣ ನಿರ್ಧೇಶಕ ತಿಪಟೂರು ಸತೀಶ್, ಧರ್ಮೇಂದ್ರ ಅರಸ್, ಕೆಪಿಸಿಸಿ ಸದಸ್ಯ ವಿ.ಯೋಗೀಶ್, ಪ್ರಾಂಶುಪಾಲ ಸಂತೋಷ್, ತಾಲ್ಲೂಕು ಕಾರ್ಯದರ್ಶಿ ಮಂಜಪ್ಪ, ಶಾರದಮ್ಮ, ದಿವಾಕರ್, ಬಸವರಾಜು, ಸೋಮಶೇಖರ್, ನಾಗರಾಜು ಹಾಗೂ ಸಾವಿರಾರು ಸಾಹಿತ್ಯಾಸ್ತಕರು ಪಾಲ್ಗೊಂಡಿದ್ದರು.
ಸಣ್ಣ ಸಾಂಸ್ಕೃತಿಕ ಸಮೂಹಗಳ ದೊಡ್ಡ ಕೊಡುಗೆ
ಚಿತ್ರನಟ ಅಚ್ಯುತಕುಮಾರ್ ಮಾತನಾಡಿ ವ್ಯಕ್ತಿಗಳು ಜಗತ್ತನ್ನು ನೋಡುವ ಜೊತೆಗೆ ತಮ್ಮನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಸಣ್ಣ ಸಣ್ಣ ಸಾಂಸ್ಕೃತಿಕ ಸಮೂಹ ರಂಗತಂಡ ಅಧ್ಯಯನ ವಲಯಗಳು ನಡೆಸುತ್ತಿರುವ ಪ್ರಯತ್ನಗಳೇ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿವೆ ಎಂದು ಅಭಿಪ್ರಾಯಪಟ್ಟರು.
ಗಂಗಾಪಾನಿ ತಳಿ ರಕ್ಷಿಸಿ
ನಗರಕ್ಕೆ ತುರ್ತಾಗಿ ಕುಡಿಯುವ ನೀರಿನ ಯೋಜನೆ ಅಗತ್ಯವಿದೆ. ನೊಣವಿನಕೆರೆ ಯೋಜನೆ ಆರಂಭಿಕ ಹಂತದಲ್ಲಿದೆ. ಯೋಜನೆಯನ್ನು ಆದ್ಯತೆಯಾಗಿ ಪೂರ್ಣಗೊಳಿಸಿ ಜನರಿಗೆ ತಕ್ಷಣ ಕುಡಿಯುವ ನೀರು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ತೆಂಗು ಪಾರ್ಕ್ ಬಜೆಟ್‌ನಲ್ಲಿ ಘೋಷಣೆಯಾದರೂ ಜಾರಿಯಾಗಿಲ್ಲ. ಹೊನ್ನವಳ್ಳಿಯ ಗಂಗಾಪಾನಿ ಎಳನೀರು ತಳಿ ಅಳಿವಿನ ಅಂಚಿನಲ್ಲಿದ್ದು ಇಲಾಖೆ ವಿಶೇಷ ಯೋಜನೆ ರೂಪಿಸಿ ಈ ತಳಿಯನ್ನು ಸಂರಕ್ಷಿಸಬೇಕು ಎಂದು ಆಲೂರು ದೊಡ್ಡನಿಂಗಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.