ADVERTISEMENT

ಸದಾ ದಟ್ಟಣೆ: ಸಂಚಾರ ಸಂಕಟ

ಹದಗೆಟ್ಟ ಸಂಚಾರ ವ್ಯವಸ್ಥೆ l ಸಾರ್ವಜನಿಕರ ಪರದಾಟ l ಪಾದಚಾರಿ ಮಾರ್ಗದಲ್ಲೆ ವಾಹನ ನಿಲುಗಡೆ

ಕೆ.ಆರ್.ಜಯಸಿಂಹ
Published 7 ಮಾರ್ಚ್ 2021, 3:52 IST
Last Updated 7 ಮಾರ್ಚ್ 2021, 3:52 IST
ಪಾವಗಡದ ಶಿರಾ ರಸ್ತೆಯಲ್ಲಿಯೇ ಬೃಹತ್ ವಾಹನ ನಿಲ್ಲಿಸಿರುವುದು
ಪಾವಗಡದ ಶಿರಾ ರಸ್ತೆಯಲ್ಲಿಯೇ ಬೃಹತ್ ವಾಹನ ನಿಲ್ಲಿಸಿರುವುದು   

ಪಾವಗಡ: ಪಟ್ಟಣದಲ್ಲಿ ವಾಹನ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಅತಿಕ್ರಮಿಸಿರುವು­ದರಿಂದ ರಸ್ತೆಯಲ್ಲಿಯೇ ವಾಹನ ನಿಲುಗಡೆ ಮಾಡಬೇಕಿದೆ. ಸದಾ ವಾಹನಗಳಿಂದ ಗಿಜಿಗುಡುವ ಪ್ರಮುಖ ರಸ್ತೆಯಲ್ಲಿಯೇ ಜನರು ನಡೆದಾಡಬೇಕಿದೆ.

ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸೋಲಾರ್ ಪಾರ್ಕ್ ಕಾಮಗಾರಿ ಆರಂಭವಾದಾಗಿನಿಂದ ಬೃಹತ್ ವಾಹನಗಳ ಸಂಚಾರ ಹೆಚ್ಚಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಶನೈಶ್ಚರ ದೇಗುಲಕ್ಕೆ ವರ್ಷವಿಡೀ ಭಕ್ತರು ಬರುತ್ತಾರೆ. ಹಾಗಾಗಿ ಪಟ್ಟಣಕ್ಕೆ ಬರುವ ವಾಹನಗಳ ಸಂಖ್ಯೆ ಏರುಗತಿಯಲ್ಲಿದೆ.

ಅವೈಜ್ಞಾನಿಕ ರಸ್ತೆ ಕಾಮಗಾರಿ: ಆದರೆ ಸಂಚಾರಿ ವ್ಯವಸ್ಥೆ ಮಾತ್ರ ಹಳೆಯ ಸ್ಥಿತಿಯಲ್ಲಿಯೇ ಇದೆ. ಹೊಸದಾಗಿ ರಸ್ತೆ ನಿರ್ಮಾಣವಾದರೂ ವಾಹನ ನಿಲುಗಡೆಗಾಗಿ ಸಮರ್ಪಕ ವ್ಯವಸ್ಥೆ ಇಲ್ಲ. ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು, ಗುತ್ತೆಗೆದಾರರು ಸಂಪೂರ್ಣವಾಗಿ ರಸ್ತೆ ವಿಸ್ತರಣೆ ಮಾಡದೆ ಇರುವುದು ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ದೂರು.

ADVERTISEMENT

ಎಲ್ಲೆಂದರಲ್ಲಿ ವಾಹನನಿಲುಗಡೆ: ತಹಶೀಲ್ದಾರ್ ಕಚೇರಿ ಮುಂಭಾಗ, ಶಿರಾ ರಸ್ತೆ, ಎಸ್‌ಎಸ್‌ಕೆ ಸಮುದಾಯ ಭವನದ ಮುಂಭಾಗ, ಶನೈಶ್ಚರ ವೃತ್ತ, ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳು, ಮಧುಗಿರಿ, ಪೆನುಗೊಂಡ ಕೋಟೆ ಬಾಗಿಲು ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಈ ಮಾರ್ಗದಲ್ಲಿ ಸಂಚರಿಸುವುದು ತ್ರಾಸದಾಯಕ.

ಈವರೆಗೆ ಪಟ್ಟಣದ ಯಾವುದೇ ರಸ್ತೆಯನ್ನು ಏಕ ಮುಖ ಸಂಚಾರಿ ರಸ್ತೆ ಎಂದು ಘೋಷಿಸಿಲ್ಲ. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಯಾವುದೇ ನಿರ್ಬಂಧವಿಲ್ಲ. ಯಾರು ಎಲ್ಲಿ ಬೇಕಾದರೂ ವಾಹನ ನಿಲ್ಲಿಸಿಕೊಳ್ಳ ಬಹುದು. ಇದು ತುರ್ತಾಗಿ ಬೇರೆಡೆ ಹೋಗುವವರಿಗೆ ಅಡ್ಡಿಯಾಗಿ ಪರಿಣಮಿ ಸುತ್ತದೆ. ತುರ್ತು ವಾಹನಗಳು ಸಂಚರಕ್ಕೂ ಸಮಸ್ಯೆಯಾಗಿ ಪರಿಣಮಿಸಿದೆ.

ಚಳ್ಳಕೆರೆ, ಚಿತ್ರದುರ್ಗ, ಆಂಧ್ರದ ವಿವಿಧ ಪ್ರದೇಶಗಳಿಂದ ಪಟ್ಟಣದ ಮೂಲಕ ಹಾದು ಹೋಗುವವರಿಗೆ ಇಲ್ಲಿನ ಅವ್ಯವಸ್ಥೆ ಹಿಂಸೆಯಾಗಿ ಮಾರ್ಪಟ್ಟಿದೆ. ಕೊರಟಗೆರೆ, ಮಧುಗಿರಿಯಲ್ಲಿ ನಿರ್ಮಿಸಿದಂತೆ ವರ್ತುಲ, ಬೈಪಾಸ್ ರಸ್ತೆ ಇಲ್ಲದ ಕಾರಣ ಅನ್ಯ ಮಾರ್ಗವಿಲ್ಲದೆ ಪಟ್ಟಣವನ್ನು ದಾಟಿಕೊಂಡೇ ಹೊರ ಹೋಗಬೇಕು.

ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಲ್ಲಿ ವಿಫಲ: ಪಟ್ಟಣದಲ್ಲಿ ಈವರೆಗೆ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಲ್ಲಿ ಪುರಸಭೆ ಅಧಿಕಾರಿ ಗಳು, ಪೊಲೀಸರು ವಿಫಲರಾಗಿದ್ದಾರೆ. ಇದರಿಂದ ಅಪಘಾತಗಳು, ವಾಹನ ಕಳ್ಳತನ, ಸರಗಳ್ಳದಂತಹ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ.

ಅತಿ ವೇಗ: ಪಟ್ಟಣದ ಪ್ರಮುಖ ರಸ್ತೆ­ಗಳಷ್ಟೇ ಅಲ್ಲದೆ, ಕೆಲವು ಬಡಾವಣೆಗಳ ರಸ್ತೆಗಳಲ್ಲೂ ಯುವಕರು ದ್ವಿಚಕ್ರ ವಾಹನಗಳನ್ನು ಅತಿವೇಗದಿಂದ ಅಪಾಯಕಾರಿಯಾಗಿ ಓಡಿಸುತ್ತಿದ್ದಾರೆ. ಹೆಚ್ಚು ಶಬ್ಧ ಬರುವಂತ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ವಾಹನ ಓಡಿಸಲಾಗುತ್ತಿದೆ. ಇಂತಹ ಹುಚ್ಚಾಟಗಳಿಗೆ ಶೀಘ್ರ ಕಡಿವಾಣ ಹಾಕ­ಬೇಕು ಎನ್ನುವುದು ನಗರ ನಿವಾಸಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.